ADVERTISEMENT

ಸಂಸ್ಕಾರಕ್ಕೆ ಜಾಗ ತಿಳಿಯದೆ ಮೋರಿ ಬಳಿ ಮಗುವಿನ ಶವ ಇಟ್ಟಿದ್ದ ಪೋಷಕರು

ದೊಡ್ಡಬಳ್ಳಾಪುರ: ಮಗುವಿನ ಪೋಷಕರ ಪತ್ತೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2023, 4:01 IST
Last Updated 6 ಡಿಸೆಂಬರ್ 2023, 4:01 IST
<div class="paragraphs"><p>ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಸಮೀಪದ ಸೋಮವಾರ ಮೋರಿಯಿಂದ ಹೆಣ್ಣು ಮಗುವಿನ ಮೃತ ದೇಹ ಹೊರತಂದ ಸ್ಥಳೀಯರು</p></div>

ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಸಮೀಪದ ಸೋಮವಾರ ಮೋರಿಯಿಂದ ಹೆಣ್ಣು ಮಗುವಿನ ಮೃತ ದೇಹ ಹೊರತಂದ ಸ್ಥಳೀಯರು

   

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಮೋರಿಯಲ್ಲಿ ಸೋಮವಾರ ಬೆಳಿಗ್ಗೆ ಪತ್ತೆಯಾಗಿದ್ದ ಮೃತ ಮಗುವಿನ ಪೋಷಕರನ್ನು ಹುಡುಕುವಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೃತ ಮಗುವನ್ನು ಬಿಹಾರ ಕೂಲಿಕಾರ್ಮಿಕ ದಂಪತಿಯ ಒಂದು ವರ್ಷದ ಪುತ್ರಿ ರುಚಿ ಕುಮಾರಿ ಎಂದು ಗುರುತಿಸಲಾಗಿದೆ. ಪ್ರಮೇಶ್‌ ಕುಮಾರ್‌ ಮತ್ತು ವಿಭಾ ಕುಮಾರಿ ದಂಪತಿ ವಾರದ ಹಿಂದೆ ಬಿಹಾರದಿಂದ ಕೂಲಿ ಕೆಲಸ ಹುಡುಕಿಕೊಂಡು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಬಂದಿದ್ದರು. ಬಿಹಾರದ ಜನರೊಂದಿಗೆ
ಇದ್ದರು.

ADVERTISEMENT

ದಂಪತಿ ಪುತ್ರಿ ರುಚಿ ಕುಮಾರಿ ಉಸಿರಾಟ ಸಮಸ್ಯೆಯಿಂದ ಭಾನುವಾರ ಮೃತಪಟ್ಟಿದ್ದಳು. ಪೋಷಕರು ಹೊಸಬರಾದ ಕಾರಣ  ಮಗುವನ್ನು ಎಲ್ಲಿ ಸಂಸ್ಕಾರ ಮಾಡಬೇಕು ಎಂದು ತೋಚದೆ ಮೋರಿಯ ಅಂಚಿನಲ್ಲಿ ಶಾಲು ಹಾಸಿ ಮಲಗಿಸಿ ಹೋಗಿದ್ದರು ಎಂದು ಗ್ರಾಮಾಂತರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಮುನಿಕೃಷ್ಣ
ತಿಳಿಸಿದ್ದಾರೆ. 

ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಮಗುವನ್ನು ಪೋಷಕರು ಭಾನುವಾರ ಮಧ್ಯಾಹ್ನ ಬಾಶೆಟ್ಟಿಹಳ್ಳಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದರು. ಆದರೆ, ಮಗು ಸಂಜೆ ವೇಳೆಗೆ ಮೃತಪಟ್ಟಿದೆ. ಪೋಷಕರು ಮಗುವಿನೊಂದಿಗೆ ಆಸ್ಪತ್ರೆಗೆ ಬಂದು ಚಿಕಿತ್ಸೆ ಕೊಡಿಸಿಕೊಂಡು ಹೋಗಿರುವ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ ಎಂದು ಅವರು ತಿಳಿಸಿದರು.

ತಾಯಿತ ನೀಡಿದ ಮಾಹಿತಿ

ಮೃತ ಮಗುವಿನ ಕತ್ತಿನಲ್ಲಿ ಕಟ್ಟಲಾಗಿದ್ದ ತಾಯಿತ ಗಮನಿಸಿದ ಪೊಲೀಸರು ಉತ್ತರ ಭಾರತದವರೇ ಹೆಚ್ಚಾಗಿ ಈ ತಾಯಿತಗಳನ್ನು ಕತ್ತಿನಲ್ಲಿ ಕಟ್ಟುವುದು ಎನ್ನುವುದರ ಆಧಾರದ ಮೇಲೆ ತನಿಖೆ ಕೈಗೊಂಡಿದ್ದರು. ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಉತ್ತರ ಭಾರತದ ಜನರು ವಾಸಮಾಡುವ ಪ್ರದೇಶಗಳಲ್ಲಿ ಮೃತ ಮಗುವಿನ ಫೋಟೊದೊಂದಿಗೆ ವಿಚಾರಣೆ ನಡೆಸಿದ್ದರು. ಮಗುವಿನ ಫೋಟೊ ನೋಡಿದ ಬಿಹಾರ ಕೂಲಿಕಾರ್ಮಿಕರು ಪೋಷಕರ ಬಗ್ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.