ADVERTISEMENT

ಜಿಲ್ಲಾ ನ್ಯಾಯಾಲಯಕ್ಕೆ ಮಂಜೂರಾದ ಜಾಗ ಸರ್ವೆಗೆ ರೈತರ ಅಡ್ಡಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 18:55 IST
Last Updated 28 ನವೆಂಬರ್ 2025, 18:55 IST
ದೇವನಹಳ್ಳಿ ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಸರ್ಕಾರಿ ಆಸ್ಪತ್ರೆಯ ಮುಂಭಾಗ ಜಿಲ್ಲಾ ನ್ಯಾಯಾಲಯಕ್ಕೆ ಮಂಜೂರಾದ ಜಾಗದ ಸರ್ವೆ ಕಾರ್ಯ ನಡೆಯಿತು.
ದೇವನಹಳ್ಳಿ ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಸರ್ಕಾರಿ ಆಸ್ಪತ್ರೆಯ ಮುಂಭಾಗ ಜಿಲ್ಲಾ ನ್ಯಾಯಾಲಯಕ್ಕೆ ಮಂಜೂರಾದ ಜಾಗದ ಸರ್ವೆ ಕಾರ್ಯ ನಡೆಯಿತು.   

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯಕ್ಕಾಗಿ ಮಂಜೂರಾಗಿರುವ ಜಾಗದ ಸರ್ವೆ ಕಾರ್ಯವನ್ನು ಬಿಗಿ ಪೊಲೀಸ್‌ ಬಂದೋಬಸ್ತ್‌ನಲ್ಲಿ ನಡೆಸಲಾಯಿತು.

ಪಟ್ಟಣದ ಹೊರ ವಲಯದಲ್ಲಿರುವ ವಿಜಯಪುರ ರಸ್ತೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಎದುರಿನ ಜಾಗದಲ್ಲಿ ನಡೆಯುತ್ತಿದ್ದ ಸರ್ವೆಗೆ ರೈತರು ಕೆಲ ಸಮಯ ಅಡ್ಡಿ ಪಡಿಸಿದರು.

ನ್ಯಾಯಾಲಯಕ್ಕಾಗಿ ಮಂಜೂರು ಮಾಡಲಾಗಿರುವ ಜಾಗದಲ್ಲಿ ಸ್ಥಳೀಯರಿಗೆ ಈಗಾಗಲೇ ಸಾಗುವಳಿ ಚೀಟಿ ನೀಡಲಾಗಿದೆ. ಈಗ ನ್ಯಾಯಾಲಯಕ್ಕೆ ಇದೇ ಜಾಗ ಮಂಜೂರು ಮಾಡುವ ಮೂಲಕ ‌ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ರೈತರು ದೂರಿದರು. ಈ ಜಾಗದ ಕುರಿತು ನ್ಯಾಯಾಲಯದಲ್ಲಿ ಪ್ರಕರಣವಿದೆ ಎಂದು ಆರೋಪಿಸಿ ಸ್ಥಳೀಯರು ಕೆಲಕಾಲ ಸರ್ವೆ ಕೆಲಸಕ್ಕೆ ಅಡ್ಡಿ ಪಡಿಸಿದರು.

ADVERTISEMENT

.

ದೇವನಹಳ್ಳಿ ವಕೀಲರ ಸಂಘದ ಪದಾಧಿಕಾರಿಗಳು ಸ್ಥಳದಲ್ಲಿ ನಿಂತು ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ಜಿಲ್ಲಾ ನ್ಯಾಯಾಲಯಕ್ಕೆ ಮಂಜೂರು ಮಾಡಲಾಗಿರುವ ಸ್ಥಳದಲ್ಲಿ ಸರ್ವೆ ಕಾರ್ಯಕ್ಕೆ ಅಡೆತಡೆಯಾಗದಂತೆ ಎಚ್ಚರಿಕೆ ವಹಿಸಿದರು.

ಪಟ್ಟಣದ ಗಡಿಯಿಂದ 3 ಕಿ.ಮೀ ವ್ಯಾಪ್ತಿಯಲ್ಲಿರುವ ಗೋಮಾಳ ಜಾಗದಲ್ಲಿ ಸಾಗುವಳಿ ಚೀಟಿ ನೀಡಿರುವುದು ಕಂದಾಯ ಇಲಾಖೆಯ ಅಧಿಕಾರಿಗಳಿಂದ ಆಗಿರುವ ಎಡವಟ್ಟು, ಕಾನೂನು ರೀತ್ಯಾ ಇದು ಅಮಾನ್ಯವಾಗಿದೆ. ನ್ಯಾಯಾಲಯಕ್ಕೆ ಮಂಜೂರು ಮಾಡಿರುವ ಜಾಗ ಗುರುತಿಸುತ್ತಿದ್ದಾರೆ ಎಂದು ಸರ್ವೆ ಕಾರ್ಯಕ್ಕೆ ಅಡ್ಡಿಪಡಿಸುತ್ತಿದ್ದ ರೈತರಿಗೆ ಅಲ್ಲಿದ್ದ ವಕೀಲರು ಮನವೊಲಿಕೆ ಮಾಡಿದರು.

ಈಗಾಗಲೇ ಜಿಲ್ಲಾ ನ್ಯಾಯಾಲಯಕ್ಕೆ ಮಂಜೂರಾಗಿರುವ ಒಟ್ಟು 9 ಎಕರೆ 36 ಗುಂಟೆ ಜಾಗದ ಪೈಕಿ 3 ಎಕರೆ ಪ್ರದೇಶವನ್ನು ಹಸ್ತಾಂತರ ಮಾಡಿದ್ದು, ಗುರುವಾಗ 6 ಎಕರೆ 20 ಗುಂಟೆ ಜಾಗವನ್ನು ಗುರುತಿಸಲಾಗಿದೆ. ಒಟ್ಟು ಜಾಗಕ್ಕೆ ಭದ್ರತೆ ದೃಷ್ಟಿಯಿಂದ ತಂತಿ ಬೇಲಿ ಹಾಕುವ ಕಾರ್ಯ ಪ್ರಾರಂಭವಾಗಬೇಕಿದೆ.

ನ್ಯಾಯಾಲಯಕ್ಕಾಗಿ ಜಾಗ ಗುರುತಿಸಲು ಸರ್ವೆ ಅಧಿಕಾರಿಗಳು ಕಾರ್ಯಾಚರಣೆ ಮಾಡುವ ಸಂದರ್ಭದಲ್ಲಿ ಅದಕ್ಕೆ ಅಡಿಪಡಿಸಲು ಮುಂದಾದವರು ಏಕಾ ಏಕಿ ಕಂದಾಯ ಅಧಿಕಾರಿಗಳೊಂದಿಗೆ ಗಲಾಟೆ ಮಾಡಿದರು. ಪೊಲೀಸರು ಸಾಕಷ್ಟು ಬಾರಿ ಸ್ಥಳೀಯರನ್ನು ನಿಯಂತ್ರಣ ಮಾಡಲು ಮುಂದಾದರು. ರಾಜಸ್ವ ನಿರೀಕ್ಷಕ ಮಹೇಶ್ ಆಚಾರಿ ಅವರನ್ನು ಸುತ್ತವರೆದಿದ್ದ ಗುಂಪು ಸರ್ವೆ ಕಾರ್ಯ ಮಾಡದಂತೆ ತಾಕೀತು ಮಾಡಿ ಎಂದು ಒತ್ತಡ ಹೇರಿದರು. ಬೆಳಿಗ್ಗೆಯಿಂದ ಸಂಜೆ ವರೆಗೂ ಗಲಾಟೆ ನಿಯಂತ್ರಿಸುವಲ್ಲಿ ಅಧಿಕಾರಿಗಳು ಹೈರಾಣದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.