
ದೊಡ್ಡಬಳ್ಳಾಪುರ: ತಾಲ್ಲೂಕಿನ ಸೋತೆನಹಳ್ಳಿ ಗ್ರಾಮದ ಗೃಹಿಣಿ ಪುಷ್ಪಾ(28)ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿಂತೆ ತಲೆ ಮರೆಸಿಕೊಂಡಿದ್ದ ಆಕೆಯ ಪತಿಯ ಕುಟುಂಬದ ಮೂವರನ್ನು ಶನಿವಾರ ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮೃತಳ ಅತ್ತೆ ಭಾರತಮ್ಮ(50), ಪತಿಯ ಚಿಕ್ಕಪ್ಪ, ಸರ್ಕಾರಿ ಶಾಲಾ ಶಿಕ್ಷಕ ಮುತ್ತೇಗೌಡ(49), ಇವರ ಪತ್ನಿ, ಸರ್ಕಾರಿ ಶಾಲಾ ಶಿಕ್ಷಕಿ ಪಲ್ಲವಿ ಅವರನ್ನು ಸರ್ಜಾಪುರದಲ್ಲಿ ಬಂಧಿಸಿದ್ದಾರೆ.
ಅಕ್ಟೋಬರ್ 20ರಂದು ಗೃಹಿಣಿ ಪುಷ್ಪಾ ಅವರು ತಾನು ಗಂಡ, ಅತ್ತೆ, ಮಾವ, ಮೈದುನ ಹಾಗೂ ಸಂಬಂಧಿಕರ ಕಿರುಕುಳಕ್ಕೆ ಬೇಸತ್ತಿದ್ದೇನೆಂದು ವಿಡಿಯೊ ಚಿತ್ರೀಕರಿಸಿ, ಸಂಬಂಧಿಕರಿಗೆ ಕಳುಹಿಸಿದ್ದರು. ಬಳಿಕ ತಾಲ್ಲೂಕಿನ ಎಸ್.ಎಸ್.ಘಾಟಿ ಸಮೀಪದ ಸರ್.ಎಂ.ವಿಶ್ವೇಶ್ವರಯ್ಯ ಪಿಕ್‌ಆಪ್ ಡ್ಯಾಂಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಮಗಳ ಸಾವಿಗೆ ಗಂಡನ ಮನೆಯವರೇ ಕಾರಣ ಎಂದು ಮೃತಳ ತಂದೆ ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮೃತಳ ಪತಿ ವೇಣು(30) ಮತ್ತು ಮಾವ ಗೋವಿಂದಪ್ಪ(55) ಬಂಧಿಸಿದ್ದರು. ತಲೆ ಮರೆಸಿಕೊಂಡಿದ್ದ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಆರಂಭಿಸಿದ್ದರು. ಶನಿವಾರ ಮೂವರನ್ನು ಬಂಧಿಸಲಾಗಿದ್ದು, ತಲೆ ಮರೆಸಿಕೊಂಡಿರುವ ಮೃತಳ ಮೈದುನ ನಾರಾಯಣಸ್ವಾಮಿ ಪತ್ತೆಗೆ ಪೊಲೀಸರು ಹುಡಕಾಟ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.