ADVERTISEMENT

ದೊಡ್ಡಬಳ್ಳಾಪುರ | ಚೆಕ್‌ ತಿದ್ದಿದ ರಿಯಲ್ ಎಸ್ಟೇಟ್‌ ಮಧ್ಯವರ್ತಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2023, 16:49 IST
Last Updated 6 ಆಗಸ್ಟ್ 2023, 16:49 IST
₹5 ಲಕ್ಷದ ಚೆಕ್ ಅನ್ನು ₹65 ಲಕ್ಷ ಎಂದು ತಿದ್ದಲಾಗಿರುವ ಚೆಕ್‌
₹5 ಲಕ್ಷದ ಚೆಕ್ ಅನ್ನು ₹65 ಲಕ್ಷ ಎಂದು ತಿದ್ದಲಾಗಿರುವ ಚೆಕ್‌   

ದೊಡ್ಡಬಳ್ಳಾಪುರ: ಜಮೀನು ಖರೀದಿಸಿದವರು ನೀಡಿದ್ದ ₹5 ಲಕ್ಷ ಮೊತ್ತದ ಚೆಕ್‌ನಲ್ಲಿ ₹65 ಲಕ್ಷ ಎಂದು ತಿದ್ದಿ ಹಣ ಪಡೆಯಲು ಹೋಗಿದ್ದ ರಿಯಲ್‌ ಎಸ್ಟೇಟ್‌ ಮಧ್ಯವರ್ತಿಯೊಬ್ಬರು ಬ್ಯಾಂಕ್‌ ಸಿಬ್ಬಂದಿ ಕೈಗೆ ಸಿಕ್ಕಿಹಾಕಿಕೊಂಡ ಘಟನೆ ನಗರದಲ್ಲಿ ನಡೆದಿದೆ. 

ಚೆಕ್‌ ತಿದ್ದಿದ ಆರೋಪದ ಮೇಲೆ ಕಳೆದ ವಾರ ಗ್ರಾಮಾಂತರ ಪೊಲೀಸ್‌ ಠಾಣೆ ಪೊಲೀಸರು ಬಂಧಿಸಿದ್ದ ನಗರದ ರಿಯಲ್‌ ಎಸ್ಟೇಟ್‌ ಮಧ್ಯವರ್ತಿ ಎಂ.ಸಿ.ಚಂದ್ರಶೇಖರ್‌ ಶನಿವಾರ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ.

ಎರಡು ಎಕರೆ ಜಮೀನು ವ್ಯವಹಾರದಲ್ಲಿ ಮಧ್ಯವರ್ತಿಯಾಗಿದ್ದ ಎಂ.ಸಿ.ಚಂದ್ರಶೇಖರ್ ಅವರಿಗೆ ಕಮಿಷನ್ ರೂಪದಲ್ಲಿ ಆಂಜಿನಪ್ಪ ಎಂಬುವರು ತಲಾ ₹5 ಲಕ್ಷದ ಎರಡು ಚೆಕ್ ನೀಡಿದ್ದರು. ಮೊದಲ ಚೆಕ್ ಡ್ರಾ ಮಾಡಿಕೊಂಡಿದ್ದ ಚಂದ್ರಶೇಖರ್, ಎರಡನೇ ಚೆಕ್ ಡ್ರಾ ಮಾಡಿಕೊಳ್ಳುವಾಗ ₹5 ಲಕ್ಷವನ್ನು ₹65 ಲಕ್ಷ ಎಂದು ತಿದ್ದಿದ್ದರು. 

ADVERTISEMENT

ಚೆಕ್ ನೋಡಿ ಅನುಮಾನಗೊಂಡ ಬ್ಯಾಂಕ್ ಸಿಬ್ಬಂದಿ, ಚೆಕ್‌ ನೀಡಿದ್ದ ಆಂಜಿನಪ್ಪ ಅವರಿಗೆ ಕರೆ ಮಾಡಿ ಕೇಳಿದಾಗ ವಿಷಯ ಬೆಳಕಿಗೆ ಬಂದಿದೆ. ಚಂದ್ರಶೇಖರ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಆಂಜಿನಪ್ಪ ದೂರು ದಾಖಲಿಸಿದ್ದಾರೆ.

ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಚೆಕ್‌ ಕಳಿಸಿ ವರದಿ ಕೋರಿದ್ದರು. ಚೆಕ್ ತಿದ್ದಿರುವುದು ಸಾಬೀತಾದ ಕಾರಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.