
ದೊಡ್ಡಬಳ್ಳಾಪುರ: ಎರಡೇ ದಿನಗಳ ಅಂತರದಲ್ಲಿ ನೇಕಾರರ ವಾಣಿಜ್ಯ ಮಳಿಗೆಗಳ ನಿರ್ಮಾಣ ಭವನಕ್ಕೆ ಎರಡು ಬಾರಿ ಶಂಕುಸ್ಥಾಪನೆ ಮಾಡಲಾಗಿದೆ.
ನಗರದ ಹಿಂದೂಪುರ ರಾಜ್ಯ ಹೆದ್ದಾರಿಯ ಡಿ.ಕ್ರಾಸ್ ಸಮೀಪ ನೇಕಾರರ ಸೀರೆ ಮಾರಾಟಕ್ಕೆ ವಾಣಿಜ್ಯ ಮಳಿಗೆಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರು ಶಂಕುಸ್ಥಾಪನೆ ಮಾಡಿದರು. ಇದೇ ಸ್ಥಳದಲ್ಲಿ ಬುಧವಾರ ಶಾಸಕ ಧೀರಜ್ ಮುನಿರಾಜು ಅವರು ಶಂಕುಸ್ಥಾಪನೆ ನೆರವೇರಿಸಿದ್ದರು.
ಬುಧವಾರ ಶಾಸಕ ಧೀರಜ್ ಮುನಿರಾಜು ಅವರು ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವ ಸಂದರ್ಭದಲ್ಲಿ ಶಿಷ್ಟಾಚಾರ ಉಲ್ಲಂಘಿಸಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.
ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವರು ಬರುವುದಕ್ಕು ಮುನ್ನವೇ ಬಿಜೆಪಿ ಕಾರ್ಯಕರ್ತರೊಂದಿಗೆ ಶಾಸಕ ಧೀರಜ್‌ಮುನಿರಾಜು ಶಂಕುಸ್ಥಾಪನೆ ಸ್ಥಳದಲ್ಲಿ ಹಾಜರಿದ್ದರು. ನಗರಸಭೆ ಸದಸ್ಯರು, ಗ್ಯಾರಂಟಿ ಸಮಿತಿಗಳ ಅಧ್ಯಕ್ಷರು, ವಿವಿಧ ಸರ್ಕಾರಿ ನಾಮನಿರ್ದೇಶಿತ ಸದಸ್ಯರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಸಚಿವರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿಯೇ ಸೇರಿದ್ದರು. ಶಂಕುಸ್ಥಾಪನೆ ಸ್ಥಳದಲ್ಲಿ ಕೆಲ ಸಮಯ ಬಿಗುವಿನ ವಾತಾವರಣ ಉಂಟಾಗಿತ್ತು.
ಶಂಕುಸ್ಥಾಪನೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಜವಳಿ ಇಲಾಖೆಯ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ಶಂಕುಸ್ಥಾಪನೆಯಲ್ಲಿ ಗೊಂದಲ ಉಂಟಾಗಿದೆ. ಎಲ್ಲರೂ ಜನರಿಗಾಗಿ ಕೆಲಸ ಮಾಡುವುದು. ಅಭಿವೃದ್ಧಿ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಈ ಹಿಂದಿನ ಶಾಸಕರು ನೇಕಾರರಿಗಾಗಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಅವರ ಸೇವೆಯನ್ನು ನೆನೆಯಬೇಕು. ಈಗ ಜನ ತಾಲ್ಲೂಕಿನ ಯಜಮಾನಿಕೆಯನ್ನು ಬೇರೆಯವರಿಗೆ ನೀಡಿದ್ದಾರೆ. ಆದರೆ ಹಿಂದಿನವರ ಸೇವೆಯನ್ನು ಯಾರೂ ಮರೆಯಬಾರದು. ಯಾರು ಸಹ ತಮ್ಮ ಸ್ವಂತ ಹಣ ಖರ್ಚು ಮಾಡಿ ಕೆಲಸ ಮಾಡುವುದಿಲ್ಲ. ಸರ್ಕಾರದ ಹಣದಿಂದಲೇ ಕೆಲಸ ಮಾಡುವಾಗ ಎಲ್ಲರನ್ನು ಜೊತೆಯಲ್ಲಿ ಕರೆದೊಯ್ಯಬೇಕು ಎಂದರು.
ಜಿಲ್ಲೆಯಲ್ಲಿ ಜವಳಿ ಮಾರುಕಟ್ಟೆ ಸಂಕೀರ್ಣ ನಿರ್ಮಾಣವಾಗುವುದರಿಂದ ಸ್ಥಳೀಯ ನೇಕಾರರಿಗೆ ಹಾಗೂ ಸೀರೆ ಉತ್ಪಾದಕರಿಗೆ ವ್ಯಾಪಾರ ವಹಿವಾಟಿನ್ನು ಉತ್ತೇಜಿಸಲು ಸಹಕಾರಿಯಾಗಲಿದೆ. ಈ ಸಂಕೀರ್ಣ ಸರ್ಕಾರದ ಅನುದಾನ ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಅನುದಾನ ಸೇರಿ ₹2.70 ಕೋಟಿ ವೆಚ್ಚದಲ್ಲಿ 30 ಮಳಿಗೆಗಳ ಎರಡು ಮಹಡಿಯ ಕಟ್ಟಡ ನಿರ್ಮಾಣವಾಗಲಿದೆ. ಮೊದಲ ಹಂತದಲ್ಲಿ ₹1 ಕೋಟಿ ವೆಚ್ಚದಲ್ಲಿ 15 ಮಳಿಗೆಗಳು ನಿರ್ಮಾಣವಾಗಲಿವೆ. ಇದರಿಂದ ಸ್ಥಳೀಯ ನೇಕಾರರು ತಾವು ಉತ್ಪಾದಿಸುವ ಸೀರೆಯ ಜವಳಿ ವ್ಯಾಪಾರಕ್ಕೆ ಬಹಳಷ್ಟು ಅನುಕೂಲವಾಗಲಿದೆ. ನೇಕಾರರಿಗೆ 10 ಎಚ್.ಪಿ ವರೆಗೂ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ನೇಕಾರರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಕೆ.ಸುಮಿತ್ರಾಆನಂದ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಿ.ಚುಂಚೇಗೌಡ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ರಾಜಣ್ಣ, ನಗರಸಭಾ ಸದಸ್ಯರು ಇದ್ದರು.
ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದ ನಂತರವೇ ಶಂಕುಸ್ಥಾಪನೆ ಮಾಡಲಾಗಿತ್ತು. ಇಂದು ನಡೆದ ಶಂಕುಸ್ಥಾಪನೆಯಲ್ಲೂ ನಾನು ಸಹ ಭಾಗವಹಿಸಿದ್ದೇನೆ. ನೇಕಾರರ ಹಿತವೇ ಮುಖ್ಯ. ಕಾಮಗಾರಿಯನ್ನು ಶೀಘ್ರವಾಗಿ ಮುಗಿಸುವುದಕ್ಕೆ ಸಚಿವರ ಸಹಕಾರ ಅಗತ್ಯಧೀರಜ್ ಮುನಿರಾಜ್ ಶಾಸಕ
ಹಾರೆಕೋಲು ಹಿಡಿದುಕೊಳ್ಳಲು ನೂಕು ನುಗ್ಗಲು
ನೇಕಾರ ಭವನ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲು ನಡೆಯುತ್ತಿದ್ದ ಪೂಜಾ ಸ್ಥಳದಲ್ಲಿ ಹಾರೆಕೋಲು ಹಿಡಿದುಕೊಳ್ಳಲು ಸಚಿವರು ಶಾಸಕರನ್ನು ತಳ್ಳುತ್ತ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರು ತಾ ಮುಂದು ನಾ ಮುಂದು ಎಂದು ನೂಕು ನುಗ್ಗಲು ಉಂಟಾಗಿತ್ತು. ಈ ತಳ್ಳಾಟವನ್ನು ನೋಡಿದ ಸಚಿವ ಕೆ.ಎಚ್.ಮುನಿಯಪ್ಪ ಅವರು ಹಾರೆಕೋಲನ್ನು ನೆಪಮಾತ್ರಕ್ಕೆ ಹಿಡಿದು ತಕ್ಷಣವೇ ದೂರ ಸರಿದರು. ಸಚಿವರು ಶಾಸಕರು ದೂರ ಹೋದ ನಂತರ ಕಾಂಗ್ರೆಸ್ ಕಾರ್ಯಕರ್ತರು ಗುಂಪು ಗುಂಪಾಗಿ ಹಾರೇಕೋಲು ಹಿಡಿದುಕೊಂಡು ನಿಂತು ಪೋಟೋಗಳನ್ನು ತೆಗೆಸಿಕೊಳ್ಳುತ್ತಿದ್ದ ದೃಶ್ಯ ನೋಡುಗರಿಗೆ ಮುಜುಗರ ಉಂಟುಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.