ADVERTISEMENT

ದೊಡ್ಡಬಳ್ಳಾಪುರ: ಬೆಳಗ್ಗೆಯೇ ಅಕ್ಕಿ ವಿತರಣೆಗೆ ಆಗ್ರಹ

ಅನ್ನಭಾಗ್ಯ ಪಡೆಯಲು ನೂಕುನುಗ್ಗಲು ಉಂಟಾದರೆ ನ್ಯಾಯಾಲಯಕ್ಕೆ ದೂರು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 14:31 IST
Last Updated 8 ಏಪ್ರಿಲ್ 2025, 14:31 IST
ದೊಡ್ಡಬಳ್ಳಾಪುರ ಶಾಂತಿನಗರ ಸರ್ಕಾರಿ ನ್ಯಾಯಬೆಲೆ ಅಂಗಡಿ ಮುಂದೆ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಪಡೆಯಲು ಸಾಲುಗಟ್ಟಿ ನಿಂತಿದ್ದ ಜನರು (ಸಂಗ್ರಹ ಚಿತ್ರ)  
ದೊಡ್ಡಬಳ್ಳಾಪುರ ಶಾಂತಿನಗರ ಸರ್ಕಾರಿ ನ್ಯಾಯಬೆಲೆ ಅಂಗಡಿ ಮುಂದೆ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಪಡೆಯಲು ಸಾಲುಗಟ್ಟಿ ನಿಂತಿದ್ದ ಜನರು (ಸಂಗ್ರಹ ಚಿತ್ರ)     

ದೊಡ್ಡಬಳ್ಳಾಪುರ: ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಮಾರ್ಚ್‌ ತಿಂಗಳಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ಅನ್ನಭಾಗ್ಯ ಯೋಜನೆಯಲ್ಲಿ 15 ಕೆ.ಜಿ. ಅಕ್ಕಿ ವಿತರಣೆ ಮಾಡಲು ಮುಂದಾದ ರಾಜ್ಯ ಸರ್ಕಾರದ ನಿರ್ಧಾರದಿಂದ ಜನರು ಸುಡುವ ಬಿಸಿಲಿನಲ್ಲೇ ಬೀದಿಯಲ್ಲಿ ದಿನವಿಡೀ ನಿಲ್ಲುವಂತೆ ಮಾಡಿತ್ತು. ಇದೇ ರೀತಿ ಏಪ್ರಿಲ್‌ ತಿಂಗಳ ಪಡಿತರ ವಿತರಣೆಯಲ್ಲೂ ನೂಕುನುಗ್ಗಲು ಉಂಟಾದರೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರು ದಾಖಲಿಸಲಾಗುವುದು ಎಂದು ಯುವ ಸಂಚಲನ ಅಧ್ಯಕ್ಷ ಚಿದಾನಂದಮೂರ್ತಿ, ಸಂಚಾಲಕ ಗಿರೀಶ್‌ ತಿಳಿಸಿದ್ದಾರೆ.

ನಗರದ ಹಲವು ನ್ಯಾಯಬೆಲೆ ಅಂಗಡಿಗಳ ಮುಂದೆ ಅಕ್ಕಿ ಪಡೆಯಲು ಬೆಳಗಿನ ಜಾವ 4 ಗಂಟೆಯಿಂದಲೇ ಜನರು ಸಾಲುಗಟ್ಟಿ ನಿಂತಿದ್ದ ದೃಶ್ಯ ಹಾಗೂ ಬಲಾಢ್ಯರಷ್ಟೇ ಅಕ್ಕಿ ಪಡೆಯಲು ಸಾಧ್ಯವಾಯಿತೇ ವಿನಹ ಮಹಿಳೆಯರು, ವೃದ್ಧರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

‘ಮಾರ್ಚ್‌ ತಿಂಗಳಲ್ಲಿ ಅನ್ನಭಾಗ್ಯ ಯೋಜನೆ ಅಕ್ಕಿ ಪಡೆಯಲು ಜನರ ಪರದಾಟದ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾದರೂ ಆಹಾರ ಇಲಾಖೆ ಅಧಿಕಾರಿಗಳಾಗಲೀ, ಜಿಲ್ಲಾ ಉಸ್ತುವಾರಿ ಸಚಿವರಾಗಲೀ ಸಮಸ್ಯೆ ಪರಿಹಾರಕ್ಕೆ ನ್ಯಾಯಬೆಲೆ ಅಂಗಡಿಗಳ ಬಳಿ ಬಂದು ಸೌಜನ್ಯಕ್ಕೂ ಜನರನ್ನು ವಿಚಾರಿಸಲಿಲ್ಲ’ ಎಂದು ಯುವ ಸಂಚಲನ ಅಧ್ಯಕ್ಷ ಚಿದಾನಂದಮೂರ್ತಿ, ಸಂಚಾಲಕ ಗಿರೀಶ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ಸರ್ಕಾರದ ನಿಯಮದ ಪ್ರಕಾರ ಈಗ ಮತ್ತೆ ಏಪ್ರಿಲ್‌ ತಿಂಗಳ ಅನ್ನಭಾಗ್ಯ ಯೋಜನೆ ಅಕ್ಕಿ ವಿತರಣೆ ಏಪ್ರಿಲ್‌ 11ರಿಂದ ಪ್ರಾರಂಭವಾಗಬೇಕಿದೆ. ಬಿಸಿಲಿನ ತೀವ್ರತೆ ಮಾರ್ಚ್‌ ತಿಂಗಳಿಗಿಂತಲೂ ಏಪ್ರಿಲ್‌ನಲ್ಲಿ ಹೆಚ್ಚಾಗಿದೆ. ನ್ಯಾಯಬೆಲೆ ಅಂಗಡಿಗಳು ನಿಗದಿತ ದಿನಾಂಕದಿಂದ ನಿಯಮದಂತೆ ಬೆಳಿಗ್ಗೆ 8ರಿಂದಲೇ ಬಾಗಿಲು ತೆರೆದು ಅಕ್ಕಿ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಗ್ರಾಮೀಣ ಪ್ರದೇಶದ ನ್ಯಾಯ ಬೆಲೆ ಅಂಗಡಿಗಳಿಗೆ ಹೋಲಿಕೆ ಮಾಡಿದರೆ ನಗರದ ಪ್ರದೇಶದಲ್ಲಿನ ನ್ಯಾಯಬೆಲೆ ಅಗಡಿಗಳ ವಿತರಣೆಯಲ್ಲೇ ಜನರು ಅತಿ ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣವಾಗಿರುವುದು ಒಂದೇ ನ್ಯಾಯಬೆಲೆ ಅಂಗಡಿಯಲ್ಲಿ ಅತಿ ಹೆಚ್ಚು ಅಂದರೆ ಶಾಂತಿನಗರ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ 2,185 ಪಡಿತರ ಕಾರ್ಡ್‌ಗಳು ಇವೆ. ಹಾಗೆಯೇ ನಗರದ ದರ್ಜಿ ಪೇಟೆಯಲ್ಲಿ 1,330, ಕೆ.ಆರ್‌.ಮಾರುಕಟ್ಟೆಯಲ್ಲಿ 1,651, ಕುಚ್ಚಪ್ಪನ ಪೇಟೆಯಲ್ಲಿ 1,749, ನಗರ್ತಪೇಟೆಯಲ್ಲಿ 1,900, ವಿನಾಯಕ ನಗರದಲ್ಲಿ 1,457 ಪಡಿತರ ಕಾರ್ಡ್‌ಗಳು ಇವೆ.

ಪ್ರತಿ ತಿಂಗಳ 11ರಿಂದ ಕೊನೆ ದಿನದವರೆಗೂ ಪಡಿತರ ವಿತರಣೆ ಮಾಡಬೇಕು ಎನ್ನುವ ನಿಯಮ ಕ್ರಮಬದ್ಧವಾಗಿ ಪಾಲನೆಯಾಗುತ್ತಿಲ್ಲ. ಹಾಗಾಗಿ ನೂರಾರು ಜನರು ಒಮ್ಮೆಗೆ ಸಾಲುಗಟ್ಟಿ ನಿಲ್ಲುವಂತಾಗುತ್ತಿದೆ. ಒಂದು ಸಾವಿರ ಮೇಲ್ಪಟ್ಟು ಕಾರ್ಡ್‌ಗಳು ಹೊಂದಿರುವ ನ್ಯಾಯಬೆಲೆ ಅಂಗಡಿಗಳನ್ನು ವಿಭಜನೆ ಮಾಡಿ ಕನಿಷ್ಠ ಎರಡು ಕಡೆ ಪ್ರತ್ಯೇಕವಾಗಿ ಅಕ್ಕಿ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.