
ಕನಸವಾಡಿ (ದೊಡ್ಡಬಳ್ಳಾಪುರ): ತಾಲ್ಲೂಕಿನ ಕನಸವಾಡಿಯಲ್ಲಿ ಶನಿಮಹಾತ್ಮ 71ನೇ ವರ್ಷದ ರಥೋತ್ಸವ ಗುರುವಾರ ವಿಜೃಂಭಣೆಯಿಂದ ನಡೆಯಿತು.
ದೊಡ್ಡಬಳ್ಳಾಪುರ, ಬೆಂಗಳೂರು, ನೆಲಮಂಗಲ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಸಹಸ್ರಾರು ಭಕ್ತಾದಿಗಳು ರಥೋತ್ಸವದಲ್ಲಿ ಭಾಗವಹಿಸಿ ರಥಕ್ಕೆ ಹಣ್ಣು, ದವನ ಸಮರ್ಪಿಸಿದರು. ರಥೋತ್ಸವದಲ್ಲಿ ವೀರಗಾಸೆ, ಚೆಂಡೆ ವಾದ್ಯ, ಗಾರುಡಿ ಬೊಂಬೆ, ಸೋಮನ ಕುಣಿತ, ಕೇರಳದ ಕಲಾವಿದರ ದೇವತಾ ಮೂರ್ತಿಗಳ ಪ್ರದರ್ಶನಗಳ ತಂಡಗಳೊಡನೆ ತಮಟೆ ವಾದನೆ, ಮಂಗಳವಾದ್ಯ ಜಾನಪದ ಕಲಾತಂಡಗಳು ಭಾಗವಹಿಸಿದ್ದವು.
ರಥೋತ್ಸವದ ಅಂಗವಾಗಿ ಶನಿಮಹಾತ್ಮಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯದಲ್ಲಿ ಮಹಾಗಣಪತಿ, ನವಗ್ರಹ, ಶನೇಶ್ವರ ಹೋಮ, ಪೂಜಾ ಕಾರ್ಯಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ರಥೋತ್ಸವಕ್ಕೂ ಮುನ್ನ ಮೆರವಣಿಗೆಯಲ್ಲಿ ದೇವರನ್ನು ಪಾನಕ ಹಂಚಿಕೆ ಸ್ಥಳಕ್ಕೆ ಹೊತ್ತುಕೊಂಡು ಹೋಗಿ ಪೂಜೆ ಸಲ್ಲಿಸಲಾಯಿತು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಸ್ನೇಹ ಸಂಗಮ ಹಳೆ ವಿದ್ಯಾರ್ಥಿಗಳಿಂದ ಪಾನಕ, ಕೋಸಂಬರಿ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.