ದೊಡ್ಡಬಳ್ಳಾಪುರ: 2024 ಅನ್ನು ತಾಲ್ಲೂಕಿನಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು. ಹೊಸ ವರ್ಷ ಆರಂಭದ ರಾತ್ರಿ 12 ಗಂಟೆ ವೇಳೆಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಹೊಸ ವರ್ಷದ ಅಂಗವಾಗಿ ಭಾನುವಾರ ರಾತ್ರಿಯಿಂದಲೇ ಚರ್ಚ್‍ಗಳಲ್ಲಿ ವಿಶೇಷ ಪ್ರಾರ್ಥನೆಗಳು ನಡೆದವು. ಹೊಸವರ್ಷದ ಶುಭಾಶಯ ವಿನಿಮಯ ದೃಶ್ಯ ಎಲ್ಲಡೆ ಕಂಡು ಬಂದಿತು. ಮನೆಗಳ ಮುಂದೆ ಹೊಸ ವರ್ಷದ ಶುಭಕೋರುವ ರಂಗೋಲಿಗಳು ಗಮನ ಸೆಳೆದವು. ಅಂಗಡಿ ಮುಗ್ಗಟ್ಟುಗಳಿಗೆ ವಿಶೇಷ ದೀಪಾಲಂಕಾರ, ಕೇಕ್ ಕತ್ತರಿಸುವ ಮೂಲಕ ವರ್ಷಾಚರಣೆ ಆಚರಣೆ ಮಾಡಲಾಯಿತು.
ನಗರದ ಟಿ.ಬಿ.ವೃತ್ತದ ಬಳಿಯಿರುವ ಸಂತ ಪೇತ್ರರ ಚರ್ಚ್‍ನಲ್ಲಿ ಫಾದರ್ ಆಂಟೋನಿ ಡಿಸೋಜಾ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಚರ್ಚ್‍ನಲ್ಲಿ ಬಲಿ ಪೂಜೆ ನಡೆಸಲಾಯಿತು. ತಾಲ್ಲೂಕಿನ ಘಾಟಿ ಕ್ಷೇತ್ರದ ಸುಬ್ರಹ್ಮಣ್ಯದೇವಾಲಯ, ಕನಸವಾಡಿಯ ಮಧುರೆ ದೇವಾಲಯಗಳಲ್ಲಿ ಹೊಸ ವರ್ಷದ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು.
ನಗರದ ಡಿ.ಕ್ರಾಸ್ ರಸ್ತೆಯಲ್ಲಿರುವ ಶ್ರೀಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಕೃಷ್ಣ ರಾಜೇಂದ್ರ ಮಾರುಕಟ್ಟೆ ವರ್ತಕರಿಂದ ಹಾಗೂ ಅಯ್ಯಪ್ಪಸ್ವಾಮಿ ಭಕ್ತ ಮಂಡಲಿ ವತಿಯಿಂದ ಹೊಸ ವರ್ಷದ ಅಂಗವಾಗಿ, ವಿಶೇಷ ಅಲಂಕಾರ ಮಾಡಲಾಗಿತ್ತು.
ಶ್ರೀಸೂರ್ಯ ಪದವಿ ಪೂರ್ವ ಕಾಲೇಜು ಮತ್ತು ಶ್ರೀ ರಾಮ ನರ್ಸಿಂಗ್ ಕಾಲೇಜಿನಲ್ಲಿ ನೂತನ ವರ್ಷದ ಕಾರ್ಯಕ್ರಮವನ್ನು ವಿದ್ಯಾರ್ಥಿಗಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಬಿ.ಮುದ್ದಪ್ಪ, ಆಡಳಿತ ಮಂಡಳಿ ನಿರ್ದೇಶಕ ಡಾ.ಎಚ್.ಜಿ.ವಿಜಯಕುಮಾರ್, ಕಾಲೇಜಿನ ಪ್ರಾಂಶುಪಾಲ ಎಂ.ಸಿ.ಮಂಜುನಾಥ್, ಉಪನ್ಯಾಸಕ ಟಿ.ಪುನೀತ್, ಎಂ.ಎನ್.ಕಲ್ಪನಾ ಉಮ್ಮೇಮುಸ್ಕಾನ್, ರೂಪ, ಪವನ್ ಕುಮಾರ್, ನಾಗೇಶ್, ಗಂಗಾಧರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.