ADVERTISEMENT

28,840 ಉದ್ಯೋಗಗಳಿಗೆ ಬೇಡಿಕೆ

ಉದ್ಯೋಗ ಮೇಳ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2024, 15:50 IST
Last Updated 6 ಸೆಪ್ಟೆಂಬರ್ 2024, 15:50 IST
ದೇವನಹಳ್ಳಿ ಜಿಲ್ಲಾಡಳಿತ ಭವನದಲ್ಲಿ ನಡೆದ ಉದ್ಯೋಗ ಮೇಳದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಎನ್‌.ಶಿವಶಂಕರ ಮಾತನಾಡಿದರು
ದೇವನಹಳ್ಳಿ ಜಿಲ್ಲಾಡಳಿತ ಭವನದಲ್ಲಿ ನಡೆದ ಉದ್ಯೋಗ ಮೇಳದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಎನ್‌.ಶಿವಶಂಕರ ಮಾತನಾಡಿದರು   

ದೇವನಹಳ್ಳಿ: ಸೆಪ್ಟೆಂಬರ್ 13ರಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಉದ್ಯೋಗ ಮೇಳಕ್ಕೆ ಇದುವರೆಗೂ 116 ಕಂಪನಿಗಳು ನೋಂದಾಯಿಸಿಕೊಂಡಿವೆ. ವಿವಿಧ ಕಂಪನಿ ಹಾಗೂ ಏಜೆನ್ಸಿ ವತಿಯಿಂದ 28,840 ಉದ್ಯೋಗಗಳಿಗೆ ಬೇಡಿಕೆ ಇದೆ ಎಂದು ಜಿಲ್ಲಾಧಿಕಾರಿ ಎನ್.ಶಿವಶಂಕರ್ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ನಡೆದ ಉದ್ಯೋಗ ಮೇಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳದಲ್ಲಿ ಅಂದಾಜು 120ಕ್ಕೂ ಅಧಿಕ ನಿಯೋಜಕರು,ಕಂಪನಿಗಳು ಹಾಗೂ 15,000 ಉದ್ಯೋಗಾಂಕ್ಷಿಗಳು ಭಾಗವಹಿಸುವ ಗುರಿ ಇದೆ. ಇದುವರೆಗೂ ನೇರ ಸಂದರ್ಶನ ಮೂಲಕ ಆಯ್ಕೆಗೆ ಅಂದಾಜು 8,000 ಉದ್ಯೋಗ ಬೇಡಿಕೆ ಇದೆ. ಏಜೆನ್ಸಿ ಮೂಲಕ ಆಯ್ಕೆಗೆ 20,000 ಉದ್ಯೋಗಕ್ಕೆ ಬೇಡಿಕೆ ಇದೆ ಎಂದು ಮಾಹಿತಿ ನೀಡಿದರು.

ADVERTISEMENT

ನಗರಸಭೆ ಮತ್ತು ಪುರಸಭೆ ವ್ಯಾಪ್ತಿಗಳಲ್ಲಿ 2000ದಿಂದ 3000 ಉದ್ಯೋಗಾಂಕ್ಷಿಗಳು ನೋಂದಣಿ ಮಾಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಸ್ಥಳದಲ್ಲಿಯೇ ನೋಂದಣಿ ವ್ಯವಸ್ಥೆ ಕಲ್ಪಿಸಿ, ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಸಂದರ್ಶನಕ್ಕೆ ತೆರಳಲು ಎನ್.ಎಸ್.ಎಸ್, ಎನ್.ಸಿ.ಸಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನ್ನು ಸಹಾಯಕರನ್ನಾಗಿ ನೇಮಿಸಿಕೊಳ್ಳಲು ಸೂಚನೆ ನೀಡಿದರು.

ಎಸ್ಎಸ್ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಎಂಜಿನಿಯರಿಂಗ್, ಯಾವುದೇ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದಿರುವ ಮತ್ತು ವಿವಿಧ ತರಬೇತಿ ಸಂಸ್ಥೆಗಳಲ್ಲಿ ಕೌಶಲ ತರಬೇತಿ ಪಡೆದ ಅಭ್ಯರ್ಥಿಗಳು ಮೇಳದಲ್ಲಿ ಭಾಗವಹಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಪಂ ಸಿಇಒ ಕೆ.ಎನ್ ಅನುರಾಧ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಅಮರೇಶ್‌, ಜಿ.ಪಂ ಉಪಕಾರ್ಯದರ್ಶಿ ಟಿ.ಕೆ ರಮೇಶ್, ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕರಾದ ನರೇಂದ್ರ ಬಾಬು, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಜಗನ್ನಾಥ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಉದ್ಯೋಗ ಮೇಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.