ದೊಡ್ಡಬಳ್ಳಾಪುರ: ಮುತ್ತೂರಿನಲ್ಲಿ ಶುಕ್ರವಾರ ಸಂಜೆ ಗಣೇಶ ವಿಸರ್ಜನೆ ವೇಳೆ ನಡೆದ ಪಟಾಕಿ ದುರಂತದಲ್ಲಿ ಬಾಲಕ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮೂರ್ತಿ ಪ್ರತಿಷ್ಠಾಪಿಸಿದ್ದ ಮಾರುತಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಪಟಾಕಿ ಸ್ಫೋಟದಲ್ಲಿ ಗಂಭೀರ ಗಾಯಗೊಂಡಿದ್ದ ಪೊಲೀಸ್ ಕಾನ್‌ಸ್ಟೇಬಲ್ ಜಾಕಿರ್ ಹುಸೇನ್ ಅವರ ಕೈಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪಟಾಕಿ ಸಿಡಿದು ಅವರ ರಟ್ಟೆಯ ಮಾಂಸಖಂಡಗಳು ಕಿತ್ತುಕೊಂಡು ಹೋಗಿ, ಬರೀ ಮೂಳೆ ಉಳಿದಿತ್ತು.
ಗಂಭೀರವಾಗಿ ಗಾಯಗೊಂಡಿರುವ ಯೋಗೇಶ್ ಎಂಬಾತನಿಗೆ ಚಿಕಿತ್ಸೆ ಮುಂದುವರೆದಿದೆ. ಈತನ ದೇಹದ ಬಹುಭಾಗ ಪಟಾಕಿ ಸ್ಫೋಟದಲ್ಲಿ ಸುಟ್ಟು ಹೋಗಿದೆ. ಉಳಿದ ಐದು ಜನರ ಆರೋಗ್ಯ ಸುಧಾರಿಸಿದೆ ಎಂದು ಎಂದು ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಅಮರೇಶ್‌ಗೌಡ ತಿಳಿಸಿದ್ದಾರೆ.
ಸಚಿವ ಭೇಟಿ: ಮುತ್ತೂರಿನ ಪಟಾಕಿ ಸ್ಫೋಟದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಶನಿವಾರ ಭೇಟಿ ನೀಡಿ ಮಾಹಿತಿ ಪಡೆದರು. ಸ್ಫೋಟದಲ್ಲಿ ಗಾಯಗೊಂಡು ನಗರದ ಆದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಜಿಲ್ಲೆಯಾದ್ಯಂತ ಗಣೇಶ ಕೂರಿಸಿರುವ ಸ್ಥಳಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಅವರು ಆಯೋಜಕರಿಗೆ ಪಟಾಕಿ ಸಿಡಿಸದಂತೆ ಸೂಚನೆ ನೀಡಿದರು. ಜೊತೆಗೆ ಗಣೇಶ ವಿಸರ್ಜನೆ, ಮೆರವಣಿಗೆ, ಸಂಭ್ರಮ ಸಂದರ್ಭದಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸುವಂತೆ ಪೊಲೀಸರಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಉಪವಿಭಾಗಾಧಿಕಾರಿ ಎನ್.ದುರ್ಗಾಶ್ರೀ, ಡಿವೈಎಸ್‌ಪಿ ರವಿ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ರಾಜಣ್ಣ ಇದ್ದರು.
- ಪಟಾಕಿ ಸಂಪೂರ್ಣ ನಿಷೇಧ
ದೇವನಹಳ್ಳಿ: ದೊಡ್ಡಬಳ್ಳಾಪುರದ ಮುತ್ತೂರು ಪಟಾಕಿ ಘಟನೆ ನಂತರ ಜಿಲ್ಲೆಯಲ್ಲಿ ಗಣೇಶ ಉತ್ಸವ ಹಾಗೂ ಮೂರ್ತಿ ವಿಸರ್ಜನೆ ವೇಳೆ ಪಟಾಕಿ ಸಿಡಿಮದ್ದು ಮತ್ತು ಇತರ ಸ್ಫೋಟಕ ವಸ್ತುಗಳನ್ನು ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಾದ್ಯಂತ ಸುಮಾರು 1800 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಈ ಜಾಗಗಳಲ್ಲಿ ಹಾಗೂ ಮೂರ್ತಿ ವಿಸರ್ಜನೆ ವೇಳೆ ಸಾರ್ವಜನಿಕರ ಹಿತದೃಷ್ಟಿಯಿಂದ ಪಟಾಕಿ ಸಿಡಿಸುವಂತಿಲ್ಲ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.