
ದೊಡ್ಡಬಳ್ಳಾಪುರ: ತಾಲ್ಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಹಾಗೂ ನಗರಸಭೆಯ 21ನೇ ವಾರ್ಡ್‌ನ ಹೇಮಾವತಿಪೇಟೆ ಉಪ ಚುನಾವಣೆ ಡಿ.21ರಂದು ನಡೆಯಲಿದೆ.
ಚುನಾವಣಾ ಆಯೋಗ, ತಾಲ್ಲೂಕು ಆಡಳಿತ,ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಹಾಗೂ ನಗರಸಭೆಯ ಸಿದ್ದತೆಗಳು ಪೂರ್ಣಗೊಂಡಿದ್ದು ಮತಯಂತ್ರಗಳು ಶನಿವಾರ ಮತಗಟ್ಟೆ ತಲುಪಿವೆ.
ನಗರದ ಕೊಂಗಾಡಿಯಪ್ಪ ಪ್ರೌಢಶಾಲೆಯ ಮಸ್ಟರಿಂಗ್, ಡಿ ಮಸ್ಟರಿಂಗ್ ಮತ್ತು ಎಣಿಕಾ ಕೇಂದ್ರದಲ್ಲಿ ವಿದ್ಯುನ್ಮಾನ ಮತಯಂತ್ರ ಸೇರಿದಂತೆ ಅಗತ್ಯ ಸಲಕರಣೆ ಪಡೆದು ಚುನಾವಣಾ ಸಿಬ್ಬಂದಿ ಹಾಗೂ ರಕ್ಷಣಾ ಸಿಬ್ಬಂದಿ ಮತಗಟ್ಟೆಗಳಿಗೆ ತೆರಳಿದರು.
ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎ.ಬಿ.ಬಸವರಾಜು ಭೇಟಿ ನೀಡಿ ಸಿದ್ದತೆ ಪರಿಶೀಲನೆ ನಡೆಸಿದರು. ಮತಗಟ್ಟೆಗೆ ತೆರಳುವ ಚುನಾವಣಾ ಸಿಬ್ಬಂದಿಗೆ ಮಾಹಿತಿ ನೀಡಿದರು.
ಎಲ್ಲಾ ಮತಗಟ್ಟೆಗಳಿಗೆ ಚುನಾವಣಾ ಅಧಿಕಾರಿಗಳು ತೆರಳಿ ಮತದಾನಕ್ಕೆ ಸಿದ್ದತೆ ಮಾಡಿಕೊಂಡು, ಡಿ.21 ಬೆಳಗ್ಗೆ 7ಕ್ಕೆ ಮತದಾನ ಆರಂಭವಾಗಿ ಸಂಜೆ 5ಕ್ಕೆ ಮುಕ್ತಾಯವಾಗಲಿದೆ.
ಒಂದು ವೇಳೆ ಮರು ಮತದಾನ ಇದ್ದಲ್ಲಿ ಡಿ. 23ರಂದು ನಡೆಯಲಿದೆ. ಡಿ.24ರಂದು ಬೆಳಗ್ಗೆ 8 ಗಂಟೆಯಿಂದ ನಗರದ ಕೊಂಗಾಡಿಯಪ್ಪ ಪ್ರೌಢಶಾಲೆಯಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದರು.
ಚುನಾವಣ ವೇಳೆ ಯಾವುದೇ ಗುಂಪು ಗಲಭೆಗಳಾಗದಂತೆ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆಗೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಕ್ಷೇತ್ರದಲ್ಲಿ ಒಟ್ಟು ಏಳು ಮಿನಿಬಸ್ ಮಾರ್ಗಗಳನ್ನು ಗುರುತಿಸಲಾಗಿದೆ. ಜೀಪ್‌ಗಳನ್ನು ಸಹ ಬಳಸಿಕೊಳ್ಳಲಾಗುತ್ತಿದೆ.
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ 19 ಮತಗಟ್ಟೆಗಳಲ್ಲಿ 6,651 ಪುರುಷರು, 6,346 ಮಹಿಳೆಯರು ಸೇರಿ ಒಟ್ಟು 12,997 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.
21 ನೇ ವಾರ್ಡ್ ನ ಹೇಮಾವತಿಪೇಟೆ ಉಪ ಚುನಾವಣೆಯ 2 ಮತಗಟ್ಟೆಗಳಲ್ಲಿ 1,152 ಪುರುಷರು,1,153 ಮಹಿಳೆಯರು ಸೇರಿ ಒಟ್ಟು 2,305 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಮತಗಟ್ಟೆ ಅಧ್ಯಕ್ಷಾಧಿಕಾರಿ, ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ, ಬೂತ್‌ಗೆ ಇಬ್ಬರು ಮತಗಟ್ಟೆ ಅಧಿಕಾರಿಗಳು ಸೇರಿದಂತೆ ತಲಾ 22 ಮಂದಿ ಕಾರ್ಯ ನಿರ್ವಹಿಸಲಿದ್ದಾರೆ.
ನಗರಸಭೆಯ 21ನೇ ವಾರ್ಡ್‌ನ ಹೇಮಾವತಿಪೇಟೆ ಉಪ ಚುನಾವಣೆಯಲ್ಲಿ ತಲಾ ಇಬ್ಬರು ಕಾರ್ಯ ನಿರ್ವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.