ADVERTISEMENT

ಮೇಲ್ಸೇತುವೆ ಗೋಡೆ ಕುಸಿತ: ಎಂಜಿನಿಯರ್‌ಗಳಿಗೆ ಜಿಲ್ಲಾಧಿಕಾರಿ ತರಾಟೆ

ಬೆಂಗಳೂರು-ದೊಡ್ಡಬಳ್ಳಾಪುರ ಹೆದ್ದಾರಿಯ ಬಾಶೆಟ್ಟಿಹಳ್ಳಿ ಮೇಲ್ಸೇತುವೆ ಗೋಡೆ ಕುಸಿತ

​ಪ್ರಜಾವಾಣಿ ವಾರ್ತೆ
Published 14 ಜುಲೈ 2019, 13:21 IST
Last Updated 14 ಜುಲೈ 2019, 13:21 IST
ಮೇಲ್ಸೇತುವೆ ಗೋಡೆ ಕುಸಿತವಾಗಿರುವ ಸ್ಥಳಕ್ಕೆ ಭಾನುವಾರ ಜಿಲ್ಲಾಧಿಕಾರಿ ಸಿ.ಎಸ್‌. ಕರೀಗೌಡ ಭೇಟಿ ನೀಡಿ ವೀಕ್ಷಣೆ ಮಾಡಿದರು
ಮೇಲ್ಸೇತುವೆ ಗೋಡೆ ಕುಸಿತವಾಗಿರುವ ಸ್ಥಳಕ್ಕೆ ಭಾನುವಾರ ಜಿಲ್ಲಾಧಿಕಾರಿ ಸಿ.ಎಸ್‌. ಕರೀಗೌಡ ಭೇಟಿ ನೀಡಿ ವೀಕ್ಷಣೆ ಮಾಡಿದರು   

ದೊಡ್ಡಬಳ್ಳಾಪುರ: ಬೆಂಗಳೂರು-ದೊಡ್ಡಬಳ್ಳಾಪುರ ಹೆದ್ದಾರಿಯ ಬಾಶೆಟ್ಟಿಹಳ್ಳಿ ಮೇಲ್ಸೇತುವೆ ಗೋಡೆ ಕುಸಿತವಾಗಿರುವ ಸ್ಥಳಕ್ಕೆ ಭಾನುವಾರ ಜಿಲ್ಲಾಧಿಕಾರಿ ಸಿ.ಎಸ್‌. ಕರೀಗೌಡ ಭೇಟಿ ನೀಡಿ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು.

‘ಜನರಿಂದ ಹಣ ಸಂಗ್ರಹಿಸುವ ರಸ್ತೆಯಲ್ಲೇ ಇಷ್ಟೊಂದು ಕಳಪೆ ಕೆಲಸ ಮಾಡಿದರೆ ಜನರಲ್ಲಿ ಸರ್ಕಾರಿ ಎಂಜಿನಿಯರ್‌ಗಳ ಬಗ್ಗೆ ಎಷ್ಟರಮಟ್ಟಿಗೆ ನಂಬಿಕೆ ಮೂಡಲು ಸಾಧ್ಯ. ಮೇಲ್ಸೇತುವೆ ಜನರ ಬಳಕೆಗೆ ಉದ್ಘಾಟನೆಯಾಗಿ ಇನ್ನೂ ಒಂಬತ್ತು ತಿಂಗಳು ಸಹ ಕಳೆದಿಲ್ಲ. ಈಗಲೇ ಮಣ್ಣು ಕುಸಿದರೆ ಮುಂದಿನ ದಿನಗಳಲ್ಲಿ ಈ ಸೇತುವೆ ಮೇಲೆ ಯಾವ ನಂಬಿಕೆಯ ಮೇಲೆ ವಾಹನಗಳಲ್ಲಿ ಚಲಿಸುವುದು’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸೋಮವಾರ ಮಧ್ಯಾಹ್ನ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಭೇಟಿ ನೀಡಲಾಗುವುದು ಎಂದರು.

ADVERTISEMENT

ಸ್ಥಳದಲ್ಲಿ ಹಾಜರಿದ್ದ ರೈಲ್ವೆ ವಿಭಾಗದ ಎಂಜಿನಿಯರ್‌ ವಿಜಯಭಾಸ್ಕರ್‌, ಜುಲೈ 15ರ ಮಧ್ಯಾಹ್ನ 1 ಗಂಟೆಗೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಭೇಟಿ ನೀಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ರಸ್ತೆ ತಡೆ: ಬಾಶೆಟ್ಟಿಹಳ್ಳಿ ಸಮೀಪ ಬೆಂಗಳೂರು-ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ರೈಲ್ವೆ ಇಲಾಖೆ ವತಿಯಿಂದ ನಿರ್ಮಿಸಿರುವ ಮೇಲ್ಸೇತುವೆ ಗೋಡೆ ಕುಸಿತವಾಗಲು ಕಾರಣವಾಗಿರುವ ಅಧಿಕಾರಿಗಳ ವಿರುದ್ದ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣ್‌ ಶೆಟ್ಟಿ ಬಣ) ವತಿಯಿಂದ ಜುಲೈ 15 ರಂದು ಮಧ್ಯಾಹ್ನ 1 ಗಂಟೆಗೆ ಬಾಶೆಟ್ಟಿಹಳ್ಳಿ ಮೇಲ್ಸೇತುವೆ ಬಳಿ ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ ತಿಳಿಸಿದ್ದಾರೆ.

ಸಿಪಿಐಎಂ ನಿಂದ ಪ್ರತಿಭಟನೆ:ಕಳಪೆ ಕಾಮಗಾರಿಯಿಂದಾಗಿಯೇ ಗೋಡೆ ಕುಸಿತವಾಗಿವೆ. ಅಧಿಕಾರಿಗಳ ನಿರ್ಲಕ್ಷ್ಯವೇ ಕಾಮಗಾರಿ ಕಳಪೆಯಾಗಲು ಕಾರಣವಾಗಿದೆ. ಕಳಪೆ ಕಾಮಗಾರಿಗೆ ಕಾರಣಕರ್ತರಾದ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸೋಮವಾರ ಮಧ್ಯಾಹ್ನ 3 ಗಂಟೆಗೆ ನಗರದ ಹಳೆ ಬಸ್‌ ನಿಲ್ದಾಣದ ಸಿದ್ದಲಿಂಗಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಸಿಪಿಎಂ ತಾಲ್ಲೂಕು ಸಹ ಕಾರ್ಯದರ್ಶಿ ಪಿ.ಎ. ವೆಂಕಟೇಶ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.