ADVERTISEMENT

ಸೌಲಭ್ಯ ವಂಚಿತ ರಾಜಧಾನಿ ಸೆರಗಿನ ಜಿಲ್ಲೆ

ನಟರಾಜ ನಾಗಸಂದ್ರ
Published 4 ಮಾರ್ಚ್ 2021, 3:17 IST
Last Updated 4 ಮಾರ್ಚ್ 2021, 3:17 IST
ದೊಡ್ಡಬಳ್ಳಾಪುರ ನಗರದ ಮುತ್ತೂರು ಕೆರೆಯ ನೋಟ
ದೊಡ್ಡಬಳ್ಳಾಪುರ ನಗರದ ಮುತ್ತೂರು ಕೆರೆಯ ನೋಟ   

ದೊಡ್ಡಬಳ್ಳಾಪುರ:ಬೆಂಗಳೂರಿನ ಸೆರಗಂಚಿನಲ್ಲೇ ಇರುವ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಮೂಲಸೌಲಭ್ಯ ಇಲ್ಲದೆ ಹಿಂದುಳಿದಿದೆ.

ಪ್ರತಿದಿನ ನೂರಾರು ಸಂಖ್ಯೆಯಲ್ಲಿ ದೇಶದ ವಿವಿಧೆಡೆ ಮತ್ತು ವಿದೇಶಗಳಿಗೆ ವಿಮಾನಗಳು ಜಿಲ್ಲೆಯಿಂದ ಹಾರಾಟ ನಡೆಸುತ್ತಿವೆ. ಆದರೆ, ಅಭಿವೃದ್ಧಿಯಲ್ಲಿ ಮಾತ್ರ ರಾಜ್ಯದ ಇತರೆ ಜಿಲ್ಲೆಗಳಿಗಿಂತಲೂ ವಿಶೇಷವಾಗಿಯೇನು ಇಲ್ಲ.

ಕುಡಿಯುವ ನೀರು, ಗ್ರಾಮೀಣ ಮಟ್ಟದಿಂದ ತಾಲ್ಲೂಕು ಮಟ್ಟದವರೆಗಿನ ರಸ್ತೆ, ಕೈಗಾರಿಕಾ ಪ್ರದೇಶಗಳಿಗೆ ಬಂದು ಹೋಗುವ ಕಾರ್ಮಿಕರಿಗೆ ರೈಲು, ಬಸ್‌ ಸೌಲಭ್ಯದ ಸೇವೆಯಲ್ಲಿ ಇನ್ನು ಒಂದು ದಶಕದಷ್ಟು ಹಿಂದುಳಿದೆ. ಜಿಲ್ಲಾಧಿಕಾರಿ ಕಾರ್ಯಾಲಯ ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಿದೆಯೇ ವಿನಾ ಜಿಲ್ಲಾ ಕೇಂದ್ರದ ಘೋಷಣೆ ಹಾಗೂ ಜಿಲ್ಲಾ ಹಂತದ ಎಲ್ಲಾ ಕಚೇರಿಗಳು ಒಂದೇ ಸೂರಿನಡಿ ಕೆಲಸ ಮಾಡುವುದು ಮಾತ್ರ ಇನ್ನು ಮರೀಚಿಕೆಯಾಗಿಯೇ ಉಳಿದಿದೆ.

ADVERTISEMENT

ಸಾಕಷ್ಟು ಜಿಲ್ಲಾ ಹಂತದ ಕಚೇರಿಗಳು ಬೆಂಗಳೂರಿನಲ್ಲೇ ಉಳಿದಿವೆ. ನೇಕಾರಿಕೆ, ರೇಷ್ಮೆ, ಸಣ್ಣ ಕೈಗಾರಿಕೆಗಳಿಗೆ ಮೂಲಸೌಲಭ್ಯ ಅಭಿವೃದ್ಧಿ, ಆರ್ಥಿಕ ಉತ್ತೇಜನ ನೀಡುವ ನಿರೀಕ್ಷೆ ಈಡೇರಿಲ್ಲ.

ಜಿಲ್ಲೆಯ ಹೊಸಕೋಟೆ ಕೈಗಾರಿಕಾ ಪ್ರದೇಶದ ನಂತರ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ಸುಮಾರು 70 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರನ್ನು ಹೊಂದಿದೆ. ಆದರೆ ಇಎಸ್‌ಐ ಆಸ್ಪತ್ರೆ, ಸಾರಿಗೆ ಸೌಲಭ್ಯಗಳಿಂದ ವಂಚಿತವಾಗಿದೆ.

ಹೊರ ವರ್ತುಲ ರೈಲು ಸೇವೆ: ಬೆಂಗಳೂರು ಸುತ್ತಲಿನ ತಾಲ್ಲೂಕು ಸೇರಿದಂತೆ ಹೆಚ್ಚಿನ ಪ್ರಯಾಣಿಕರ ದಟ್ಟಣೆ ಇರುವ ಪ್ರದೇಶಗಳಿಂದ ಬೆಂಗಳೂರು ಕೇಂದ್ರ ರೈಲು ನಿಲ್ದಾಣಕ್ಕೆ ರೈಲು ಸಂಚಾರ ಸೇವೆ ಆರಂಭಿಸಲು ಎಲ್ಲಾ ಸಿದ್ಧತೆಗಳು ಆರಂಭವಾಗಿದ್ದು, ಕೇಂದ್ರ ಸರ್ಕಾರದಿಂದ ಅನುಮತಿಯು ದೊರೆತಿದೆ.

ಪ್ರತಿದಿನ ಆಂಧ್ರಪ್ರದೇಶದ ಹಿಂದೂಪುರ ಸೇರಿದಂತೆ ವಿವಿಧ ಕಡೆಗಳಿಂದ ದೊಡ್ಡಬಳ್ಳಾಪುರಕ್ಕೆ ಹಾಗೂ ಇಲ್ಲಿಂದ ಬೆಂಗಳೂರಿಗೆ ಸಾವಿರಾರು ಜನ ರೈಲು, ಬಸ್‌ಗಳಲ್ಲಿ ಸಂಚರಿಸುತ್ತಾರೆ. ಆದರೆ, ಹೊರವರ್ತುಲ ರೈಲು ಸಂಚಾರ ಸೇವೆಯು ರಾಜಾನುಕುಂಟೆ ರೈಲು ನಿಲ್ದಾಣದವರೆಗೆ ಮಾತ್ರ ಸೀಮಿತಗೊಂಡಿದೆ. ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುವ ದೊಡ್ಡಬಳ್ಳಾಪುರದವರೆಗೂ ರೈಲು ಸಂಚಾರ ಸೇವೆಯನ್ನು ವಿಸ್ತರಿಸಬೇಕು. ಈ ಬಗ್ಗೆ ರಾಜ್ಯ ಬಜೆಟ್‌ನಲ್ಲಿ ಅಗತ್ಯ ನೆರವು ಕಲ್ಪಿಸಬೇಕು ಎನ್ನುವುದು ಈ ಭಾಗದ ಜನರ ಬಹುದಿನಗಳ ಬೇಡಿಕೆ.

ಕಸಮುಕ್ತ ತಾಲ್ಲೂಕು ನಮ್ಮದಾಗಲಿ
ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿದಿನ ಸಂಗ್ರಹವಾಗುವ ಕಸವನ್ನು ತಂದು ತಾಲ್ಲೂಕಿನ ಚಿಗರೇನಹಳ್ಳಿ ಸಮೀಪ ರಾಶಿ ಹಾಕಲಾಗುತ್ತಿದೆ. ಇದರ ವಿರುದ್ಧ ಈಗಾಗಲೇ ಸಾಕಷ್ಟು ಹೋರಾಟಗಳು ನಡೆದಿವೆ. ಹೋರಾಟಗಾರರೊಂದಿಗೆ ಮುಖ್ಯಮಂತ್ರಿ ಅವರು ನಡೆಸಿದ ಸಭೆಯ ಸಂದರ್ಭದಲ್ಲಿ ಕಸ ವಿಲೇವಾರಿ ಘಟಕದ ಸುತ್ತ ತಡೆಗೋಡೆ ನಿರ್ಮಾಣ, ವೈಜ್ಞಾನಿಕ ಕಸ ಸಂಸ್ಕರಣೆ ಮಾಡುವ ಭರವಸೆ ನೀಡಲಾಗಿತ್ತು. ಈ ಯಾವುದೇ ಭರಸವೆಗಳು ಒಂದು ವರ್ಷ ಕಳೆದಿದ್ದರೂ ಈಡೇರಿಲ್ಲ. ರಾಜ್ಯ ಬಜೆಟ್‌ನಲ್ಲಿ ಅಗತ್ಯ ಹಣ ಮೀಸಲಿಟ್ಟು ಕಸ ವಿಲೇವಾರಿ ಸುತ್ತಲಿನ ಗ್ರಾಮಗಳ ಜನರಿಗೆ ತೊಂದರೆಯಾಗದಂತೆ, ಹಾಗೆಯೇ ಕಸ ವಿಲೇವಾರಿಗೆ ಪರ್ಯಾಯ ವ್ಯವಸ್ಥೆಗೂ ಕ್ರಮಕೈಗೊಳ್ಳಬೇಕಿದೆ.

ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಗ್ರಾಮಾಂತರ ಜಿಲ್ಲೆಯಲ್ಲಿ ಜನಸಂಖ್ಯೆ ಹೆಚ್ಚು. ಆದರೆ, ಜಿಲ್ಲೆಯ ನಾಲ್ಕು ತಾಲ್ಲೂಕು ಕೇಂದ್ರಗಳಲ್ಲೂ ಸ್ಮಶಾನಕ್ಕೆ ಸ್ಥಳದ ಕೊರತೆ ಉಂಟಾಗಿದೆ. ಆದರೆ ಆಧುನಿಕ ಚಿತಾಗಾರ ಮಾತ್ರ ಎಲ್ಲೂ ಇಲ್ಲದಾಗಿದೆ. ಬಜೆಟ್‌ನಲ್ಲಿ ಆಧುನಿಕ ವಿದ್ಯುತ್‌ ಚಿತಾಗಾರಗಳ ನಿರ್ಮಾಣಕ್ಕೆ ಸ್ಥಳೀಯ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಬೇಕು.

ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಶಿವಗಂಗೆ, ದೇವನಹಳ್ಳಿ ಕೋಟೆ, ದೊಡ್ಡಬಳ್ಳಾಪುರ ತಾಲ್ಲೂಕಿನ ಮಾಕಳಿದುರ್ಗಾ, ಘಾಟಿ ಕ್ಷೇತ್ರ, ಹುಲುಕುಡಿ ಬೆಟ್ಟದ ವೀರಭದ್ರಸ್ವಾಮಿ ಕ್ಷೇತ್ರವನ್ನು ಪ್ರವಾಸಿ ತಾಣವಾಗಿಸಲು ಬಜೆಟ್‌ನಲ್ಲಿ ಆರ್ಥಿಕ ನೆರವು ಘೋಷಣೆಯಾಗಬೇಕು. ಇದರಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆತು ಒಂದಿಷ್ಟು ಜನರಿಗೆ ಉದ್ಯೋಗಾವಕಾಶಗಳು ದೊರೆಯಲಿವೆ.

ಈ ಹಿಂದೆಯೇ ಪ್ರವಾಸೋದ್ಯಮ ಇಲಾಖೆಯಿಂದ ಮಾಕಳಿದುರ್ಗಾ, ಗುಂಡಮಗೆರೆ ಕೆರೆಯನ್ನು ಪ್ರವಾಸಿ ಕೇಂದ್ರವಾಗಿಸಲು ₹ 1 ಕೋಟಿ ಅನುದಾನಕ್ಕೆ ಮಂಜೂರಾತಿ ದೊರೆಕಿತ್ತು. ಆದರೆ, ಹಲವಾರು ಕಾರಣಗಳಿಂದ ತಡೆ ಹಿಡಿಯಲಾಗಿದೆ. ಈ ಹಣ ಬಿಡುಗಡೆಗೆ ಬಜೆಟ್‌ನಲ್ಲಿ ಅನುಮೋದನೆ ನೀಡಬೇಕು.

ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ದೊರೆಯಲಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಣ್ಣು, ತರಕಾರಿ ಹಾಗೂ ರಫ್ತು ಗುಣಮಟ್ಟದ ಹೂವು ಬೆಳೆಗೆ ಹೆಸರಾಗಿದೆ. ಪ್ರತಿದಿನ ಬೆಂಗಳೂರು ನಗರಕ್ಕೆ ಸರಬರಾಜು ಆಗುವ ಶೇಕಡ 70ರಷ್ಟು ತರಕಾರಿ ಜಿಲ್ಲೆಯ ನಾಲ್ಕು ತಾಲ್ಲೂಕುಗಳಿಂದ ಸರಬರಾಜು ಆಗುತ್ತಿದೆ. ಆದರೆ, ನೀರಾವರಿ ಸೌಲಭ್ಯದ ಕೊರೆತಯಿಂದಾಗಿ ಅಂತರ್ಜಲದ ಮಟ್ಟ ಕುಸಿಯುತ್ತಿದೆ.

ಎತ್ತಿನಹೊಳೆ ಹಾಗೂ ಬೆಂಗಳೂರಿನಲ್ಲಿ ಶುದ್ಧೀಕರಿಸಿದ ನೀರನ್ನು ತಾಲ್ಲೂಕಿನ ಕೆರೆಗಳಿಗೆ ಹರಿಸುವ ಯೋಜನೆಗಳಿಗೆ ಬಜೆಟ್‌ನಲ್ಲಿ ಅಗತ್ಯ ಹಣಕಾಸಿನ ನೆರವನ್ನು ಮೀಸಲಿಡಬೇಕು. ಇದರಿಂದ ಉದ್ಯೋಗ ನಿಮಿತ್ತ ನಗರಗಳತ್ತ ಹೋಗುವ ಗ್ರಾಮೀಣ ಯುವ ಜನರು ಊರಿನಲ್ಲೇ ಉಳಿಯಲು ಸಾಧ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.