ADVERTISEMENT

ದೊಡ್ಡಬಳ್ಳಾಪುರ | ರೇಪಿಯರ್ ಮಗ್ಗಗಳ ಸೀರೆ ಸಾಗಿಸುತ್ತಿದ್ದ ವಾಹನಗಳಿಗೆ ನೇಕಾರರ ತಡೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 4:41 IST
Last Updated 1 ಡಿಸೆಂಬರ್ 2025, 4:41 IST
ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಕಾಲೇಜಿನ ಬಳಿ ರೇಪಿಯರ್ ಮಗ್ಗಗಳ ಸೀರೆ ಸಾಗಿಸುತ್ತಿದ್ದ ವಾಹನಗಳನ್ನು ತಡೆದಿರುವ ನೇಕಾರರು
ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಕಾಲೇಜಿನ ಬಳಿ ರೇಪಿಯರ್ ಮಗ್ಗಗಳ ಸೀರೆ ಸಾಗಿಸುತ್ತಿದ್ದ ವಾಹನಗಳನ್ನು ತಡೆದಿರುವ ನೇಕಾರರು   

ದೊಡ್ಡಬಳ್ಳಾಪುರ: ರೇಪಿಯರ್ ಮಗ್ಗಗಳ ಸೀರೆಗಳನ್ನು ಸಾಗಿಸುತ್ತಿದ್ದ ಮೂರು ವಾಹನಗಳನ್ನು ಭಾನುವಾರ ನೇಕಾರರು ತಡೆದು ಜಿಎಸ್‌ಟಿ ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ನೇಕಾರರು ತಯಾರು ಮಾಡುವ ಬಟ್ಟೆಗಳನ್ನು ಸೂರತ್ ಹಾಗೂ ಇತರೆಡೆ ರೇಪಿಯರ್ ಮಗ್ಗಗಳಲ್ಲಿ ನೇಯ್ದು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ಇಲ್ಲಿನ ನೇಕಾರರು ತೀವ್ರ ನಷ್ಟ ಅನುಭವಿಸುತ್ತಿದ್ದು, ರೇಪಿಯರ್ ಸೀರೆಗಳು ದೊಡ್ಡಬಳ್ಳಾಪುರಕ್ಕೆ ಬಾರದಂತೆ ತಡೆಗಟ್ಟಬೇಕು ಎಂದು ನೇಕಾರರು ಪ್ರತಿಭಟನೆ ನಡೆಸಿದ್ದರು. ಆದರೂ ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ನೇಕಾರರು ಈಗ ಸೀರೆಗಳನ್ನು ಸಾಗಾಣಿಕೆ ಮಾಡುವ ವಾಹನಗಳ ಮೇಲೆ ನಿಗಾವಹಿಸಿದ್ದಾರೆ. ಸುಮಾರು 5 ಸಾವಿರ ರೇಪಿಯರ್ ಸೀರೆಗಳನ್ನು ತುಂಬಿದ್ದ ಮೂರು ವಾಹನಗಳನ್ನು ಜಿಎಸ್‌ಟಿ ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ 25 ಸಾವಿರ ಮಗ್ಗಗಳಿದ್ದು, 50 ಸಾವಿರ ಜನರು ಗುಡಿ ಕೈಗಾರಿಕೆಯಾಗಿರುವ ನೇಕಾರಿಕೆಯನ್ನು ಅವಲಂಭಿಸಿದ್ದಾರೆ. ಸೂರತ್ ಹಾಗೂ ಬೆಳಗಾವಿಯಲ್ಲಿರುವ ಆಧುನಿಕ ತಂತ್ರಜ್ಞಾನದ ರೇಪಿಯರ್ ಏರ್‌ಜಟ್ ಮಗ್ಗಗಳಲ್ಲಿ ಉತ್ಪಾದನೆ ಮಾಡುತ್ತಿದ್ದು, ದೊಡ್ಡಬಳ್ಳಾಪುರಕ್ಕೆ ತಂದು ಅರ್ಧ ಬೆಲೆಗೆ ಮಾರಾಟ ಮಾಡಿ ಇಲ್ಲಿನ ನೇಕಾರಿಕೆ ಉದ್ಯಮವನ್ನು ಹಾಳು ಮಾಡುತ್ತಿದ್ದಾರೆ ಎಂದು ನೇಕಾರರ ಮುಖಂಡರಾದ ಆರ್.ಎಸ್.ಶ್ರೀನಿವಾಸ್ ವಿ.ನರಸಿಂಹಮೂರ್ತಿ, ಡಿ.ಆರ್.ದ್ರುವಕುಮಾರ್, ಮಲ್ಲೇಶ್ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಇದರಿಂದ ನೇಕಾರರ ವ್ಯಾಪಾರ ವಹಿವಾಟು ಕುಸಿದಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬ್ಯಾಂಕ್‌ಗಳಲ್ಲಿ ಸಾಲ ಕಟ್ಟಲಾರದೇ, ಮನೆಗಳನ್ನು ಮಾರಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸೂರತ್‌ ಮತ್ತು ರೇಪಿಯರ್‌ ಮಗ್ಗಗಳಿಂದ ತಯಾರಿಸಿದ ಸೀರೆ ಮಾರಾಟವನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.

ಇದು ಆರಂಭಿಕ ಮಾತ್ರ, ಇನ್ನು ಮುಂದೆ ಇದೇ ರೀತಿ ಮುಂದುವರೆದರೆ ಮಾಲೀಕರ ಮನೆ ಮುಂದೆ ನೇಕಾರರ ಕುಟಂಬಗಳು ಧರಣಿ ಕುಳಿತು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ನೇಕಾರ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.