ADVERTISEMENT

ದೇವನಹಳ್ಳಿ: ಭೂಸ್ವಾಧೀನ ವಿರೋಧಿ ಹೋರಾಟ ನಿಲ್ಲದು

ಅಧಿಕೃತ ಆದೇಶದವರೆಗೂ ಹೋರಾಟಕ್ಕೆ ರೈತರ ನಿರ್ಧಾರ* ಸರ್ಕಾರದ ವಿರುದ್ಧ ತಿರುಗಿಬಿದ್ದ ಹೋರಾಟಗಾರರು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 2:43 IST
Last Updated 7 ಸೆಪ್ಟೆಂಬರ್ 2025, 2:43 IST
ದೇವನಹಳ್ಳಿಯ ಚನ್ನರಾಯಪಟ್ಟಣ ಹೋಬಳಿಯ ಭೂ ಸ್ವಾಧೀನ ಹಿಂಪಡೆದಿರುವ ಕುರಿತು ಅಧಿಕೃತ ಡಿನೋಟಿಫೈ ಆದೇಶ ಹೊರಡಿಸುವಂತೆ ಒತ್ತಾಯಿಸಿ ರೈತರು ಪ್ರತಿಭಟಿಸಿದರು
ದೇವನಹಳ್ಳಿಯ ಚನ್ನರಾಯಪಟ್ಟಣ ಹೋಬಳಿಯ ಭೂ ಸ್ವಾಧೀನ ಹಿಂಪಡೆದಿರುವ ಕುರಿತು ಅಧಿಕೃತ ಡಿನೋಟಿಫೈ ಆದೇಶ ಹೊರಡಿಸುವಂತೆ ಒತ್ತಾಯಿಸಿ ರೈತರು ಪ್ರತಿಭಟಿಸಿದರು   

ದೇವನಹಳ್ಳಿ: ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1,777 ಎಕರೆ ಭೂಮಿಯನ್ನು ಸ್ವಾಧೀನದಿಂದ ಕೈಬಿಟ್ಟಿರುವುದಾಗಿ ಸರ್ಕಾರದಿಂದ ಅಧಿಕೃತವಾಗಿ ಆದೇಶ ಹೊರ ಬೀಳುವವರೆಗೂ ಹೋರಾಟ ಮುಂದುವರಿಸಲು ರೈತರು ನಿರ್ಧರಿಸಿದ್ದಾರೆ.

ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಧರಣಿ ಸ್ಥಳದಲ್ಲಿ ಶನಿವಾರ ನಡೆದ ಸಭೆಯಲ್ಲಿ ರೈತರು ಒಮ್ಮತದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1,777 ಎಕರೆ ಜಮೀನನ್ನು ಭೂಸ್ವಾಧೀನ ಕೈಬಿಟ್ಟಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ15 ರಂದು ಅಧಿಕೃತವಾಗಿ ಘೋಷಿಸಿದ್ದಾರೆ. ಆದರೆ, ಇದುವರೆಗೂ ಯಾವುದೇ ಲಿಖಿತ ಆದೇಶ ಹೊರಡಿಸಿಲ್ಲ ಎಂದು ಹೋರಾಟಗಾರರು ಅಸಮಾಧಾನ ಹೊರ ಹಾಕಿದರು.

ADVERTISEMENT

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಧಿಕಾರಿಗಳು ಚನ್ನರಾಯಪಟ್ಟಣ ಹೋಬಳಿಯ ಎರಡು ಗ್ರಾಮಗಳ ರೈತರಿಗೆ ಭೂಮಿ ದರ ನಿಗದಿ ಸಭೆಗೆ ಹಾಜರಾಗುವಂತೆ ನೋಟಿಸ್‌ ಜಾರಿಗೊಳಿಸಿದ್ದಾರೆ ಎಂದು ಆಕ್ಷೇಪ ಎತ್ತಿದರು.

ಭೂಸ್ವಾಧೀನ ಹಿಂಪಡೆದಿರುವ ಕುರಿತು ವಾರದೊಳಗೆ ಲಿಖಿತ ಆದೇಶ ಹೊರಡಿಸಬೇಕು. ಎಲ್ಲಾ ರೀತಿಯ ಪಾರದರ್ಶಕ ಪ್ರಕ್ರಿಯೆ ಮುಗಿಸಿ, ಡಿನೋಟಿಫೈ ಆದೇಶ ಹೊರಡಿಸಬೇಕು. ಭೂಮಿ ಬೆಲೆ ನಿಗದಿ ಸೇರಿದಂತೆ ಯಾವುದೇ ರೀತಿಯ ಭೂಸ್ವಾಧೀನ ಪ್ರಕ್ರಿಯೆ ಮುಂದುವರೆಸಬಾರದು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಆಶಯಕ್ಕೆ ವಿರುದ್ಧವಾಗಿ ಸ್ವಾಧೀನ ಪ್ರಕ್ರಿಯೆ ಮುಂದುವರಿಸುತ್ತಿರುವುದು ಆಘಾತಕಾರಿ ಬೆಳವಣಿಗೆ. ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಮುಖ್ಯಮಂತ್ರಿ ಘೋಷಣೆಯ ವಿರುದ್ಧ ಮಾತನಾಡುತ್ತಿರುವುದು ಖಂಡನೀಯ ಎಂದು ಕಾರಹಳ್ಳಿ ಶ್ರೀನಿವಾಸ್ ತಿಳಿಸಿದರು.  

ಭೂಮಿ ನೀಡಲು ಸಿದ್ಧರಿರುವವರಿಂದ ಭೂಮಿ ಪಡೆದು ನಂತರ ಉಳಿದ ಭೂಮಿಯನ್ನು ಡಿನೋಟಿಫೈ ಮಾಡುವುದಾಗಿ ಎಂ.ಬಿ. ಪಾಟೀಲ ಹೇಳಿದ್ದಾರೆ. 154 ರೈತರು ಕೆಐಎಡಿಬಿಗೆ ಭೂಮಿ ನೀಡಲು ಸಿದ್ಧ ಎಂದು ನೀಡಿರುವ ಪತ್ರ ನಕಲಿ. ರೈತರ ದಾಖಲೆ ನೀಡಿ ನಕಲಿ ಸಹಿ ಮಾಡಲಾಗಿದೆ ಎಂದು ಆರೋಪಿಸಿದರು.

ಹೋರಾಟ ತೀವ್ರಗೊಳಿಸುವ ಎಚ್ಚರಿಕೆ

ಡಿನೋಟಿಫಿಕೇಷನ್‌ ಆದೇಶ ಹೊರ ಬರುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಬೇಡಿಕೆಗಳು ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದು ಅನಿವಾರ್ಯವಾಗುತ್ತದೆ ಎಂದು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯು ಮುಖಂಡರು ಒಕ್ಕೊರಳಿನಿಂದ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.