ADVERTISEMENT

ಆದಿನಾರಾಯಸ್ವಾಮಿ ದೇವಾಲಯ ಜೀರ್ಣೋದ್ಧಾರಕ್ಕೆ ಸಮಿತಿ ರಚನೆ

ದೇವಾಲಯದ ಒತ್ತುವರಿ ಜಾಗ ತೆರವು ಮಾಡಿ, ಗರ್ಭಗುಡಿ ನಿರ್ಮಾಣಕ್ಕೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2018, 13:52 IST
Last Updated 11 ನವೆಂಬರ್ 2018, 13:52 IST
ಸಭೆಯಲ್ಲಿ ಜಿಲ್ಲಾಧಿಕಾರಿ ಕರೀಗೌಡ  ಮಾತನಾಡಿದರು
ಸಭೆಯಲ್ಲಿ ಜಿಲ್ಲಾಧಿಕಾರಿ ಕರೀಗೌಡ  ಮಾತನಾಡಿದರು   

ದೊಡ್ಡಬಳ್ಳಾಪುರ: ಗಾಂಧಿನಗರದಲ್ಲಿನ ಪುರಾತನ ಆದಿನಾರಾಯಣಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕೆ ಸಾರ್ವಜನಿಕರನ್ನು ಒಳಗೊಂಡ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಪುರಾತತ್ವ ಇಲಾಖೆ ತಜ್ಞರು ಹೆಚ್ಚಿನ ಮಾಹಿತಿ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಕರೀಗೌಡ ಹೇಳಿದರು.

ಆದಿನಾರಾಯಣಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕುರಿತಂತೆ ಭಾನುವಾರ ನಡೆದ ಸಭೆಯಲ್ಲಿ ಮಾತನಾಡಿ, ಶಿಥಿಲವಾಗಿರುವ ಸುಂದರ ಕೆತ್ತನೆ ಕೆಲಸದಿಂದ ಕೂಡಿರುವ ದ್ವಾರಬಾಗಿಲಿನ ಮಂಟಪವನ್ನು ಅಭಿವೃದ್ಧಿಗೊಳಿಸಬೇಕಿದೆ. ಇದರೊಂದಿಗೆ ದೇವಾಲಯದ ಒತ್ತುವರಿ ಜಾಗ ತೆರವು ಮಾಡಿ, ಗರ್ಭಗುಡಿ ನಿರ್ಮಾಣ ಮಾಡಲು ಅಗತ್ಯ ನಿವೇಶನ ಪಡೆಯುವ ಸಲಹೆಗಳು ಬಂದಿವೆ. ಈ ಕುರಿತು ಸಮೀಪದ ನಿವೇಶನದ ಮಾಲೀಕರೊಂದಿಗೆ ಚರ್ಚಿಸಲಾಗುವುದು ಎಂದರು.

ದೇವಾಲಯಕ್ಕೆ ಸರ್ಕಾರದ ಅನುದಾನ ದೊರೆಯದಿರುವುದರಿಂದ ಸಾರ್ವಜನಿಕರೇ ಇದಕ್ಕೆ ನೆರವಾಗಬೇಕು ಎಂದು ಮನವಿ ಮಾಡಿದರು.

ADVERTISEMENT

ಸಭೆಯಲ್ಲಿ ಹಾಜರಿದ್ದ, ನಗರಸಭೆ ಸದಸ್ಯ ಶಿವಕುಮಾರ್, ನಗರದಲ್ಲೇ ಅತ್ಯಂತ ಪುರಾತನವಾದ ಸ್ಮಾರಕ ಇದಾಗಿದೆ. ಇದನ್ನು ಯಥಾವತ್ತಾಗಿ ಅಭಿವೃದ್ಧಿಗೊಳಿಸಿ ಮುಂದಿನ ಜನಾಂಗದವರಿಗು ಉಳಿಸಿಕೊಡಬೇಕು. ಇದಕ್ಕೆ ಅಗತ್ಯ ಇರುವ ನೆರವನ್ನು ಸ್ಥಳೀಯವಾಗಿ ಸಂಗ್ರಹಿಸಿ ಭರಿಸಲಾಗುವುದು ಎಂದರು.

‘ಪುರಾತನ ಶ್ರೀಆದಿನಾರಾಯಣಸ್ವಾಮಿ ದೇವಾಲಯದ ಜೀರ್ಣೋದ್ದಾರ ಕಾರ್ಯ ಅಗತ್ಯವಾಗಿ ಆಗಬೇಕಿದ್ದು, ಒಂದು ಐತಿಹಾಸಿಕ ಸ್ಮಾರಕವನ್ನು ಉಳಿಸಿದಂತಾಗುತ್ತದೆ. ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಮುಖಂಡರೊಂದಿಗೆ ಸಮಿತಿ ರಚಿಸುವ ನಿರ್ಧಾರ ಸ್ವಾಗತಾರ್ಹವಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜೀರ್ಣೋದ್ದಾರ ಕಾರ್ಯ ಮಾಡಲು ನಮ್ಮ ಸಹಕಾರವಿದೆ’ ಎಂದು ಸೇರಿದ್ದ ಸ್ಥಳೀಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಅಭಿಪ್ರಾಯಪಟ್ಟರು.

ಇತಿಹಾಸ ತಜ್ಞ ಡಾ.ಎಸ್.ವೆಂಕಟೇಶ್, ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಜಿ.ಚಂದ್ರಶೇಖರಯ್ಯ, ಸುಚೇತನ ಎಜುಕೇಷನ್ ಚಾರಿಟಬಲ್ ಟ್ರಸ್ಟ್ ಚೇರ್‌ಮನ್‌ ಮಂಜುನಾಥ್, ಅಧ್ಯಕ್ಷ ಸುನೀಲ್, ದೇವಾಂಗ ಮಂಡಲಿ ಕಾರ್ಯದರ್ಶಿ ಎ.ಎಸ್.ಕೇಶವ, ಹಿರಿಯ ಪತ್ರಕರ್ತ ಎಂ.ಜೆ.ರಾಜಶೇಖರ ಶೆಟ್ಟಿ, ಸ್ಥಳೀಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.