ADVERTISEMENT

ವೀಣೆಗೆ ಜೀವ ತುಂಬಿದ್ದ ಪೆನ್ನ ಓಬಳಯ್ಯ ಇನ್ನಿಲ್ಲ

ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಲು ಬಂದಾಗಲೇ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದ ಹಿರಿಯ ಜೀವ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 19:22 IST
Last Updated 3 ನವೆಂಬರ್ 2025, 19:22 IST
ಪೆನ್ನ ಓಬಳಯ್ಯ
ಪೆನ್ನ ಓಬಳಯ್ಯ   

ಪ್ರಜಾವಾಣಿ ವಾರ್ತೆ

ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀಣೆ ತಯಾರಕ, ಸಿಂಪಾಡಿಪುರದ ಪೆನ್ನ ಓಬಳಯ್ಯ(105) ಭಾನುವಾರ ತಡರಾತ್ರಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು.

ಮೃತರಿಗೆ ಮೂರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ‌. ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಿಂಪಾಡಿಪುರ ಗ್ರಾಮದ ತೋಟದಲ್ಲಿ  ಅಂತ್ಯಕ್ರಿಯೆ ನಡೆಯಿತು.

ADVERTISEMENT

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನ.1ರಂದು ನಡೆದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಪ್ರಶಸ್ತಿ ಸ್ವೀಕರಿಸಲು ತೆರಳಿದ್ದ  ಓಬಳಯ್ಯ ಅವರಿಗೆ ಕಲಾಕ್ಷೇತ್ರದ ಒಳಗೆ ಹೋಗುವಾಗ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಅಸ್ವಸ್ಥರಾದ ಅವರಿಗೆ ವೇದಿಕೆ ಹತ್ತಲು ಆಗಿರಲಿಲ್ಲ. ಕೂಡಲೇ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಓಬಳಯ್ಯ ಅವರ ಪರವಾಗಿ ಕುಟುಂಬದ ಸದಸ್ಯರು ಪ್ರಶಸ್ತಿ ಸ್ವೀಕರಿಸಿದ್ದರು. ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡ ಬಳಿಕ ಅವರನ್ನು ಮನೆಗೆ ಕರೆದೊಯ್ಯಲಾಗಿತ್ತು. ಭಾನುವಾರ ತಡರಾತ್ರಿ ನಿಧನರಾದರು ಎಂದು ಸಂಬಂಧಿ ರಘು ತಿಳಿಸಿದರು.

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಸಮೀಪದ ಸಿಂಪಾಡಿಪುರದಲ್ಲಿ ನೆಲೆಸಿದ್ದ ಓಬಳಯ್ಯ ಅವರು ವೀಣೆ ತಯಾರಿಸಿ ಇಡೀ ದೇಶಕ್ಕೆ ಸರಬರಾಜು ಮಾಡುತ್ತಿದ್ದರು. ಆಸಕ್ತರಿಗೆ ವೀಣೆ ತಯಾರಿಸುವ ಕಲೆ, ಕೌಶಲ ಧಾರೆ ಎರೆಯುವ ಮೂಲಕ ನಾಡಿನ ಸಾಂಪ್ರದಾಯಿಕ ಕಲೆಯ ನಿರಂತರತೆ ಕಾಪಾಡುವಲ್ಲಿ ಶ್ರಮಿಸಿದ್ದರು.

ಸರ್ಕಾರದ ಪರವಾಗಿ ತಹಶೀಲ್ದಾರ್‌ ವಿಭಾ ವಿದ್ಯಾ ರಾಥೋಡ್‌ ಅಂತಿಮ ಗೌರವ ಸಲ್ಲಿಸಿದರು.

ಮುಖ್ಯಮಂತ್ರಿ ಸಂತಾಪ: ಓಬಳಯ್ಯ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ವೀಣೆ ತಯಾರಕ ಪೆನ್ನ ಓಬಳಯ್ಯ ಅವರ ನಿಧನ ಅತೀವ ದುಃಖ ತಂದಿದೆ ಎಂದು ಎಕ್ಸ್ ಖಾತೆಯಲ್ಲಿ ಹೇಳಿದ್ದಾರೆ. 

ಹಿರಿಯ ಜೀವ ಓಬಳಯ್ಯನವರ ಅಗಲಿಕೆಯಿಂದ ನಾಡು ಬಡವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗಕ್ಕೆ ದುಃಖ ಭರಿಸುವ ಶಕ್ತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.

ದೊಡ್ಡಬಳ್ಳಾಪುರ ತಾಲ್ಲೂಕಿನ ಸಿಂಪಾಡಿಪುರದ ಪೆನ್ನ ಓಬಳಯ್ಯ ಅವರ ಪಾರ್ಥೀವ ಶರೀರಕ್ಕೆ ತಾಲ್ಲೂಕು ಆಡಳಿತದ ಪರವಾಗಿ ತಹಶೀಲ್ದಾರ್‌ ವಿಭಾ ವಿದ್ಯಾ ರಾಥೋಡ್‌ ಗೌರವ ಸಲ್ಲಿಸಿದರು.
ಪೆನ್ನ ಓಬಳಯ್ಯ ಅವರಿಗೆ ಪ್ರದಾನ ಮಾಡಲಾದ ರಾಜ್ಯೋತ್ಸವ ಪ್ರಶಸ್ತಿ ಫಲಕ
ವೀಣೆಗೆ ಜೀವ ನೀಡುತ್ತಿರುವ ಪೆನ್ನ ಓಬಳಯ್ಯ
ಸಿಂಪಾಡಿಪುರದಲ್ಲಿ ವೀಣೆ ತಯಾರಿಕೆ ಹೆಳಿ ಕೊಡುತ್ತಿರುವ ಪೆನ್ನ ಓಬಳಯ್ಯ (ಸಂಗ್ರಹ ಚಿತ್ರ)

- ಕೂಲಿಗೆ ಬಂದು ವೀಣೆ ತಯಾರಿಕೆ ಕಲಿತರು!

ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ವೀಣೆ ತಯಾರಿಸುವ ರಾಜ್ಯದ ಏಕೈಕ ಗ್ರಾಮ ತಾಲ್ಲೂಕಿನ ಸಿಂಪಾಡಿಪುರ. ಪೆನ್ನ ಓಬಳಯ್ಯ ಜನಿಸಿದ್ದು ಇಲ್ಲಿನ ಕೃಷಿ ಕುಟುಂಬದಲ್ಲಿ. ಬೇಸಾಯ ಅವರ ಕುಲ ಕಸಬು. ಆದರೆ 40 ವರ್ಷದ ಹಿಂದೆ ಕೂಲಿ ಮಾಡಲು ಹೋಗಿ ವೀಣೆ ತಯಾರಿಸುವುದನ್ನು ಕರಗತ ಮಾಡಿಕೊಂಡಿದ್ದರು. ಕೂಲಿ ಮಾಡಲು ಬೆಂಗಳೂರಿಗೆ ಹೋಗಿದ್ದ ಅವರು ಆಕಸ್ಮಿಕವಾಗಿ ವೀಣೆ ತಯಾರಿಸುವ ಮನೆಯಕೆಲಸಕ್ಕೆ ಸೇರಿದ್ದರು. ವೀಣೆ ತಯಾರಿಕೆಯನ್ನು ಕುತೂಹಲದಿಂದ ಗಮನಿಸುತ್ತಿದ್ದ ಓಬಳಯ್ಯ ಅವರ ಆಸಕ್ತಿ ಗಮನಿಸಿದ ಆ ಕುಟುಂಬದವರು ಇವರಿಗೂ ಈ ಕಲೆಯನ್ನು ಧಾರೆ ಎರೆದರು. ಐದಾರು ವರ್ಷ ಅಲ್ಲಿಯೇ ವೀಣೆ ತಯಾರಿಕೆ ಕರಗತ ಮಾಡಿಕೊಂಡ ಅವರು ಬಳಿಕ ಸಿಂಪಾಡಿಪುರಕ್ಕೆ ಹಿಂದಿರುಗಿ ವೀಣೆ ತಯಾರಿಕೆಯಲ್ಲಿ ತೊಡಗಿದ್ದರು.   ಯಾವುದೇ ಜಾತಿ ಬೇಧ ಇಲ್ಲದೆ ಎಲ್ಲರಿಗೂ ವೀಣೆ ತಯಾರಿಕೆ ಕಲೆಯನ್ನು ಧಾರೆ ಎರೆದಿದ್ದಾರೆ. ಸದ್ಯ  ಸಿಂಪಾಡಿಪುರದಲ್ಲಿ 40 ಕುಟುಂಬಗಳು ವೀಣೆ ತಯಾರಿಕೆಯನ್ನು ಕಸುಬು ಮಾಡಿಕೊಂಡಿವೆ. ವೀಣೆ ತಯಾರಿಸಿ ಬಣ್ಣ ಬಳಿದು ಚಿತ್ತಾರ ಬಿಡಿಸಿ ಬೆಂಗಳೂರಿನ ಸಂಗೀತ ಪರಿಕರ ಅಂಗಡಿಗೆ ಮಾರಾಟ ಮಾಡುತ್ತಾರೆ. ಅಲ್ಲಿ ತಂತಿ ಕಟ್ಟಿ ನಾದ ಹದಗೊಳಿಸುತ್ತಾರೆ. ನಂತರ ವಿವಿಧ ರಾಜ್ಯ ಹಾಗೂ ವಿದೇಶಕ್ಕೂ ರಫ್ತು ಆಗುತ್ತದೆ. 70 ವರ್ಷಗಳಿಂದ ವೀಣೆ ತಯಾರಿಸುತ್ತಾ ಬಂದಿರುವ ಸಿಂಗಾಡಿಪುರ ವೀಣೆ ತಯಾರಿಸುತ್ತಿರುವ ರಾಜ್ಯದ ಏಕಮಾತ್ರ ಗ್ರಾಮ. ಇವರ ನಂತರ ಇಂದಿನ ತಲೆಮಾರಿನ ಯುವಕರು ಸಹ ವೀಣೆ ತಯಾರಿಕೆಯನ್ನೇ ವೃತ್ತಿಯಾಗಿಸಿಕೊಂಡು ಜೀವನ ರೂಪಿಸಿಕೊಂಡಿದ್ದಾರೆ. ‘ಜೀವನಕ್ಕೆ ದಾರಿಯಾಗುತ್ತದೆ ಕಲಿಯಿರಿ’ ಎಂದು ತಾವು ಕಲಿತ ವೀಣೆ ತಯಾರಿಕೆ ವಿದ್ಯೆಯನ್ನು ಊರಿನ ಜನಕ್ಕೆ ಹೇಳಿಕೊಟ್ಟ ಪೆನ್ನ ಓಬಳಯ್ಯ ಅವರನ್ನು ಗ್ರಾಮದ ಜನರು ಸದಾ ಸ್ಮರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.