ADVERTISEMENT

ದೊಡ್ಡಬಳ್ಳಾಪುರ | ವಂಚನೆ ‍ತಪ್ಪಿಸಲು ಡಿಜಿಟಲ್ ಇ-ಸ್ಟ್ಯಾಂಪ್‌: ಡಾ.ಬಿ.ಆರ್‌.ಅನುಪಮ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 2:16 IST
Last Updated 11 ಜನವರಿ 2026, 2:16 IST
ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಡಿಜಿಟಲ್ ಇ-ಸ್ಟ್ಯಾಂಪ್‌ ಬಳಕೆ ಕುರಿತ ತರಬೇತಿಯಲ್ಲಿ ಉಪನೋಂದಣಾಧಿಕಾರಿ ಡಾ.ಬಿ.ಆರ್‌.ಅನುಪಮ ಮಾತನಾಡಿದರು
ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಡಿಜಿಟಲ್ ಇ-ಸ್ಟ್ಯಾಂಪ್‌ ಬಳಕೆ ಕುರಿತ ತರಬೇತಿಯಲ್ಲಿ ಉಪನೋಂದಣಾಧಿಕಾರಿ ಡಾ.ಬಿ.ಆರ್‌.ಅನುಪಮ ಮಾತನಾಡಿದರು   

ದೊಡ್ಡಬಳ್ಳಾಪುರ:  ಮಧ್ಯವರ್ತಿಗಳಿಂದ, ಭೂ ಮಾಲೀಕರಿಗೆ ಅಥವಾ ಯಾವುದೇ ವ್ಯವಹಾರಸ್ಥರಿಗೂ ವಂಚನೆಯಾಗಬಾರದು ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ಡಿಜಿಟಲ್ ಇ-ಸ್ಟ್ಯಾಂಪ್‌ ಜಾರಿಗೆ ತಂದಿದೆ ಎಂದು ದೊಡ್ಡಬಳ್ಳಾಪುರ ಉಪನೋಂದಣಾಧಿಕಾರಿ ಡಾ.ಬಿ.ಆರ್‌.ಅನುಪಮ ಹೇಳಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಡಿಜಿಟಲ್ ಇ-ಸ್ಟ್ಯಾಂಪ್‌ ಬಳಕೆ ಕುರಿತು ಪತ್ರಬರಹಗಾರರು, ಸಹಕಾರಿ ಬ್ಯಾಂಕ್‌, ವಕೀಲರು ಹಾಗೂ ಸಾರ್ವಜನಿಕರಿಗಾಗಿ ನಡೆದ ತರಬೇತಿಯಲ್ಲಿ ಮಾತನಾಡಿದರು.

ಡಿಜಿಟಲ್ ಇ-ಸ್ಟ್ಯಾಂಪ್‌ ವ್ಯವಸ್ಥೆಯು ನಾಗರಿಕರಿಗೆ ಸುಧಾರಿತ ಪಾರದರ್ಶಕತೆ, ಅನುಕೂಲತೆ, ದಕ್ಷತೆಯೊಂದಿಗೆ ಆನ್‌ಲೈನ್‌ನಲ್ಲಿ ಇ-ಸ್ಟ್ಯಾಂಪ್‌ಗಳನ್ನು ಪಡೆಯಬಹುದು. ತಪ್ಪಾದ ಶುಲ್ಕ ಲೆಕ್ಕಾಚಾರ, ಸಹಿಗಾಗಿ ಮಧ್ಯವರ್ತಿಗಳ ಮೇಲಿನ ಅವಲಂಬನೆ, ಭೌತಿಕ ಸ್ಟಾಂಪ್ ಪೇಪರ್‌ಗಳ ನಷ್ಟ ಅಥವಾ ಹಾನಿ ತಪ್ಪಲಿದೆ ಎಂದರು.

ADVERTISEMENT

ಹಿಂದಿನ ದಿನಾಂಕದ ಸ್ಟ್ಯಾಂಪ್ ಪೇಪರ್‌ಗಳನ್ನು ಬಳಸಿ  ಭೂ ಮಾಲೀಕರು ಸೇರಿದಂತೆ ಇತರರಿಗೂ ವಂಚನೆ ಮಾಡುವುದು ತಪ್ಪಲಿದೆ. ಡಿಜಿಟಲ್ ಇ-ಸ್ಟ್ಯಾಂಪ್‌ನ ಪ್ರಮುಖ ಲಕ್ಷಣಗಳೆಂದರೆ ಇ-ಸ್ಟ್ಯಾಂಪ್‌ಗಳನ್ನು ಆನ್‌ಲೈನ್ನಲ್ಲಿ ಯಾವುದೇ ಸಮಯದಲ್ಲಾದರು ಪಡೆಯಬಹುದು. ಸ್ವಾಂಪ್‌ ಶುಲ್ಕವು ಸ್ವಯಂಚಾಲಿತವಾಗಿ ಲೆಕ್ಕಹಾಕಲಿದೆ. ಈ ಶುಲ್ಕವನ್ನು ಆನ್‌ಲೈನ್‌ ಮೂಲಕವೇ ಪಾವತಿ ಮಾಡಬಹುದು ಎಂದು ತಿಳಿಸಿದರು.

ಡಿಜಿಟಲ್‌ ಪತ್ರವನ್ನು ಶಾಶ್ವತವಾಗಿ ಸಂಗ್ರಹಣೆ ಮಾಡಿಟ್ಟುಕೊಳ್ಳಬಹುದು. ಇ-ಸ್ಟ್ಯಾಂಪ್‌ ಪತ್ರವು ಆಧಾರ್ ಆಧಾರಿತ ಇ-ಸೈನ್ ಮತ್ತು ಡಿಜಿಟಲ್ ಸಹಿಯ ಮೂಲಕವೇ ನಡೆಯುತ್ತದೆ. ಇ-ಸ್ಟ್ಯಾಂಪ್‌ ಪರಿಸರ ಸ್ನೇಹಿ ಮತ್ತು ವೆಚ್ಚ ಪರಿಣಾಮಕಾರಿ ಪರಿಹಾರವಾಗಿದೆ ಎಂದರು.

ತರಬೇತಿಯಲ್ಲಿ ಹಿರಿಯ ಉಪನೋಂದಣಾಧಿಕಾರಿ ಘನಿಉಲ್ಲಾಖಾನ್‌, ಪತ್ರಬರಹಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಬಿ.ಹನುಮಂತಯ್ಯ, ಉಪಾಧ್ಯಕ್ಷ ಎಸ್‌.ಜಯಣ್ಣ, ಕಾರ್ಯದರ್ಶಿ ಎನ್‌.ತಿರುಮಲೇಶ್‌, ಸಲಹೆಗಾರ ಕೆ.ಬಿ.ನಾಗರಾಜ್‌, ಖಜಾಂಚಿ ಕೆ.ವಿ.ಶ್ರೀನಿವಾಸ್‌ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.