ADVERTISEMENT

ದೊಡ್ಡಬಳ್ಳಾಪುರ: ಫೆ. 20ರಿಂದ ಮೂರು‌ ದಿನ ಸೀರೆ ಸಂತೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 5:18 IST
Last Updated 15 ಫೆಬ್ರುವರಿ 2026, 5:18 IST
ದೊಡ್ಡಬಳ್ಳಾಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಧೀರಜ್‌ ಮುನಿರಾಜು ಮಾತನಾಡಿದರು
ದೊಡ್ಡಬಳ್ಳಾಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಧೀರಜ್‌ ಮುನಿರಾಜು ಮಾತನಾಡಿದರು   

ದೊಡ್ಡಬಳ್ಳಾಪುರ: ನಗರದ ನೇಕಾರಿಕೆ ಬಿಕ್ಕಟ್ಟಿನಲ್ಲಿದ್ದು, ನೇಕಾರರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಹಾಗೂ ಸೀರೆಗಳಿಗೆ ಬ್ರಾಂಡ್ ಸೃಷ್ಟಿಸಲು ಫೆ.20ರಿಂದ 22ರವರೆಗೆ ಮೂರು ದಿನಗಳ ಕಾಲ ದೊಡ್ಡಬಳ್ಳಾಪುರ ಸೀರೆ ಸಂತೆ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು.

ಫೆ.22ರಂದು ಕೊಂಗಾಡಿಯಪ್ಪ ಜನ್ಮದಿನದ ಅಂಗವಾಗಿ ದೊಡ್ಡಬಳ್ಳಾಪುರ ಸೀರೆಗಳ ವೈಶಿಷ್ಟ್ಯಗಳ ಬಗ್ಗೆ ಪರಿಚಯ ಮಾಡುವ ಉದ್ದೇಶದಿಂದ ದೊಡ್ಡಬಳ್ಳಾಪುರ ಸೀರೆ ಸಂತೆ ಹಮ್ಮಿಕೊಳ್ಳಲಾಗಿದೆ. ಸ್ಥಳದಲ್ಲಿ ಒಟ್ಟು 54 ಸೀರೆ ಮಳಿಗೆ ತೆರೆಯಲಾಗುತ್ತಿದೆ. ಸೀರೆಸಂತೆ ಪಾಲ್ಗೊಳ್ಳಲು ಯಾವುದೇ ಶುಲ್ಕವಿಲ್ಲ. ಮಳಿಗೆಗಳಲ್ಲಿ ದೊಡ್ಡಬಳ್ಳಾಪುರದಲ್ಲೇ ನೇಯ್ದಿರುವ ಸೀರೆಗಳನ್ನು ಮಾತ್ರ ಪ್ರದರ್ಶನಕ್ಕೆ ಇಡಲು ಅವಕಾಶ ಕಲ್ಪಿಸಲಾಗಿದೆ. ಉತ್ತಮ ಸೀರೆಗಳಿಗೆ ಬಹುಮಾನ ವಿತರಣೆ ಮಾಡಲಾಗುವುದು ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಶನಿವಾರದಿಂದ ಬೆಳಗ್ಗೆ 10 ಗಂಟೆಯವರೆಗೂ ಸೀರೆ ಮೇಳ, ಸೀರೆ ಮಳಿಗೆಗಳು, ಇತರೆ ಮಳಿಗೆಗಳು, ಈವೆಂಟ್ ಸ್ಟೇಜ್, ಫುಡ್ ಕೋರ್ಟ್, ಮಕ್ಕಳ ಮನರಂಜನೆ ಹೆಸರಾಂತ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಸೀರೆಗಳ ಫ್ಯಾಷನ್‌ ಶೋ ನಡೆಯಲಿದೆ ಎಂದರು.

ADVERTISEMENT

ರೈತರು, ನೇಕಾರರು ದೇಶದ ಎರಡು ಕಣ್ಣುಗಳು. ದೊಡ್ಡಬಳ್ಳಾಪುರದಲ್ಲಿ ನೇಕಾರಿಕೆ ಹೆಮ್ಮೆಯ ಕುಲಕಸುಬಾಗಿದೆ. ದೊಡ್ಡಬಳ್ಳಾಪುರಕ್ಕೆ ಮ್ಯಾಂಚೆಸ್ಟರ್ ಆಫ್ ಇಂಡಿಯಾ ಎಂಬ ಬಿರುದು ಇದೆ. ಮಾರುಕಟ್ಟೆ ಏರಿಳಿತಗಳಿಂದಾಗಿ ನೇಕಾರರ ಜೀವನ ದುಸ್ತರವಾಗುತ್ತಿದೆ. ಸೀರೆ ಎನ್ನುವುದು ಮಹಿಳೆಯರಿಗೆ ಕೇವಲ ವಸ್ತುವಲ್ಲ, ಮಹಿಳೆಯರ ಭಾವನಾತ್ಮಕ ಸಂಬಂಧವಾಗಿದೆ. ಬಂಡವಾಳಶಾಹಿಗಳಿಂದ ನೇಕಾರರಿಗೆ ತೊಂದರೆಯಾಗುತ್ತಿದೆ. ನಮ್ಮಲ್ಲಿ ತಯಾರಾಗುವ ಸೀರೆಗಳನ್ನು ರಾಜ್ಯದ ಅದರಲ್ಲೂ ಬೆಂಗಳೂರಿನ ಜನತಗೆ ಪರಿಚಯ ಮಾಡಿಸಬೇಕು. ಘಾಟಿ ಕ್ಷೇತ್ರಕ್ಕೆ ಸಹಸ್ರಾರು ಜನ ಪ್ರವಾಸಿಗರು ಬರುತ್ತಿದ್ದು, ಅವರು ಸಹ ದೊಡ್ಡಬಳ್ಳಾಪುರದ ಸೀರೆಗಳನ್ನು ಖರೀದಿಸಬೇಕಿದೆ ಎಂದು ಹೇಳಿದರು.

ಸೀರೆ ಸಂತೆ ಸಮಿತಿಯ ಗೌರವ ಅಧ್ಯಕ್ಷ ಎಂ.ಜಿ. ಶ್ರೀನಿವಾಸ, ಅಧ್ಯಕ್ಷ ಪಿ.ಸಿ.ವೆಂಕಟೇಶ್, ಕೇಂದ್ರ ರೇಷ್ಮೆ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ನಗರಸಭೆ ಸದಸ್ಯ ಬಂತಿ ವೆಂಕಟೇಶ್, ನಾಗೇಶ್, ಕೆ.ಬಿ.ಮುದ್ದಪ್ಪ, ಗೋಪಿ, ಟಿ.ವಿ.ಲಕ್ಷ್ಮೀನಾರಾಯಣ್, ಪುಷ್ಪಶಿವಶಂಕರ್, ಬಿ.ಸಿ.ನಾರಾಯಣಸ್ವಾಮಿ, ಸಿ.ನಾರಾಯಣಸ್ವಾಮಿ, ನೇಕಾರ ಸಂಘಟನೆಗಳ ಮುಖಂಡರಾದ ವೇಣು ಗೋಪಾಲ್, ಡಿ.ಎಂ.ಚಂದ್ರಶೇಖರ್, ತಿಮ್ಮರಾಜು, ಜಗದೀಶ್ ಉಪಸ್ಥಿತರಿದ್ದರು.

ಹೈಟೆಕ್‌ ಸೀರೆ ಮಾಲ್

ಈಗಾಗಲೇ ಡಿ.ಕ್ರಾಸ್‌ ಸಮೀಪ 15 ಮಳಿಗೆಗಳ ನೇಕಾರರ ಮಾರಾಟ ಮಳಿಗೆ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ರೇಷ್ಮೆ ಇಲಾಖೆಯ 2 ಎಕರೆ ಪ್ರದೇಶದಲ್ಲಿ ₹25 ಕೋಟಿ ವೆಚ್ಚದಲ್ಲಿ ಮಾಲ್‌ ರೀತಿ ಸುಸಜ್ಜಿತ ಹೈಟೆಕ್‌ ಸೀರೆಗಳ ಮಾರುಕಟ್ಟೆ ಮಳಿಗೆ ಸ್ಥಾಪಿಸಲು ಯೋಜನಾ ವರದಿ ಸಿದ್ದ ಪಡಿಸುವಂತೆ ಜವಳಿ ಹಾಗೂ ಜಿಲ್ಲಾಧಿಕಾರಿಗಳಿಗ ಮನವಿ ಮಾಡಲಾಗಿದೆ ಎಂದು ಶಾಸಕ ಧೀರಜ್‌ ಮುನಿರಾಜು ಹೇಳಿದರು.

ಕಾರ್ಯಕ್ರಮ ವಿವರ 

ಫೆ.20ರಂದು ಸಂಜೆ 5ಕ್ಕೆ ದೊಡ್ಡಬಳ್ಳಾಪುರ ಸೀರೆ ಸಂತೆ ಕಾರ್ಯಕ್ರಮ ಉದ್ಘಾಟನೆ. ಶಾಸಕ ಧೀರಜ್‌ ಮುನಿರಾಜು ನಟ ಗಿಲ್ಲಿ ನಟರಾಜ್‌ ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ. 7.30ಕ್ಕೆ ಸವಾರಿ ತಂಡದಿಂದ ಮನರಂಜನೆ. ಫೆ.21ರಂದು ಸಂಜೆ 5.30ಕ್ಕೆ ಹಾಸ್ಯ ವಾಗ್ಮಿ ಪ್ರಾಣೇಶ್ ಅವರಿಂದ ಹಾಸ್ಯೋತ್ಸವ ಮತ್ತು 8ಗಂಟೆಗೆ ಕಾಮಿಡಿ ಕಿಲಾಡಿಗಳು ತಂಡದಿಂದ ಹಾಸ್ಯ.  ಫೆ.22ರಂದು ಸಂಜೆ 5.30ಕ್ಕೆ ಜೀ ಕನ್ನಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ತಂಡದಿಂದ ಮನರಂಜನೆ ಕಾರ್ಯಕ್ರಮ. ರಾತ್ರಿ 8 ಗಂಟೆಗೆ ಹೆಸರಾಂತ ಗಾಯಕ ರಘು ದೀಕ್ಷಿತ್ ರವರಿಂದ ಲೈವ್ ಮ್ಯೂಸಿಕ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.