ADVERTISEMENT

ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ: ಕಾಂಗ್ರೆಸ್‌ ವಿಶ್ವಾಸ

ತಮಿಳುನಾಡಿನಲ್ಲಿ ರಾಜ್ಯ ಕಾಂಗ್ರೆಸ್‌ ನಾಯಕರ ಭರ್ಜರಿ ಪ್ರಚಾರ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2021, 19:47 IST
Last Updated 27 ಮಾರ್ಚ್ 2021, 19:47 IST
ಆನೇಕಲ್ ಸಮೀಪದ ತಮಿಳುನಾಡಿನ ಗುಮ್ಮಳಾಪುರದಲ್ಲಿ ಮೈತ್ರಿಕೂಟದ ಸಿಪಿಐ ಅಭ್ಯರ್ಥಿ ಟಿ.ರಾಮಚಂದ್ರನ್ ಪರವಾಗಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರಚಾರ ನಡೆಸಿದರು
ಆನೇಕಲ್ ಸಮೀಪದ ತಮಿಳುನಾಡಿನ ಗುಮ್ಮಳಾಪುರದಲ್ಲಿ ಮೈತ್ರಿಕೂಟದ ಸಿಪಿಐ ಅಭ್ಯರ್ಥಿ ಟಿ.ರಾಮಚಂದ್ರನ್ ಪರವಾಗಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರಚಾರ ನಡೆಸಿದರು   

ಆನೇಕಲ್: ಅಭಿವೃದ್ಧಿ ಮತ್ತು ಸಮ ಸಮಾಜದ ನಿರ್ಮಾಣಕ್ಕಾಗಿ ಜಾತ್ಯತೀತ ಸಿದ್ಧಾಂತದ ಡಿಎಂಕೆ-ಕಾಂಗ್ರೆಸ್‌ ಮೈತ್ರಿಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ತಮಿಳುನಾಡಿನಲ್ಲಿ ಸ್ಟಾಲಿನ್‌ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮನವಿಮಾಡಿದರು.

ಥಳಿ ವಿಧಾನಸಭಾ ಕ್ಷೇತ್ರದಡಿಎಂಕೆ–ಕಾಂಗ್ರೆಸ್‌ ಮೈತ್ರಿಕೂಟದ ಅಭ್ಯರ್ಥಿ ಸಿಪಿಐನ ಟಿ.ರಾಮಚಂದ್ರನ್‌ ಪರ ತಮಿಳುನಾಡಿನ ಗುಮ್ಮಳಾಪುರದಲ್ಲಿ ನಡೆದಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಎಐಎಡಿಎಂಕೆ ಪಕ್ಷ ಬಿಜೆಪಿಯ ಕೈಗೊಂಬೆ. ತಮಿಳುನಾಡಿನಲ್ಲಿ ಪರಂಪರಾಗತವಾಗಿ ನಡೆದು ಬಂದ ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿ ಬಿಜೆಪಿಯೊಂದಿಗೆ ಮೈತ್ರಿ ಬೆಳೆಸಿದೆ. ಬಿಜೆಪಿ ಜನವಿರೋಧಿ ಪಕ್ಷ. ಬೆಲೆ ಏರಿಕೆ, ನಿರುದ್ಯೋಗದಿಂದಾಗಿ ಜನರು ತತ್ತರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಚುನಾವಣೆ ಸಂದರ್ಭದಲ್ಲಿ ಅಚ್ಛೇ ದಿನ್‌ ಎಂದು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಜನರಿಗೆ ಅಚ್ಛೇ ದಿನ್‌ ತರಲಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಟೀಕಿಸಿದರು. ಅವರ ಮಾತಿಗೆ‘ಹೌದು ಹುಲಿಯಾ’ ಎಂದು ಪ್ರತಿಕ್ರಿಯಿಸುತ್ತಾ ಬೆಂಬಲ ಸೂಚಿಸಿದರು.

ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದ್ದ ಬಿಜೆಪಿ ದೇಶದಲ್ಲಿ ರೈತರು ಪರದಾಡುವಂತೆ ಮಾಡಿದೆ. ರೈತ ವಿರೋಧಿ ಕಾನೂನು ವಿರೋಧಿಸಿ 120 ದಿನಗಳಿಂದ ಸಾವಿರಾರು ರೈತರು ಧರಣಿ ನಡೆಸಿದರೂ ಪ್ರಧಾನಿ ಕ್ಯಾರೆ ಎನ್ನುತ್ತಿಲ್ಲ. ಜನರ, ರೈತರ ನೋವು ನಲಿವುಗಳಿಗೆ ಸ್ಪಂದಿಸದಪ್ರಧಾನಿಯ ‘ಮನ್‌ ಕೀ ಬಾತ್’‌ ಅಲ್ಲ ‘ಮಂಕಿ ಬಾತ್’‌ ಎಂದು ಟೀಕಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾತನಾಡಿ, ಜನವಿರೋಧಿ ಚಿಂತನೆ ಮತ್ತು ನೀತಿಗಳುಳ್ಳ ಬಿಜೆಪಿ ಜತೆಗೂಡಿರುವ ಎಐಎಡಿಎಂಕೆಯನ್ನು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮೂಲೆಗುಂಪು ಮಾಡುವ ಮೂಲಕ ತಮಿಳುನಾಡಿನ ಪ್ರಜ್ಞಾವಂತ ಜನತೆ ಕೋಮುವಾದಿ ಪಕ್ಷಗಳನ್ನು ಅಧಿಕಾರದಿಂದ ದೂರವಿಡಬೇಕು ಎಂದು ಅವರು ಹೇಳಿದರು

ಹೊಸೂರು ವಿಧಾನಸಭಾ ಕ್ಷೇತ್ರದ ಡಿಎಂಕೆ ಅಭ್ಯರ್ಥಿ ಪ್ರಕಾಶ್‌ ಪರವೂ ಇದೇ ವೇಳೆ ಪ್ರಚಾರ ನಡೆಸಿದರು. ಸಂಸದ ಚೆಲ್ಲಕುಮಾರ್‌, ಶಾಸಕರಾದ ಬಿ.ಶಿವಣ್ಣ, ಜಮೀರ್‌ ಅಹಮದ್‌, ನಂಜೇಗೌಡ, ಮುಖಂಡರಾದ ಎಚ್‌.ಎಂ.ರೇವಣ್ಣ, ಮುತ್ತು ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.