
ದೇವನಹಳ್ಳಿ: ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 1,777 ಎಕರೆ ಕೆಐಎಡಿಬಿ ಭೂ ಸ್ವಾಧೀನದಿಂದ ಕೈಬಿಡುವಂತೆ ಆಗ್ರಹಿಸಿ ಹೋರಾಟ ನಡೆಸಿದ್ದ ರೈತರಿಗೆ ಸರ್ಕಾರ ಷರತ್ತು ವಿಧಿಸಿ ಸ್ವಾಧೀನ ಕೈಬಿಡಲು ಮುಂದಾಗಿದೆ. ಈ ಭೂಮಿಯನ್ನು ಶಾಶ್ವತ ವಿಶೇಷ ಕೃಷಿ ವಲಯ ಎಂದು ಘೋಷಿಸುವಂತೆ ಶಿಫಾರಸು ಮಾಡಿದೆ ಎನ್ನಲಾಗಿದೆ.
ಈ ಪ್ರಕ್ರಿಯೆಗೆ ರೈತರು ಮತ್ತು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಮಂಗಳವಾರ ಧರಣಿ ಸ್ಥಳದಲ್ಲಿ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಸದಸ್ಯರು ಸಭೆ ಕೈಗೊಂಡು ಯಾವುದೇ ಷರತ್ತುಗಳಿಲ್ಲದೇ ಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಎಂದು ಆಗ್ರಹಿಸಿದರು.
1,339 ದಿನಗಳಿಂದ ನಡೆಯುತ್ತಿರುವ ಹೋರಾಟದ ಭಾಗವಾಗಿ ಸರ್ಕಾರ ಭೂಸ್ವಾಧೀನ ಕೈಬಿಡುತ್ತೇವೆ ಎಂದು ಮಾತು ನೀಡಿದೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ 1,777 ಎಕರೆ ಭೂಮಿಯನ್ನು ಶಾಶ್ವತ ವಿಶೇಷ ಕೃಷಿ ವಲಯ ಎಂದು ಘೋಷಿಸುವಂತೆ ಶಿಫಾರಸು ಮಾಡಿರುವ ಪತ್ರವೊಂದು ಹರಿದಾಡುತ್ತಿದೆ. ಇದು ರೈತರಲ್ಲಿ ಆತಂಕ ಮೂಡಿಸಿದೆ.
ಇಂತಹ ಶಿಫಾರಸು ರೈತರ ವಿರೋಧಿಯಾಗಿದೆ. ರೈತರ ವಿರುದ್ಧ ಸರ್ಕಾರ ಸೇಡು ತೀರಿಸಿಕೊಳ್ಳುವ ಹುನ್ನಾರ ಕಾಣುತ್ತಿದೆ. ಭೂಮಿ ಮೌಲ್ಯ ಕುಗ್ಗಿಸಲು ಮಾಡಿರುವ ಷ್ಯಡಂತ್ರ. ಇಂತಹ ಯಾವುದೇ ಷರತ್ತುಗಳನ್ನು ವಿಧಿಸದೆ ಭೂಸ್ವಾಧೀನ ಕೈಬಿಡಬೇಕು ಎಂದು ಹೋರಾಟಗಾರರಾದ ಪ್ರಭಾ ಬೆಳವಂಗಲ ಆಗ್ರಹಿಸಿದರು.
ಸರ್ಕಾರ ಕೂಡಲೇ ಭೂಸ್ವಾಧೀನ ಪ್ರಕ್ರಿಯೆ ಕೈ ಬಿಡುವ ಅಧಿಕೃತ ಆದೇಶವನ್ನು ಹೊರಡಿಸಬೇಕು. ಯಾವುದೇ ವಲಯವನ್ನು ಬದಲಾವಣೆ ಮಾಡಬಾರದು. ಯಥಾಸ್ಥಿತಿಯಲ್ಲಿಯೇ ಆದೇಶ ಜಾರಿ ಮಾಡಿ ರೈತ ಪರವಾದ ಸರ್ಕಾರವೆಂದು ನಿರೂಪಿಸಿಕೊಳ್ಳಬೇಕು ಎಂದು ಕಾರಳ್ಳಿ ಶ್ರೀನಿವಾಸ್ ಒತ್ತಾಯಿಸಿದರು.
ಶಾಶ್ವತ ವಿಶೇಷ ಕೃಷಿ ವಲಯದ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದು ಅನಗತ್ಯವಾಗಿ ರೈತರಿಗೆ ಹಿಂಸೆ ಮತ್ತು ಕಿರುಕುಳ ನೀಡುವುದನ್ನು ಬಿಟ್ಟು ಕಳೆದ ಮೂರುವರೆ ವರ್ಷಗಳಿಂದ ಅತಂತ್ರವಾಗಿ ಬದುಕುತ್ತಿರುವ ರೈತರ ಭೂ ಸ್ವಾಧೀನ ರದ್ದುಪಡಿಸಿ ನೆಮ್ಮದಿಯಿಂದ ಕೃಷಿ ಚಟುವಟಿಕೆ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ನಲ್ಲಪನಹಳ್ಳಿ ನಂಜಪ್ಪ ಆಗ್ರಹಿಸಿದರು.
ಅಶ್ಥತಪ್ಪ, ತಿಮ್ಮರಾಯಪ್ಪ, ಗೋಪಿನಾಥ್, ವೆಂಕಟರಮಣಪ್ಪ, ದೇವರಾಜು, ಲೋಕೇಶ್, ನಂಜೇಗೌಡ, ಮುನಿರಾಜು, ಮುನಿಷಾಮಪ್ಪ ಮುಕುಂದ, ಶ್ರೀನಿವಾಸ್, ಪ್ರಮೋದ್, ಗೋಪಾಲಗೌಡ, ಕೃಷ್ಣಪ್ಪ, ನಾರಾಯಣಮ್ಮ, ಲಕ್ಷ್ಮಮ್ಮ, ಮಂಜುನಾಥ್ ,ವೆಂಕಟೇಶ್ ಮುನಿವೆಂಕಟಮ್ಮ, ಪಿಳ್ಳಪ್ಪ, ಕೃಷ್ಣಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.