ADVERTISEMENT

ಬೆಂಗಳೂರು ಗ್ರಾಮಾಂತರ: ದೀಪಾವಳಿ ಸಂಭ್ರಮ; ಖರೀದಿ ಭರಾಟೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2021, 7:02 IST
Last Updated 4 ನವೆಂಬರ್ 2021, 7:02 IST
ವಿಜಯಪುರ ಪಟ್ಟಣದಲ್ಲಿ ದೀಪಾವಳಿ ಅಂಗವಾಗಿ ಮಣ್ಣಿನ ಹಣತೆ ಹಾಗೂ ನೋಮುದಾರ ಖರೀದಿ ಮಾಡುತ್ತಿರುವ ಗ್ರಾಹಕರು
ವಿಜಯಪುರ ಪಟ್ಟಣದಲ್ಲಿ ದೀಪಾವಳಿ ಅಂಗವಾಗಿ ಮಣ್ಣಿನ ಹಣತೆ ಹಾಗೂ ನೋಮುದಾರ ಖರೀದಿ ಮಾಡುತ್ತಿರುವ ಗ್ರಾಹಕರು   

ವಿಜಯಪುರ:ದೀಪಾವಳಿ ಹಬ್ಬ ಆಚರಿಸಲು ಜಿಲ್ಲೆಯ ಜನತೆ ಉತ್ಸುಕರಾಗಿದ್ದಾರೆ. ಮಹಿಳೆಯರು ಮನೆ ಮುಂದೆ ದೀಪ ಹಚ್ಚಲು ಹಣತೆಗಳ ಖರೀದಿಯಲ್ಲಿ ತೊಡಗಿದ್ದಾರೆ.

ಜೇಡಿ ಮಣ್ಣಿನಿಂದ ತಯಾರಿಸಿದ ಬಣ್ಣ ಬಣ್ಣದ ಹಣತೆ ಹಾಗೂ ಹತ್ತಾರು ಮಾದರಿಯ ಹಣತೆಗಳು ಸೇರಿದಂತೆ ವಿವಿಧ ಬಗೆಯ ಹಣತೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

ದೀಪಾವಳಿ ಎಂದರೆ ದೀಪಗಳ ಸಾಲು. ಕಾರ್ತಿಕ ಮಾಸ ಮುಗಿಯುವವರೆಗೂ ದೀಪ ಹಚ್ಚುವುದು ಸಂಪ್ರದಾಯ. ಭಾರತದಲ್ಲಿ ಧಾರ್ಮಿಕ, ಐತಿಹಾಸಿಕ ಪರಂಪರೆಯ ಮಹತ್ವವಾಗಿದೆ. ವಿಶೇಷವಾಗಿ ಮಣ್ಣಿನ ಹಣತೆಗಳು ಕಣ್ಮನ ಸೆಳೆಯುತ್ತಿವೆ.

ADVERTISEMENT

ನಗರದಲ್ಲಿ ಹಣತೆಗಳ ಖರೀದಿ ಜೋರಾಗಿ ನಡೆದಿದೆ. ಹತ್ತಾರು ಮಾದರಿಯ ಮನ ಸೆಳೆಯುವ ಹಣತೆಗಳನ್ನು ಮಾರಾಟಕ್ಕಿಡಲಾಗಿದೆ. ಅವುಗಳ ದರ ಸ್ವಲ್ಪ ಹೆಚ್ಚಾಗಿದ್ದರೂ ಹಬ್ಬ ಆಚರಿಸಲು ಜನ ಖರೀದಿಯಲ್ಲಿ ತೊಡಗಿದ್ದಾರೆ. ನಗರದ ವಿವಿಧ ಕಡೆಗಳಲ್ಲಿ ತಳ್ಳುವ ಗಾಡಿಗಳಲ್ಲಿ, ರಸ್ತೆಬದಿಗಳಲ್ಲಿ ಹಣತೆಗಳ ಮಾರಾಟ ಜೋರಾಗಿಯೇ ಇದೆ.

ಸಾಮಾನ್ಯವಾಗಿ ಮಣ್ಣಿನ ದೀಪ, ಪಿಂಗಾಣಿ ದೀಪಗಳಿಗೆ ಹೆಚ್ಚಿನ ಬೇಡಿಕೆ ಇದೆ. ಮಣ್ಣಿನ ಅಲಂಕಾರಿಕ ವಸ್ತುಗಳು ₹ 5ರಿಂದ ₹ 150ರ ವರೆಗೆ ವ್ಯಾಪಾರ ಮಾಡಲಾಗುತ್ತಿತ್ತು. ಪ್ಲಾಸ್ಟಿಕ್ ವಸ್ತುಗಳ ಭರಾಟೆಯೂ ಇದೆ. ಜೇಡಿ ಮಣ್ಣಿನಿಂದ ತಯಾರಿಸಿದ ಹಣತೆಗಳು ಗ್ರಾಹಕರಿಗೆ ಇಷ್ಟವಾಗುತ್ತಿವೆ. ಈಗಾಗಲೇ ಜಿಲ್ಲಾಡಳಿತ ಹಸಿರು ಪಟಾಕಿಗೆ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದೆ.

ವಿವಿಧ ಬಗೆಯ ದೀಪಗಳು: ವಿವಿಧ ವಿನ್ಯಾಸದ ದೀಪಗಳು ತಯಾರಿಸುವುದಲ್ಲದೆ, ತೆಂಗಿನ ಕಾಯಿ ಮಾದರಿಯ ಆಕಾರದಲ್ಲಿ ದೀಪ, ತುಳಸಿ ಕಟ್ಟೆ, ಬೃಂದಾವನ, ತಟ್ಟೆಯ ಹಣತೆ, ಒಂದು ದೀಪದಲ್ಲಿ 2 ಹಾಗೂ 5 ಕಡೆ ಬತ್ತಿ ಹಾಕುವ ರೀತಿಯಲ್ಲಿ ಹಣತೆಯ ವಿನ್ಯಾಸ ಮಾರುಕಟ್ಟೆಗೆ ಬಂದಿವೆ. ಮನೆ ಬಾಗಿಲಿನಲ್ಲಿ ದೀಪವಿಟ್ಟಾಗ ಗಾಳಿಯಲ್ಲಿ ನಂದದಂತೆ ಪುರಾತನ ಕಾಲದ ಲ್ಯಾಂಪ್ ರೀತಿಯ ದೀಪಗಳು ಗಮನ ಸೆಳೆಯುತ್ತಿವೆ.

ರಾಜಸ್ಥಾನ, ಜೋಧ್‌ಪುರ ಸೇರಿದಂತೆ ಇತರೆ ಭಾಗಗಳಿಂದ ದೀಪಗಳನ್ನು ತಂದು ಮಾರಾಟಕ್ಕಿಡಲಾಗಿದೆ. ಕರ್ನಾಟಕದ ವಿವಿಧಡೆ ತಯಾರಿಸಿರುವ ಅಲಂಕಾರಿಕ ದೀಪಗಳು ಮಾರಾಟವಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.