
ಆನೇಕಲ್: ಪಟ್ಟಣದ ಬಮೂಲ್ ಶಿಬಿರ ಕಚೇರಿಗೆ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಾಲು ಸಂಗ್ರಹಣೆ, ಶೀತಲೀಕರಣ ವ್ಯವಸ್ಥೆ, ಗುಣಮಟ್ಟ ಪರೀಕ್ಷೆ, ದೈನಂದಿನ ಆಡಳಿತಾತ್ಮಕ ಕಾರ್ಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಬಳಿಕ ಮಾತನಾಡಿದ ಅವರು, ‘ಬಮೂಲ್ ವ್ಯಾಪ್ತಿಯಲ್ಲಿನ ಹಾಲಿನ ಉತ್ಪಾದನೆ ಹೆಚ್ಚಿಸುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಶಿಬಿರ ಕಚೇರಿಗಳಲ್ಲಿನ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಲು ಖುದ್ದಾಗಿ ಭೇಟಿ ನೀಡುತ್ತಿದ್ದೇನೆ. ಬಮೂಲ್ ರೈತಸ್ನೇಹಿತ ಸಂಸ್ಥೆಯಾಗಿದ್ದು, ರೈತರು ಮತ್ತು ಹಾಲು ಉತ್ಪಾದಕರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಬೇಕು. ಶಿಬಿರ ಕಚೇರಿಯಲ್ಲಿ ಸ್ವಚ್ಛತೆ ಮತ್ತು ಪಾರದರ್ಶಕತೆ ಕಾಪಾಡಬೇಕು. ಹಾಲು ಉತ್ಪಾದಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಬೇಕು’ ಎಂದು ಹೇಳಿದರು.
ಬಮೂಲ್ ನಿರ್ದೇಶಕ ಆರ್.ಕೆ.ರಮೇಶ್ ಮಾತನಾಡಿ, ಹೈನುಗಾರರಿಗೆ ಅವಶ್ಯಕವಿರುವ ಮ್ಯಾಟ್, ರಾಸು ವಿಮೆ ಸೇರಿದಂತೆ ಹೈನುಗಾರಿಕೆಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಬಮೂಲ್ ಕಲ್ಪಿಸುತ್ತಿದೆ. ಹಾಲಿನ ಉತ್ಪಾದನೆ ಹೆಚ್ಚಿಸಲು ರೈತರು ಶ್ರಮಿಸಬೇಕು. ಉತ್ಪಾದನೆ ಮತ್ತು ಸಂಗ್ರಹಣೆಗೆ ತೊಂದರೆಯಾಗದಂತೆ ಕ್ರಮ ವಹಿಸಲು ಶಿಬಿರ ಕಚೇರಿ ಮುಖಸ್ಥರು ನಿಗಾ ವಹಿಸಬೇಕು. ಹಾಲಿನ ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿ ಇಲ್ಲ. ರೈತರಿಗೆ ಅನುಕೂಲ ಮಾಡಲು ಬಮೂಲ್ ಸದಾ ಸಿದ್ಧವಿದೆ ಎಂದರು.
ಶಾಸಕ ಬಿ.ಶಿವಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡ ಹಾಗಡೆ ಹರೀಶ್, ಪುರಸಭಾ ಮಾಜಿ ಅಧ್ಯಕ್ಷ ಎನ್.ಎಸ್.ಪದ್ಮನಾಭ, ಆನೇಕಲ್ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ.ಸಿ.ಜಿ.ಸುರೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.