ADVERTISEMENT

ದೊಡ್ಡಬಳ್ಳಾಪುರ: ಗ್ರಾಮೀಣ ಪ್ರದೇಶಕ್ಕೆ ನಗರದ ಮಾಲಿನ್ಯ ಗಿಫ್ಟ್‌

ಅರಣ್ಯ ಪ್ರದೇಶಕ್ಕೆ ಕೈಗಾರಿಕೆ ದ್ರವ್ಯ ತ್ಯಾಜ್ಯ । ಕೆರೆಗಳಿಗೆ ನಗರದ ಕೊಳಚೆ । ಹೆಚ್ಚಿದ ಪರಿಸರ ದೌರ್ಜನ್ಯ । ನಿದ್ರೆಗೆ ಜಾರಿದ ಅಧಿಕಾರಿಗಳು

ನಟರಾಜ್ ನಾಗಸಂದ್ರ
Published 2 ಜೂನ್ 2025, 4:11 IST
Last Updated 2 ಜೂನ್ 2025, 4:11 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಅರಳುಮಲ್ಲಿಗೆ ಕೆರೆ ಅಂಗಳದಲ್ಲಿ ಆಸ್ಪತ್ರೆ ತ್ಯಾಜ್ಯ    
ದೊಡ್ಡಬಳ್ಳಾಪುರ ತಾಲ್ಲೂಕಿನ ಅರಳುಮಲ್ಲಿಗೆ ಕೆರೆ ಅಂಗಳದಲ್ಲಿ ಆಸ್ಪತ್ರೆ ತ್ಯಾಜ್ಯ       

ದೊಡ್ಡಬಳ್ಳಾಪುರ: ಬಿಬಿಎಂಪಿ ಕಸ, ಕೈಗಾರಿಕೆ ತ್ಯಾಜ್ಯ ನೀರು, ನಗರಸಭೆ ವ್ಯಾಪ್ತಿಯ ಕೊಳಚೆ ಗ್ರಾಮೀಣ ಭಾಗದ ಕೆರೆಗಳನ್ನು ಸೇರುತಿದೆ. ಹೀಗೆ ತಾಲ್ಲೂಕಿನ ಕೆರೆ, ಗ್ರಾಮೀಣ ಪ್ರದೇಶವನ್ನು ಕಸ ಮತ್ತು ಕೊಳಚೆ ನೀರು ಆವರಿಸಿಕೊಂಡು ಸ್ವಚ್ಛ ಪರಿಸರವನ್ನು ಕಲುಷಿತಗೊಳಿಸುತ್ತಿದೆ.

ಈ ಮೂಲಕ ನಗರ ಭಾಗಕ್ಕೆ ಸೊಪ್ಪು–ತರಕಾರಿ, ಹಣ್ಣು ನೀರು ಮತ್ತು ಶುದ್ಧ ಗಾಳಿ ಪೂರೈಸುವ ಕಾಮಧೇನಿನಂತೆ ಇರುವ ಗ್ರಾಮೀಣ ಭಾಗಕ್ಕೆ ಅಲ್ಲಿನ ಜನರು ಕೊಟ್ಟ ಉಡುಗೊರೆ ಇದು.

ಗ್ರಾಮೀಣ ಪ್ರದೇಶ ಜನ ಮತ್ತು ಪರಿಸರ ಮೇಲೆ ಇಷ್ಟೆಲ್ಲೆ ದೌರ್ಜನ್ಯ ನಡೆಯುತ್ತಿದ್ದರೂ  ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿ ಹಾಗೂ ತಾಲ್ಲೂಕು ಆಡಳಿತ ಗಾಡ ನಿದ್ರೆಗೆ ಜಾರಿದೆ.

ADVERTISEMENT

ಜನರು ಪ್ರತಿಭಟಿಸಿದಾಗ ಮಾತ್ರ ಕ್ರಮದ ಭರವಸೆ ನೀಡಿ ಜವಾಬ್ದಾರಿಯಿಂದ ನುಳುಚಿಕೊಳ್ಳುತ್ತಿದೆ. ಇನ್ನೂ ಹೆಚ್ಚಿಗೆ ಪ್ರಶ್ನಿಸುವವರ ಬಾಯಿ ಮುಚ್ಚಿಸಲು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸುವ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕಲಾಗುತ್ತಿದೆ. ಆದರೆ ದಿನದಿಂದ ದಿನಕ್ಕೆ ಕೊಳಚೆ ನೀರಿನ ವ್ಯಾಪ್ತಿ ಬೇರೆ ಬೇರೆ ಕೆರೆಗಳಿಗೆ ವಿಸ್ತರಿಸುತ್ತಲೇ ಸಾಗುತ್ತಿದೆ. 

ಕೆರೆ ಆವರಣದಲ್ಲಿ ವೈದ್ಯಕೀಯ ತ್ಯಾಜ್ಯ: ದೊಡ್ಡಬಳ್ಳಾಪುರ ನಗರಸಭೆಗೆ ಕುಡಿಯುವ ನೀರು ಸರಬರಾಜು ಮಾಡುವ ಪ್ರಮುಖ ಹಾಗೂ ಪ್ರಥಮ ಕೆರೆ ಅರಳುಮಲ್ಲಿಗೆ. ಇಲ್ಲಿಂದ ಪ್ರತಿ ದಿನ ಸಾವಿರಾರು ಎಂಎಲ್‌ಡಿ ನೀರು ಕೆರೆ ಅಂಗಳದಲ್ಲಿನ ಕೊಳವೆ ಬಾವಿಗಳ ಮೂಲಕ ಸರಬರಾಜು ಆಗುತ್ತಿದೆ.

ನಗರಕ್ಕೆ ನೀರು ಸರಬರಾಜು ಮಾಡಲು ಕೊರೆಸಲಾಗಿರುವ ಸುಮಾರು 20 ಕೊಳವೆ ಬಾವಿಗಳು ಇರುವ ಸುತ್ತಮುತ್ತಲಿನ ಗುಂಡಿಗಳಲ್ಲಿಯೇ ನಗರಸಭೆ ವ್ಯಾಪ್ತಿಯ ಕರೇನಹಳ್ಳಿ ಭಾಗದ ಚರಂಡಿಗಳಿಂದ ಹರಿದುಬರುವ ಕೊಳಚೆ ನೀರು ಸಂಗ್ರಹವಾಗುತ್ತಿದೆ. ಇದೇ ನೀರು ಮತ್ತೆ ಭೂಮಿಯಲ್ಲಿ ಹಿಂಗಿ ಕೊಳವೆ ಬಾವಿಗಳ ಮೂಲಕ ಮತ್ತೆ ನಗರಕ್ಕೆ ಸರಬರಾಜು ಆಗುತ್ತಿವೆ.

ಕುಡಿಯುವ ನೀರು ಸಬರಾಜು ಆಗುವ ಇದೇ ಅರಳುಮಲ್ಲಿಗೆ ಕೆರೆಗೆ ಕೋಳಿ ತ್ಯಾಜ್ಯ, ಆಸ್ಪತ್ರೆಗಳಲ್ಲಿ ಬಳಸಿದ ಸೂಜಿ, ಸಿರಿಂಜ್, ಡ್ರೆಸ್ಸಿಂಗ್ ಬಟ್ಟೆಗಳು, ರೋಗ ನಿರ್ಣಯ ಮಾದರಿಗಳು, ಔಷಧಿಗಳು, ವೈದ್ಯಕೀಯ ಸಾಧನಗಳ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ.

ಇದರ ವಿರುದ್ಧ ಇತ್ತೀಚೆಗೆ ವಿಜಯ ಕರ್ನಾಟಕ ಕನ್ನಡ ರಕ್ಷಣ ವೇದಿಕೆ ಸಂಘಟನೆಯಿಂದ ಪ್ರತಿಭಟನೆ ನಡೆಸಿ ಆಸ್ಪತ್ರೆಗಳ ತ್ಯಾಜ್ಯವನ್ನು ಕೆರೆ ಅಂಗಳಕ್ಕೆ ಬಾರದಂತೆ ತಡೆಯಲು ಎಚ್ಚರಿಕೆ ನೀಡಲಾಗಿತ್ತು. ಆದರೆ ಅದು ಇದುವರೆಗೂ ಅನುಷ್ಠಾನಕ್ಕೆ  ಬಂದಿಲ್ಲ, ಇಲ್ಲಿನ ಅಪಾಯಕಾರಿ ಮೆಡಿಕಲ್‌ ತ್ಯಾಜ್ಯವನ್ನು ತೆರವು ಮಾಡಿಲ್ಲ.

ಕೆರೆಗಳಿಗೆ ಮಾತ್ರ ಹರಿಯುತ್ತಿದ್ದ ಕೈಗಾರಿಕೆಗಳ ತ್ಯಾಜ್ಯ ನೀರು ಈಗ ರಾತ್ರಿ ವೇಳೆ ಟ್ಯಾಂಕರ್‌ಗಳ ಮೂಲಕ ತುಂಬಿಕೊಂಡು ಹೋಗಿ ಗುಂಡಮಗೆರೆ ಅರಣ್ಯ ಪ್ರದೇಶ, ರಾಷ್ಟ್ರೀಯ ಹೆದ್ದಾರಿ ಬದಿಯ ಕಾಲುವೆಗಳಿಗೆ ಸುರಿದು ಬರಲಾಗುತ್ತಿದೆ. ಈ ತ್ಯಾಜ್ಯ ನೀರಿನಿಂದ ಅರಣ್ಯ ಪ್ರದೇಶದ ಗಿಡ ಮರಗಳಿಗೆ ಕುತ್ತು ತರುತ್ತಿದೆ.  ಪ್ರಾಣಿ ಸಂಕುಲಗಳ ಸಾವಿಗೂ ಕಾರಣವಾಗುತ್ತಿದೆ. ಈ ತ್ಯಾಜ್ಯ ಯಾವ ಕೈಗಾರಿಕೆಯಿಂದ ತಂದು ಸುರಿಯಲಾಗುತ್ತಿದೆ ಎನ್ನುವುದನ್ನು ತ್ಯಾಜ್ಯ ನೀರಿನ ಮಾದರಿಯ ಪರೀಕ್ಷೆಯಿಂದ ಪತ್ತೆ ಮಾಡುವಲ್ಲೂ ಮಾಲಿನ್ಯ ನಿಯಂತ್ರಣ ಮಂಡಳಿ ವಿಫಲವಾಗಿದೆ ಎನ್ನುವುದು ಪರಿಸರ ಪರ ಹೋರಾಟಗಾರರ ಆರೋಪ.

ಗುಂಡಮಗೆರೆ ಅರಣ್ಯ ಪ್ರದೇಶದಲ್ಲಿ ಟ್ಯಾಂಕರ್‌ ಮೂಲಕ ಕೈಗಾರಿಕಾ ತ್ಯಾಜ್ಯ ಹರಿಸಲಾಗಿತು.(ಸಂಗ್ರಹ ಚಿತ್ರ)
ದೊಡ್ಡಬಳ್ಳಾಪುರ ತಾಲ್ಲೂಕಿನ ಅರಳುಮಲ್ಲಿಗೆ ಕೆರೆಗೆ ಕರೇನಹಳ್ಳಿ ಭಾಗದಿಂದ ಹರಿದು ಬರುವ ತ್ಯಾಜ್ಯ ನೀರು
ಅರಳುಮಲ್ಲಿಗೆ ಕೆರೆಗೆ ರಾಜಕಾಲುವೆ ಮೂಲಕ ಹರಿದು ಬರುತ್ತಿವ ತ್ಯಾಜ್ಯ ನೀರು
ಮಜಾರಹೊಸಹಳ್ಳಿ ಕೆರೆಗೆ ನಗರಸಭೆ ವ್ಯಾಪ್ತಿಯಿಂದ ಹರಿದು ಬರುತ್ತಿರುವ ತ್ಯಾಜ್ಯ ನೀರು

ಜಿಲ್ಲಾಧಿಕಾರಿ ಸೂಚನೆಗೂ ಕಿಮ್ಮತ್ತು ಇಲ್ಲ

ಈಚೆಗಷ್ಟೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪರಿಸರ ಮಾಲಿನಿತ್ಯ ನಿಯಂತ್ರಣ ಮಂಡಲಿ ತಾಲ್ಲೂಕು ಪಂಚಾಯಿತಿ ಸೇರಿದಂತೆ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತೀವ್ರ ತರಾಟೆಗೆ ತೆಗೆದುಕೊಂಡರು. ತಾಲ್ಲೂಕಿನ ಅರಣ್ಯ ಪ್ರದೇಶ ಕೆರೆಗಳಿಗೆ ಕೈಗಾರಿಕಾ ತ್ಯಾಜ್ಯ ನೀರು ದೊಡ್ಡಬಳ್ಳಾಪುರ ನಗರಸಭೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಮಜರಾಹೊಸಹಳ್ಳಿ ದೊಡ್ಡತುಮಕೂರು ಕೆರೆಗಳಿಗೆ ಹರಿದು ಬರುತ್ತಿರುವ ಕಲುಷಿತ ತ್ಯಾಜ್ಯ ನೀರು ತಡೆಯಲು ವಿಫಲರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಕಲುಷಿತ ನೀರು ತಡೆಯುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಸಭೆಯ ನಂತರ ವಾಸ್ತದಲ್ಲಿ ಮಾತ್ರ ಸೂಚನೆಯೂ ಅನುಷ್ಟಾನಕ್ಕೆ ಬಂದಿಲ್ಲ. ಆದರೆ ಜಿಲ್ಲಾಧಿಕಾರಿ ಸೂಚನೆಗೂ ಕಿಮ್ಮತ್ತು ನೀಡದ ಅಧಿಕಾರಿಗಳು ಯಾವ ಕೆಲಸವನ್ನು ಮಾಡಿಲ್ಲ. ಸ್ಥಳಾಂತರ ಆಗದ ಮಾಲಿನ್ಯ ನಿಯಂತ್ರಣ ಕಚೇರಿ ದೊಡ್ಡಬಳ್ಳಾಪುರದಲ್ಲಿ ಕಚೇರಿ ಹೊಂದಿರಬೇಕಿರುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಈಗ ಬೆಂಗಳೂರಿನಲ್ಲಿಯೇ ಇದೆ. ಈ ಕಚೇರಿ ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರ ಆಗಬೇಕು ಎಂದು ಹೋರಾಟಗಾರರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉರುಳು ಸೇವೆ ಮಾಡಿ ಆಗ್ರಹಿಸಿದರು. ಬೆಂಗಳೂರಿನಲ್ಲಿ ಇದ್ದ ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿ ದೇವನಹಳ್ಳಿ ತಾಲ್ಲೂಕಿನ ಚಪ್ಪರದಕಲ್ಲು ಗ್ರಾಮಕ್ಕೆ ಸ್ಥಳಾಂತರವಾಗಿ ಏಳು ವರ್ಷಗಳು ಕಳೆದಿದ್ದರು ಇಲ್ಲಿಯವರೆಗೂ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಮಾತ್ರ ಬೆಂಗಳೂರಿನಲ್ಲೇ ಇದೆ.

ಆಸ್ಪತ್ರೆಗಳ ಬೇಜವಾಬ್ದಾರಿ ಕೆರೆ ಅಂಗಳದಲ್ಲಿ 20 ಚೀಲಗಳಷ್ಟು ಮೆಡಿಕಲ್ ತ್ಯಾಜ್ಯ ತಂದು ಹಾಕಲಾಗಿದೆ. ಇದು ದೊಡ್ಡ ಖಾಸಗಿ ಆಸ್ಪತ್ರೆಯವರ ಕೃತ್ಯವಾಗಿದೆ. ಈಗಷ್ಟೇ ಮತ್ತೆ ದೇಶದಲ್ಲಿ ಕೋವಿಡ್‌ 3ನೇ ಅಲೆಯ ಆತಂಕ ಸೃಷ್ಠಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಸ್ಪತ್ರೆಯವರು ಬೇಜವಾಬ್ದಾರಿಯಿಂದ ಮೆಡಿಕಲ್ ತ್ಯಾಜ್ಯ ತಂದು ಕೆರೆ ಅಂಗಳದಲ್ಲಿ ಸುರಿದಿರುವುದು ದುರಂತದ ಸಂಗತಿ.

-ಸತೀಶ್ ಮುಖಂಡ ವಿಜಯ ಕರ್ನಾಟಕ ರಕ್ಷಣಾ ವೇದಿಕೆ

ನೀರು ಕೊಟ್ಟ ಜೀವನಾಡಿಗೆ ತ್ಯಾಜ್ಯದ ಉಡುಗೊರೆ

ನಗರದ ಜನರ ಕುಡಿಯುವ ನೀರಿನ ಬವಣೆ ನೀಗಿಸುವ ಅರಳುಮಲ್ಲಿಗೆ ಕೆರೆಗೆ ನಗರದ ಜನರ ಕಸದ ಉಡುಗೊರೆ ನೀಡುತ್ತಿದ್ದಾರೆ. ಕೆರೆ ಕಸ ಸುರಿಯುವ  ತೊಟ್ಟಿಯಾಗಿದೆ ಎಂದು ಅರಳುಮಲ್ಲಿಗೆ ಕೆರೆ ಅಂಚಿನ ರೈತ ಚಂದ್ರಶೇಖರ್‌ ಬೇಸರ ವ್ಯಕ್ತಪಡಿಸಿದರು. ಕರೇನಹಳ್ಳಿ ದೊಡ್ಡಬಳ್ಳಾಪುರ ನಗರದ ಕಾಲು ಭಾಗದಷ್ಟು ಜನ ವಾಸ ಮಾಡುವ ಈ ಪ್ರದೇಶದಲ್ಲಿ ಹೈಟೆಕ್‌ ಖಾಸಗಿ ಬಡಾವಣೆಗಳು ನಿರ್ಮಾಣವಾಗಿವೆ. ಆದರೆ ಕರೇನಹಳ್ಳಿ ಭಾಗದಲ್ಲಿ ಒಳಚರಂಡಿ ಸೌಲಭ್ಯ ಇಲ್ಲ. ಖಾಸಗಿ ಬಡಾವಣೆಗಳಲ್ಲೂ ತ್ಯಾಜ್ಯ ನೀರಿನ ಶುದ್ಧೀಕರಣ ಘಟಕಗಳು ಇಲ್ಲ. ಈ ಎಲ್ಲಾ ನೀರು ಆಲಹಳ್ಳಿ ಗ್ರಾಮದ ರಾಜಕಾಲುವೆ ಮೂಲಕ ಹರಿದು ಬಂದು ಕೆರೆ ಅಂಗಳ ಸೇರುತ್ತಿವೆ. ಈ ರಾಜಕಾಲುವೆ ಸಮೀಪ ತುರ್ತಾಗಿ ತ್ಯಾಜ್ಯ ನೀರಿನ ಶುದ್ಧೀಕರಣ ಘಟಕ ಸ್ಥಾಪನೆ ಮಾಡಬೇಕು. ಇಲ್ಲದಿದ್ದರೆ ಅರ್ಕಾವತಿ ನದಿ ಪಾತ್ರದ ಮಜರಾಹೊಸಹಳ್ಳಿ ನಾಗರಕೆರೆ ಮುತ್ತೂರು ಹಾಗೂ ದೊಡ್ಡತುಮಕೂರು ಕೆರೆಗಳ ದುಸ್ಥಿತಿಯೇ ಅರಳುಮಲ್ಲಿಗೆ ಕೆರೆಗೂ ಬರಲಿದೆ ಎಂದು ಎಚ್ಚರಿಸಿದ್ದಾರೆ. ಈಗಲೇ ತಾಲ್ಲೂಕು ಆಡಳಿತ ಎಚ್ಚೆತ್ತುಕೊಳ್ಳದೆ ಹೋದರೆ ದೊಡ್ಡಬಳ್ಳಾಪುರ ನಗರದ ಜನರು ಹಾಗೂ ಕೆರೆ ಸುತ್ತಲಿನ ಅರಳುಮಲ್ಲಿಗೆ ಆಲಹಳ್ಳಿ ನಾಗಸಂಗ್ರ ಕೊಡಿಗೇಹಳ್ಳಿ ಕಕ್ಕೇಹಳ್ಳಿ ಅಣಗಲಪುರ ಜಕ್ಕಸಂದ್ರ ಗ್ರಾಮಗಳಲ್ಲಿನ ಜನರು ಕುಡಿಯುವ ನೀರಿಗೆ ಕೊಳವೆ ಬಾವಿಗಳ ನೀರನ್ನೇ ಅವಲಂಭಿಸಿದ್ದಾರೆ. ಈ ಗ್ರಾಮಗಳ ಜನರಿಗೆ ಶುದ್ಧ ಕುಡಿಯುವ ನೀರಿನ ಹಾಹಾಕಾರ ಉಂಟಾಗಲಿದೆ. ಕೆರೆ ಸುತ್ತಲಿನ ಗ್ರಾಮಗಳ ಕೃಷಿ ಬಳಕೆಗೂ ಶುದ್ಧ ನೀರು ಸಿಗುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.