ADVERTISEMENT

ಪ್ಲಾಸ್ಟಿಕ್‌ ಹೂ ನಿಷೇಧಕ್ಕೆ ಒತ್ತಾಯ

ಆನೇಕಲ್‌ನಲ್ಲಿ ಪುಷ್ಪಕೃಷಿ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 4:50 IST
Last Updated 7 ಫೆಬ್ರುವರಿ 2023, 4:50 IST
ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಪುಷ್ಪಕೃಷಿಯ ವಿಚಾರ ಸಂಕಿರಣ ನಡೆಯಿತು
ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಪುಷ್ಪಕೃಷಿಯ ವಿಚಾರ ಸಂಕಿರಣ ನಡೆಯಿತು   

ಆನೇಕಲ್: ತಾಲ್ಲೂಕಿನ ಚಂದಾಪುರದಲ್ಲಿ ಫ್ಲೋರೆನ್ಸ್‌ ಫ್ಲೋರಾ ಸಂಸ್ಥೆ ಮತ್ತು ಆನೇಕಲ್‌ ತಾಲ್ಲೂಕು ಹಸಿರು ಮನೆ ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದಿಂದ ಪುಷ್ಪಕೃಷಿಯ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿತು.

ಹಸಿರು ಮನೆ ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಣ್ಣ ಮಾತನಾಡಿ, ಪುಷ್ಪಕೃಷಿಗೆ ಪ್ಲಾಸ್ಟಿಕ್‌ ಹೂವುಗಳ ಹಾವಳಿಯು ಅಡ್ಡಿಯಾಗಿದೆ. ಹಾಗಾಗಿ ಪ್ಲಾಸ್ಟಿಕ್‌ ಹೂವುಗಳ ನಿಷೇಧ ಮಾಡುವ ನಿಟ್ಟಿನಲ್ಲಿ ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಹೂವು ರಫ್ತಿನಲ್ಲಿ ಕರ್ನಾಟಕ ದೇಶದಲ್ಲಿ ಉತ್ತಮ ಸ್ಥಾನದಲ್ಲಿದೆ. ಸರ್ಕಾರ ಪುಷ್ಪಕೃಷಿಯಲ್ಲಿ ತೊಡಗುವ ರೈತರಿಗೆ ಹೆಚ್ಚಿನ ನೆರವು ನೀಡುತ್ತಿದೆ. ಇದನ್ನು ಬಳಸಿಕೊಂಡು ಲಾಭ ಗಳಿಸಬೇಕು ಎಂದರು.

ADVERTISEMENT

ವಿದ್ಯಾವಂತ ಯುವಕರು ಕೃಷಿಯತ್ತ ಆಸಕ್ತಿ ತೋರಬೇಕು. ಕೃಷಿ ಪದವೀಧರರು ಪದವಿ ಪಡೆದ ನಂತರ ಗ್ರಾಮೀಣ ಭಾಗಗಳಲ್ಲಿ ರೈತರಿಗೆ ವೈಜ್ಞಾನಿಕ ಕೃಷಿಯ ಬಗ್ಗೆ ಅರಿವು ಮೂಡಿಸಬೇಕು. ತಂತ್ರಜ್ಞಾನದ ಬಳಕೆಯಿಂದ ಉತ್ಪಾದನೆಯಲ್ಲಿ ಹೆಚ್ಚಳ ಮತ್ತು ಮಾರುಕಟ್ಟೆಯಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಫ್ಲೋರೆನ್ಸ್‌ ಫ್ಲೋರಾ ಸಂಸ್ಥೆ ಮುಖ್ಯಸ್ಥ ಎಸ್‌.ಕೆ.ಗುಟುಗುಟಿಯಾ ಮಾತನಾಡಿ, ಪುಷ್ಪಕೃಷಿಯ ಅಭಿವೃದ್ಧಿಗೆ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಮಾರುಕಟ್ಟೆಯಲ್ಲಿ ಹೂವುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಬೇಡಿಕೆಗೆ ತಕ್ಕಂತೆ ಉತ್ಪಾದನೆ ಮಾಡಿದರೆ ಅಧಿಕ ಲಾಭಗಳಿಸಬಹುದು ಎಂದರು.

ಪುಷ್ಪಕೃಷಿಯಲ್ಲಿ ವೈಜ್ಞಾನಿಕ ವಿಧಾನ ಅಳವಡಿಸಿಕೊಳ್ಳಬೇಕು. ಬೆಳೆಗಳಿಗೆ ತಕ್ಕಂತೆ ವಾತಾವರಣ ನಿರ್ಮಿಸಬೇಕು. ಹಸಿರು ಮನೆ ಗ್ರೀನ್‌ ಹೌಸ್‌ ನಿರ್ಮಿಸಿ ಜರ್ಬೆರಾ, ಆರ್ಕಿಡ್ಸ್‌, ಅಂಥುರಿಯಮ್‌ ಅಂತಹ ವಿವಿಧ ಹೂವಿನ ತಳಿಗಳನ್ನು ಬೆಳೆಯಬಹುದು ಎಂದರು.

ಮುಂದಿನ ಹತ್ತು ವರ್ಷಗಳಲ್ಲಿ ಪುಷ್ಪ ಕೃಷಿಯಲ್ಲಿ ಕ್ರಾಂತಿ ಉಂಟಾಗುತ್ತದೆ. ಉತ್ತರ ಕೊರಿಯಾ, ಜಪಾನ್‌ನಂತ ದೇಶಗಳು ಪುಷ್ಪ ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿವೆ. ಭಾರತದಲ್ಲಿಯೂ ಪುಷ್ಪಕೃಷಿಗೆ ಹೆಚ್ಚಿನ ಬೇಡಿಕೆ ಉಂಟಾಗುತ್ತಿದ್ದು ರೈತರು ಪುಷ್ಪಕೃಷಿಯತ್ತ ಆಸಕ್ತಿ ತೋರುತ್ತಿದ್ದಾರೆ. ಹಾಗಾಗಿ ರೈತರಿಗೆ ತರಬೇತಿ, ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಫ್ಲೋರೆನ್ಸ್‌ ಫ್ಲೋರಾ ಸಂಸ್ಥೆ ಮುಖ್ಯಸ್ಥ ಎಸ್‌.ಕೆ.ಗುಟುಗುಟಿಯಾ ಹೇಳಿದರು.

ರಗತಿಪರ ರೈತ ಸುಬ್ಬಣ್ಣ, ಫ್ಲೋರೆನ್ಸ್‌ ಫ್ಲೋರಾ ಸಂಸ್ಥೆಯ ರೋನೆಕ್‌ ಗುಟುಗುಟಿಯಾ, ಪುಷ್ಪ ವಿಜ್ಞಾನಿ ಎಡ್ವಿನ್‌, ಹಸಿರು ಮನೆ ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಲೋಕೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.