ADVERTISEMENT

ನಾಗಮಂಗಲ ಕೆರೆ ಪುನಶ್ಚೇತನಕ್ಕೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 2:57 IST
Last Updated 17 ಜನವರಿ 2026, 2:57 IST
ದೇವನಹಳ್ಳಿಯ ಕುಂದಾಣ ಹೋಬಳಿಯ ನಾಗಮಂಗಲ ಕೆರೆ ಪುನಶ್ಚೇತನ ಕಾಮಗಾರಿಗೆ ಜಾಲಿಗೆ ಗ್ರಾಪಂ ಅಧ್ಯಕ್ಷ ಎಸ್‌.ಎಂ. ಆನಂದ್ ಕುಮಾರ್‌, ಪಿಡಿಓ ಎಚ್‌. ಪ್ರಕಾಶ್‌, ಗ್ರಾಪಂ ಸದಸ್ಯರಾದ ಜಯಮ್ಮ ಹಾಗೂ ಮುನಿರತ್ನಮ್ಮ ಭೂಮಿ ಪೂಜೆ ನೆರವೇರಿಸಿದರು
ದೇವನಹಳ್ಳಿಯ ಕುಂದಾಣ ಹೋಬಳಿಯ ನಾಗಮಂಗಲ ಕೆರೆ ಪುನಶ್ಚೇತನ ಕಾಮಗಾರಿಗೆ ಜಾಲಿಗೆ ಗ್ರಾಪಂ ಅಧ್ಯಕ್ಷ ಎಸ್‌.ಎಂ. ಆನಂದ್ ಕುಮಾರ್‌, ಪಿಡಿಓ ಎಚ್‌. ಪ್ರಕಾಶ್‌, ಗ್ರಾಪಂ ಸದಸ್ಯರಾದ ಜಯಮ್ಮ ಹಾಗೂ ಮುನಿರತ್ನಮ್ಮ ಭೂಮಿ ಪೂಜೆ ನೆರವೇರಿಸಿದರು   

ಜಾಲಿಗೆ(ದೇವನಹಳ್ಳಿ): ಜಲಸಂಪನ್ಮೂಲ ಸಂರಕ್ಷಣೆ, ಜೀವವೈವಿಧ್ಯ ವೃದ್ಧಿ ಹಾಗೂ ಗ್ರಾಮೀಣ ಪರಿಸರ ಸಮತೋಲನ ಕಾಪಾಡುವ ಉದ್ದೇಶದಿಂದ ಜಾಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 39.20 ಎಕರೆ ವಿಸ್ತೀರ್ಣದ ನಾಗಮಂಗಲ ಕೆರೆ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಲಾಯಿತು.

ಕೆರೆಗಳು ಗ್ರಾಮೀಣ ಪರಿಸರದ ಜೀವನಾಡಿಯಾಗಿವೆ. ಮಳೆ ನೀರಿನ ಸಂಗ್ರಹ, ಭೂಗರ್ಭ ಜಲಮಟ್ಟ ಹೆಚ್ಚಳ, ಹಸಿರು ಪರಿಸರ ನಿರ್ಮಾಣಕ್ಕೆ ಕೆರೆ ಪುನಶ್ಚೇತನ ಅತ್ಯಂತ ಅಗತ್ಯ. ನಾಗಮಂಗಲ ಕೆರೆ ಅಭಿವೃದ್ಧಿಯಿಂದ ಪರಿಸರ ಸಂರಕ್ಷಣೆ ಜೊತೆಗೆ ಮುಂದಿನ ಪೀಳಿಗೆಗೆ ಶುದ್ಧ ನೀರು ಮತ್ತು ಹಸಿರು ಬದುಕು ಒದಗಿಸುವ ಗುರಿ ಇದೆ ಎಂದು ಜಾಲಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್‌.ಎಂ.ಆನಂದಕುಮಾರ್ ತಿಳಿಸಿದರು.

ಯುನೈಟೆಡ್ ವೇಸ್  ಸಂಸ್ಥೆಯ ಸಹಯೋಗದಲ್ಲಿ ಸುಮಾರು ₹ 3.60 ಕೋಟಿ ಅನುದಾನದಲ್ಲಿ ಕೆರೆಯ ಹೂಳು ತೆಗೆಯುವುದು, ಕೆರೆಯ ಮಣ್ಣಿನ ಗೋಟೆ (ಬಂಡ್‌) ಬಲಪಡಿಸುವುದು, ಕೆರೆಯ ಸುತ್ತ ವಾಯು ವಿಹಾರ ಪಥ ನಿರ್ಮಾಣ, ಬೆಂಚ್ ವ್ಯವಸ್ಥೆ, ಸೋಲಾರ್ ದೀಪಗಳ ಅಳವಡಿಕೆ, ಒಳಹರಿವು–ಹೊರಹರಿವು ಕಾಲುವೆಗಳ ಅಭಿವೃದ್ಧಿ ಕೈಗೊಳ್ಳಲಾಗುತ್ತದೆ. ಜೊತೆಗೆ ಮೂರು ವರ್ಷಗಳ ಕಾಲ ಕೆರೆಯ ನಿರ್ವಹಣೆಯನ್ನೂ ಸಂಸ್ಥೆಯೇ ವಹಿಸಿಕೊಳ್ಳಲಿದೆ ಎಂದು ತಿಳಿಸಿದರು.

ADVERTISEMENT

ಪರಿಸರ ಸ್ನೇಹಿ ಅಭಿವೃದ್ಧಿ ನಮ್ಮ ಮೊದಲ ಆದ್ಯತೆ. ಕೆರೆ ಪುನಶ್ಚೇತನದಿಂದ ಮಳೆ ನೀರು ಸಂಗ್ರಹದೊಂದಿಗೆ ಗ್ರಾಮದಲ್ಲಿ ಹಸಿರು ವಾತಾವರಣ ನಿರ್ಮಾಣವಾಗಲಿದೆ. ಸಾರ್ವಜನಿಕರ ಸಹಕಾರದೊಂದಿಗೆ ಈ ಯೋಜನೆಯನ್ನು ಯಶಸ್ವಿಗೊಳಿಸಲಾಗುವುದು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಚ್‌. ಪ್ರಕಾಶ್ ತಿಳಿಸಿದರು.

ನಾಗಮಂಗಲ ಗ್ರಾಮದ ಸದಸ್ಯರಾದ ಜಯಮ್ಮ ಹಾಗೂ ಮುನಿರತ್ನಮ್ಮ ಪೂಜೆ ನೆರವೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.