ADVERTISEMENT

ದೇವನಹಳ್ಳಿ | ಹೈನುಗಾರಿಕೆಗೆ ರೈತರು ಆದ್ಯತೆ ನೀಡಲಿ: ಸಚಿವ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 4:23 IST
Last Updated 21 ಜನವರಿ 2026, 4:23 IST
ದೇವನಹಳ್ಳಿಯಲ್ಲಿ ನಡೆದ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ 48 ಲೀಟರ್ ಹಾಲು ಕರೆದ ಮಾಳೀಗೆನಹಳ್ಳಿ ಲೋಕೇಶ್‌ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಪ್ರಶಸ್ತಿ ನೀಡಿ ಅಭಿನಂದಿಸಿದರು. ಬಮುಲ್ ನಿರ್ದೇಶಕ ಡಿ.ಕೆ. ಸುರೇಶ್‌ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು 
ದೇವನಹಳ್ಳಿಯಲ್ಲಿ ನಡೆದ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ 48 ಲೀಟರ್ ಹಾಲು ಕರೆದ ಮಾಳೀಗೆನಹಳ್ಳಿ ಲೋಕೇಶ್‌ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಪ್ರಶಸ್ತಿ ನೀಡಿ ಅಭಿನಂದಿಸಿದರು. ಬಮುಲ್ ನಿರ್ದೇಶಕ ಡಿ.ಕೆ. ಸುರೇಶ್‌ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು    

ದೇವನಹಳ್ಳಿ: ಗ್ರಾಮಾಂತರ ಜಿಲ್ಲೆ ರೇಷ್ಮೆ ಮತ್ತು ಹೈನುಗಾರಿಕೆ ಕ್ಷೇತ್ರಗಳಿಗೆ ಹೆಸರುವಾಸಿಯಾಗಿದೆ. ರೈತರು ಹಾಲು ಉತ್ಪಾದನೆ ಜತೆಗೆ ರೇಷ್ಮೆ ಕೃಷಿಗೂ ಹೆಚ್ಚಿನ ಆದ್ಯತೆ ನೀಡಿದರೆ ಮಾತ್ರ ಆರ್ಥಿಕವಾಗಿ ಸ್ಥಿರತೆ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಈಚೆಗೆ ವೇಣುಗೋಪಾಲಸ್ವಾಮಿ ಗೋಪಾಲಕರ ಸಂಘ, ಬೆಂಗಳೂರು ಹಾಲು ಒಕ್ಕೂಟ (ಬಮುಲ್) ಹಾಗೂ ಪಶುಪಾಲನಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ರೈತರು ಹಾಲು ಉತ್ಪಾದನೆ ಹೆಚ್ಚಿಸಲು ಬಮುಲ್‌ನಿಂದ ಅಗತ್ಯ ಸಹಕಾರ ಸಿಗಲಿದೆ. ಬಮುಲ್‌ ಅಧ್ಯಕ್ಷರು ರೈತ ಕುಟುಂಬದವರು. ರೈತರ ಕಷ್ಟ–ಸುಖ ಅರಿತಿದ್ದಾರೆ. ಹಾಲಿನ ಗುಣಮಟ್ಟ ಕಾಪಾಡುವ ಜತೆಗೆ ಉತ್ಪಾದನೆ ಹೆಚ್ಚಿಸಲು ಬೇಕಾದ ಕ್ರಮ ಕೈಗೊಂಡು ಹಾಲು ಉತ್ಪಾದಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಿದ್ದಾರೆ ಎಂದರು.

ADVERTISEMENT

ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಮಾತನಾಡಿ, ಗೋಪಾಲಕರು ಹೆಮ್ಮೆಯಿಂದ ‘ನಾನು ರೈತ’ ಎಂದು ಹೇಳಿಕೊಳ್ಳಬೇಕು. ಬಹುಮಾನಕ್ಕಿಂತ ಹಸುಗಳ ಪಾಲನೆ–ಪೋಷಣೆ ಮುಖ್ಯ. ಕೃಷಿಯಿಂದ ಒಬ್ಬ ರೈತ ನೆಮ್ಮದಿಯ ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಬಹುದು. ರೈತರು ಸ್ವಾವಲಂಬಿಗಳಾಗುವ ಜತೆಗೆ ಮತ್ತೊಬ್ಬರಿಗೆ ಉದ್ಯೋಗ ಕಲ್ಪಿಸುವವರಾಗಬೇಕು ಎಂದು ಸಲಹೆ ನೀಡಿದರು.

ಗ್ರಾಮಾಂತರ ಜಿಲ್ಲೆಯಲ್ಲಿ ಹಿಂದೆ ರೇಷ್ಮೆ ಮತ್ತು ಹೈನುಗಾರಿಕೆಯಲ್ಲಿ ಹೆಚ್ಚಿನ ರೈತರು ತೊಡಗಿಸಿಕೊಂಡಿದ್ದರು. ಆದರೆ, ಭೂಮಿ ಬೆಲೆ ಗಗನಕ್ಕೇರಿರುವುದರಿಂದ ಕೃಷಿ ಚಟುವಟಿಕೆ ಕುಂಠಿತವಾಗುತ್ತಿದೆ. ದೇವನಹಳ್ಳಿಯಿಂದ ಹಾಲು ಸರಬರಾಜು ದಿನೇ ದಿನೇ ಕಡಿಮೆಯಾಗುತ್ತಿದೆ. ಪ್ರಸ್ತುತ ದಿನಕ್ಕೆ ಸುಮಾರು ಒಂದು ಲಕ್ಷ ಲೀಟರ್ ಹಾಲು ಮಾತ್ರ ಸರಬರಾಜು ಆಗುತ್ತಿದೆ ಎಂದು ಹೇಳಿದರು.

ಹೈನುಗಾರಿಕೆಯಲ್ಲಿ ಉದ್ಯೋಗ ಸಮಸ್ಯೆಗೆ ಸಾಕಷ್ಟು ಅವಕಾಶ ಇದೆ. ಮುಂದಿನ ದಿನಗಳಲ್ಲಿ ರೈತರಿಗೆ ಇನ್ನಷ್ಟು ಉತ್ತಮ ದರ ನೀಡುವ ಬಗ್ಗೆ ಒಕ್ಕೂಟ ಚಿಂತನೆ ನಡೆಸುತ್ತಿದೆ. ಹಿಂದೆ ಒಕ್ಕೂಟಕ್ಕೆ ತಿಂಗಳಿಗೆ ₹10.5 ಕೋಟಿ ನಷ್ಟವಾಗುತ್ತಿತ್ತು. ನಿರ್ದೇಶಕರ ಸಹಕಾರದಿಂದ ಈಗ ₹5 ಕೋಟಿ ಲಾಭದ ಹಂತಕ್ಕೆ ತಲುಪಿದ್ದೇವೆ ಎಂದರು.

ವಿಧಾನ ಪರಿಷತ್ ಸದಸ್ಯ ರವಿ, ನಾಗರಾಜ್ ಯಾದವ್, ಬಮುಲ್ ನಿರ್ದೇಶಕರ ಎಸ್‌.ಪಿ.ಮುನಿರಾಜು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜಣ್ಣ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಸಿ.ಜಗನ್ನಾಥ್, ಕೆಪಿಸಿಸಿ ಸದಸ್ಯ ಚಿನ್ನಪ್ಪ, ವಿವಿಧ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ಪಶುಪಾಲನಾ ಇಲಾಖೆ ಹಾಗೂ ಬಮುಲ್ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.