ADVERTISEMENT

ದೊಡ್ಡಬಳ್ಳಾಪುರದಲ್ಲಿ ಸಂಚಾರ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 31 ಜುಲೈ 2023, 3:00 IST
Last Updated 31 ಜುಲೈ 2023, 3:00 IST
   

ನಟರಾಜ ನಾಗಸಂದ್ರ

ದೊಡ್ಡಬಳ್ಳಾಪುರ: ನಗರದಲ್ಲಿ ಸಂಚಾರ ದಟ್ಟಣೆಯಿಂದ ಸಾರ್ವಜನಿಕರು ಹೈರಾಣಾಗಿ ಹೋಗಿದ್ದಾರೆ. ನಗರದ ಬೆಳವಣಿಗೆಯ ವೇಗಕ್ಕೆ ತಕ್ಕಂತೆ ಪೊಲೀಸ್‌ ಸಿಬ್ಬಂದಿ ಇಲ್ಲದೆ ಸಂಚಾರಿ ವ್ಯವಸ್ಥೆ ಅರಾಜಕತೆಯಾಗಿದೆ. ಪ್ರತಿ ದಿನ ನಗರದ ಪ್ರಮುಖ ವೃತ್ತಗಳಲ್ಲಿನ ಉಂಟಾಗಿವ ಟ್ರಾಫಿಕ್‌ ಜಾಮ್‌ನಲ್ಲಿ ವಾಹನಗಳ ಸವಾರರ ರಸ್ತೆ ಜಗಳಗಳು ಸಾಮಾನ್ಯವಾಗಿದೆ.

ದಶಕದ ಹಿಂದೆ ಸುಮಾರು ನಾಲ್ಕು ಕಿ.ಮೀ ವ್ಯಾಪ್ತಿಯನ್ನು ಹೊಂದಿದ್ದ ದೊಡ್ಡಬಳ್ಳಾಪುರ ನಗರ ಇಂದು ಸುಮಾರು 8 ಕಿ.ಮೀ ವ್ಯಾಪ್ತಿಯನ್ನು ಮೀರಿ ವಿಸ್ತಾರವಾಗಿ ಬೆಳೆದಿದೆ. ಅಷ್ಟೇ ವೇಗವಾಗಿ ನಗರದ ಜನ ಸಂಖ್ಯೆ, ವಾಹನಗಳ ಸಂಖ್ಯೆಯು ಹೆಚ್ಚಾಗುತ್ತಲೇ ಇವೆ. ಆದರೆ ರಸ್ತೆಗಳು ಮಾತ್ರ ಶತಮಾನಗಳ ಹಿಂದೆ ಇದ್ದಷ್ಟೇ ಇವೆ ಹೊರತು ಒಂದೇ ಒಂದು ರಸ್ತೆಯೂ ಸಹ ವಿಸ್ತರಣೆಯಾಗಿಲ್ಲ. ಹೀಗಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ನಡೆದಾಡುವುದು ಸಹ ಕಷ್ಟವಾಗುವಷ್ಟು ಸಂಚಾರ ದಟ್ಟಣೆ ಮಿತಿ ಮೀರಿ ಹೋಗಿದೆ.

ADVERTISEMENT

ಅದರಲ್ಲೂ ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳು ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ವಾಹನ ಸವಾರರು ಒಂದೊಂದು ವೃತ್ತದಲ್ಲೂ ಗಟ್ಟೆಗಟ್ಟಲೆ ನಿಂತು ಜನಪ್ರತಿನಿಧಿಗಳಿಗೆ ಹಾಗೂ ಪೊಲೀಸ್‌ ಅವ್ಯವಸ್ಥೆಗೆ ಹಿಡಿಶಾಪ ಹಾಕತ್ತಿದ್ದಾರೆ.

2011ರ ಜನ ಗಣತಿ ಪ್ರಕಾರ 91 ಸಾವಿರ ಜನ ಸಂಖ್ಯೆ ಹೊಂದಿದ್ದ ನಗರದ ಇಂದು ಸುಮಾರು 1.50 ಲಕ್ಷಕ್ಕೆ ತಲುಪಿದೆ. ಅಷ್ಟೇ ದೊಡ್ಡ ಪ್ರಮಾಣದಲ್ಲಿ ಪ್ರತಿ ದಿನವು ಹೊಸ ಬೈಕ್‌ ಮತ್ತು ಕಾರ್‌ ಸೇರಿದಂತೆ ಎಲ್ಲಾ ರೀತಿಯ ವಾಹನ ಹಾಗೂ ಆಟೊಗಳ ಸಂಖ್ಯೆಯು ಏರುತ್ತಲೇ ಇದೆ.

ನಗರದಲ್ಲಿನ ಸಂಚಾರ ಪ್ರಮುಖ ರಸ್ತೆಗಳ ವಿಸ್ತರಣೆ ವಿಚಾರ ಈ ಬಾರಿಯ ವಿಧಾನಸಭಾ ಚುನಾವಣ ಸಂದರ್ಭದಲ್ಲೂ ಹೆಚ್ಚು ಚರ್ಚಿತವಾಗಿದ್ದ ರಾಜಕೀಯ ವಿಷಯವಾಗಿತ್ತು. ರಸ್ತೆಗಳ ವಿಸ್ತರಣೆ ಪ್ರಸ್ತಾಪ ಬಂದಾಗಲೆಲ್ಲವು ನಗರಸಭೆ ಸದಸ್ಯರು ಶಾಸಕರ ಮೇಲೆ, ಶಾಸಕರು ನಗರಸಭೆ ಸದಸ್ಯರ ಮೇಲೆ ದೂರುತ್ತಲೇ ಕಾಲ ಕಳೆದಿರುವುಕ್ಕೆ ದೊಡ್ಡ ಇತಿಹಾಸವೇ ಇದೆ. ಈಗ ಹೊಸ ಪಕ್ಷ, ಹೊಸ ಶಾಸಕರು. ಈಗಲಾದರೂ ರಸ್ತೆ ವಿಸ್ತರಣೆಗೆ ಮುಕ್ತಿದೊರೆಯ ಬಹುದ ಎನ್ನುವ ನಿರೀಕ್ಷೆ ಸಾರ್ವಜನಿಕರದ್ದು.

ಜನಸಂಖ್ಯೆಗೆ ತಕ್ಕಂತೆ ಸಿಬ್ಬಂದಿ ಇಲ್ಲ

ನಮ್ಮಲ್ಲಿ ಜನಸಂಖ್ಯೆಗೆ ತಕ್ಕಷ್ಟು ಸಿಬ್ಬಂದಿ ಇಲ್ಲ. ನಗರದಲ್ಲಿನ ಪ್ರಮುಖ ರಸ್ತೆಗಳು ಅತ್ಯಂತ ಕಿರಿದಾಗಿವೆ. ಹೀಗಾಗಿ ಸಂಚಾರ ವ್ಯವಸ್ಥೆ ಸರಿದಾರಿಗೆ ತರುವುದು ಕಷ್ಟ. ಅಲ್ಲದೆ ನಗರಕ್ಕೆ ಪ್ರತ್ಯೇಕ ಸಂಚಾರಿ ಪೊಲೀಸ್‌ ಠಾಣೆ ಮಂಜೂರಾಗದ ಹೊರತು ಕಾನೂನು ಸುವ್ಯವಸ್ಥೆ, ಸಂಚಾರಿ ವ್ಯವಸ್ಥೆ ಎಲ್ಲವನ್ನು ಒಬ್ಬರೇ ನಿಬಾಯಿಸುವುದು ಕಷ್ಟ ಎನ್ನುತ್ತಾರೆ ಪೊಲೀಸರು.

ಪೊಲೀಸರ ವಾದವು ಸಹ ನಿಜವೇ ಆಗಿದೆ. ಸುಮಾರು 8 ಕಿ.ಮೀ ವ್ಯಾಪ್ತಿಯ ನಗರದ ಎಲ್ಲಾ ಭಾಗದಲ್ಲೂ ಬೆರಳೆಣಿಕೆಯಷ್ಟು ಪೊಲೀಸರು ಹೇಗೆ ಕೆಲಸ ಮಾಡಲು ಸಾಧ್ಯ ? ಅದರಲ್ಲೂ ನಗರದ ಹೊರ ಭಾಗದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ನಾಲ್ಕು ಹಂತಗಳಲ್ಲಿ ಬೆಳೆದ ನಂತರವಂತು ಎಲ್ಲಾ ರೀತಿಯ ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಲೇ ಇದೆ.

ಕೈಗಾರಿಕಾ ಪ್ರದೇಶದಲ್ಲಿನ ಗಾರ್ಮೆಂಟ್ಸ್‌ ಹಾಗೂ ಇತರೆ ಕೈಗಾರಿಕೆಗಳಿಗೆ ಕಾರ್ಮಿಕರು ಹೋಗಿ ಬರುವ ಡಿ.ಕ್ರಾಸ್‌ ವೃತ್ತ, ರಂಗಪ್ಪ ವೃತ್ತ, ರೈಲ್ವೆ ನಿಲ್ದಾಣದ ವೃತ್ತ, ಹಳೇ ಸರ್ಕಾರಿ ಆಸ್ಪತ್ರೆ ವೃತ್ತ, ನಗರದಲ್ಲಿನ ಮುಖ್ಯ ರಸ್ತೆಯ ಚೌಕದ ವೃತ್ತ, ಸೌಂದರ್ಯ ಮಹಲ್‌ ವೃತ್ತ, ತಾಲ್ಲೂಕು ಕಚೇರಿ ವೃತ್ತ, ರುಮಾಲೆ ವೃತ್ತ,ಮುಗುವಾಳಪ್ಪ ವೃತ್ತ ಈ ಸ್ಥಳಗಳಲ್ಲಿ ವಾಹನಗಳು ಸಿಲುಕಿಕೊಂಡರೆ ಕನಿಷ್ಠ ಅರ್ಧ ಗಂಟೆಗಳ ಕಾಲದವರು ಟ್ರಾಫಿಕ್‌ ಜಾಮ್‌ ಆಗಲಿದೆ. ಈ ಸ್ಥಳಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವ ಸಮಯದಲ್ಲಾದರು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸುವಂತೆ ಸಾರ್ವಜನಿಕರು ಮಾಡುತ್ತಿರುವ ಮನವಿಗೆ ಪೊಲೀಸರಿಂದ ಸ್ಪಂದನೆಯೇ ಇಲ್ಲದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.