ದೊಡ್ಡಬಳ್ಳಾಪುರ: 2030ರ ವೇಳೆಗೆ ಭಾರತವು ಸ್ವಂತ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಮಾಡಲಿದೆ. ಇದಕ್ಕಾಗಿ ನಮ್ಮ ವಿಜ್ಞಾನಿಗಳು ಅವಿರತ ಶ್ರಮಿಸುತ್ತಿದ್ದಾರೆ ಎಂದು ಇಸ್ರೊ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣ್ ಕುಮಾರ್ ಹೇಳಿದರು.
ನಗರದ ಬೆಸೆಂಟ್ ಪಾರ್ಕ್‌ನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್, ಭಾರತ್ ಸ್ಕೌಟ್ ಮತ್ತು ಗೈಡ್ಸ್, ಭಾರತ ಸೇವಾದಳ, ಆರ್ಯಭಟ ಕರ್ನಾಟಕ, ಭಾರತ ಡ್ರೋಮ್ ಸಂಸ್ಥೆಯಿಂದ ವಿಶ್ವ ದಾಖಲೆಗಾಗಿ ಒಂಬತ್ತು ದಿನಗಳ ಕಾಲ ನಡೆಯುವ ರಾಜ್ಯಮಟ್ಟದ ಟೆಲಿಸ್ಕೋಪ್ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
2040ರ ವೇಳೆಗೆ ಭಾರತೀಯರು ಚಂದ್ರನ ಮೇಲೆ ಇಳಿದು ಹಿಂತಿರುಗಲು ಬೇಕಾದ ಸಿದ್ಧತೆ ನಡೆಯುತ್ತಿದ್ದು, ಸಂಶೋಧನೆ ಮತ್ತು ಪ್ರಯೋಗಳು ನಡೆಯುತ್ತಿವೆ. ಬಾಹ್ಯಕಾಶ ಕ್ಷೇತ್ರದಲ್ಲಿನ ಈ ಎಲ್ಲಾ ಬೆಳವಣಿಗೆಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಲ್ಲರಲ್ಲೂ ಅಗಾಧ ಕ್ಷಮತೆ ಇರುತ್ತದೆ. ಪ್ರತಿಯೊಬ್ಬರಿಗೂ ಐದು ಕರ್ಮೇಂಧ್ರಿಯಗಳಿವೆ, ಜೊತೆಗೆ ಅಸಲಿ ಬುದ್ದಿವಂತಿಕೆಯೂ ಇದೆ. ಇದು ಹಂತ ಹಂತವಾಗಿ ನಮ್ಮನ್ನು ಬೆಳೆಸಿಕೊಂಡು ಹೋಗುತ್ತದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು. ಗುರಿಯೆಡೆಗೆ ಕೆಲಸ ಮಾಡಿದರೆ ಏನನ್ನು ಬೇಕಾದರೂ ಸಾಧನೆ ಮಾಡಬಹುದು ಎಂದು ಹೇಳಿದರು.
ಪ್ರಕೃತಿಯಲ್ಲಿ ಅಡಗಿರುವ ಶಕ್ತಿ ಆವಿಷ್ಕಾರ ಮಾಡುವವರೇ ವಿಜ್ಞಾನಿಗಳು. ಟೆಲಿಸ್ಕೋಪ್ ಕಂಡುಹಿಡಿದವರು ಗೆಲಿಲಿಯೋ, ವಿಜ್ಞಾನದ ಮೂಲ ಅಂಶಗಳನ್ನು ತಿಳಿದುಕೊಳ್ಳಬೇಕು ಎಂದು ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ ಸೋಮಶೇಖರ್ ತಿಳಿಸಿದರು.
ರಾಜ್ಯದ ವಿವಿಧ ಶೈಕ್ಷಣಿಕ ಜಿಲ್ಲೆಗಳ 163 ಮಕ್ಕಳು ಭಾಗಿಯಾಗಿ ಟೆಲಿಸ್ಕೋಪ್ ತಯಾರಿಕಾ ಶಿಬಿರದಲ್ಲಿ ಭಾಗಿಯಾಗಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ್, ವಿಜ್ಞಾನಿ ಡಾ.ಪಿ.ಜಿ ದಿವಾಕರ್ ಇದ್ದರು.
ಎಐ ಬೆಳವಣಿಗೆ ವೇಗಕ್ಕೆ ತಕ್ಕಂತೆ ಮಕ್ಕಳಿಗೆ ಮೌಲ್ಯ ಕಲಿಸಿ...
ಶಾಸಕ ಧೀರಜ್ ಮುನಿರಾಜು ‘ನಾವು ಸ್ಪರ್ಧಾತ್ಮಕ ಜಗತ್ತಿನಲ್ಲಿ ಇದ್ದೇವೆ. ಕೃತಕ ಬುದ್ಧಿಮತ್ತೆ ವೇಗವಾಗಿ ಬೆಳೆಯುತ್ತಿದೆ. ಅಷ್ಟೇ ವೇಗವಾಗಿ ಮಕ್ಕಳಿಗೆ ಮೌಲ್ಯಗಳನ್ನು ಕಲಿಸುವ ಕೆಲಸ ಆಗುತ್ತಿಲ್ಲ. ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ಮಾನಸಿಕ ಮನಸ್ಥಿತಿ ಬದಲಾವಣೆ ತರುವ ಕೆಲಸ ಆಗಬೇಕಿದೆ. ಆಗ ಮಾತ್ರ ವಿಕಸಿತ ಭಾರತದ ಕನಸು ನನಸಾಗಲಿದೆ’ ಎಂದು ಹೇಳಿದರು. ವಿಜ್ಞಾನದ ಕಲ್ಪನೆ ಮಕ್ಕಳಲ್ಲಿ ಬಿತ್ತಬೇಕು.ಎಲ್ಲಾ ರಂಗದ ಬಗ್ಗೆ ಮಕ್ಕಳಿಗೆ ತಿಳಿಸಬೇಕು.ವಿದ್ಯಾವಂತಿಕೆ ಬುದ್ದಿವಂತಿಕೆಯಿಂದ ಯಶಸ್ಸು ಸಾಧ್ಯ. ವಿಜ್ಞಾನ ತಂತ್ರಜ್ಞಾನದಲ್ಲೂ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.