
ನಂದಗುಡಿ(ಹೊಸಕೋಟೆ): ಗ್ರಾಮದಲ್ಲಿರುವ ಎರಡು ಕುಡಿಯುವ ನೀರಿನ ಘಟಕ ಕೆಟ್ಟು ನಿಂತು ಹಲವು ತಿಂಗಳು ಕಳೆದರೂ ದುರಸ್ತಿಗೊಳ್ಳದ ಕುಡಿಯುವ ನೀರಿಗಾಗಿ ಇಲ್ಲಿನ ಜನ ಪರದಾಡುತ್ತಿದ್ದಾರೆ.
ಹೋಬಳಿ, ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ನಂದಗುಡಿಯಲ್ಲಿ 1,500ಕ್ಕೂ ಹೆಚ್ಚು ಮನೆಗಳಿವೆ. ಬೆಂಗಳೂರು ಮತ್ತು ಹೊಸಕೋಟೆಯಿಂದ ನಂದಗುಡಿ ಮಾರ್ಗವಾಗಿಯೇ ಚಿಂತಾಮಣಿ, ಬಾಗೇಪಲ್ಲಿ, ಶ್ರೀನಿವಾಸಪುರ, ಮುರುಗಮಲ್ಲ ಕಡೆ ಸಾವಿರಾರು ವಾನಿತ್ಯ ಸಂಚರಿಸುತ್ತವೆ. ಸಾವಿರಾರು ಜನ ಬಂದು ಹೋಗುತ್ತಾರೆ. ಹೀಗಿದ್ದರೂ ಇಲ್ಲಿ ಕೇವಲ ಎರಡೇ ಶುದ್ಧ ಕುಡಿಯುವ ನೀರಿನ ಘಟಕಗಳು ಹೆಸರಿಗೆ ಮಾತ್ರವೇ ಇದ್ದಂತಿವೆ.
ಇವೆರಡು ಘಟಕ ಕೆಟ್ಟುನಿಂತು ಮೂರು ತಿಂಗಳು ಕಳೆದರೂ ದುರಸ್ತಿ ಆಗದೆ ಗ್ರಾಮಸ್ಥರು ಬೋರವೆಲ್ ನೀರು ಬಳಸಬೇಕು. ಇಲ್ಲ ಸಮೀಪದ ಗ್ರಾಮಗಳಿಗೆ ಹೋಗಿ ನೀರು ತರಬೇಕಿದೆ.
ನಂದಗುಡಿ ಸುತ್ತಮುತ್ತ ಫ್ಲೋರೈಡ್ ಅಂಶ ಅಧಿಕವಾಗಿದೆ. ಲವಣಾಂಶಯುಕ್ತ ನೀರು ಸೇವನೆಯಿಂದ ಹಲವು ಕಾಯಿಲೆ ಬರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಅನಿವಾರ್ಯವಾಗಿ ಈಗ ಇದೇ ನೀರನ್ನು ಕುಡಿಯುವ ಪರಿಸ್ಥಿತಿ ಬಂದಿದೆ. ಇದರಿಂದ ಜನ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಇನ್ನಾದರೂ ಸಂಬಂದಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ನೀರಿನ ಘಟಕ ದುರಸ್ತಿಗೊಳಿಸಿ, ಕೆಡದಂತೆ ನಿರ್ವಹಣೆ ಮಾಡಲಿ ಎಂದು ಒತ್ತಾಯಿಸಿದರು.
ನಂದಗುಡಿ ಗ್ರಾಮದ ಬಸ್ ನಿಲ್ದಾಣದಲ್ಲಿ ಶುದ್ಧ ನೀರಿನ ಘಟಕ ಕೆಟ್ಟ ಮೂರು ತಿಂಗಳು ಕಳೆದಿದೆ. ಗ್ರಾಮದ ಊರು ಬಾಗಿಲು ಬಳಿ ಇರುವ ಶುದ್ಧ ನೀರಿನ ಘಟಕ ದುರಸ್ತಿಗೊಂಡಿದ್ದರೂ ಆರಂಭಗೊಂಡಿಲ್ಲ.
ಜನರಿಗೆ ಅನುಕೂಲವಾಗಲೆಂದು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಾಗ ಅವುಗಳನ್ನು ದುರಸ್ತಿ ಮಾಡಿಸುವುದು ಅಲ್ಲಿನ ಸ್ಥಳೀಯ ಆಡಳಿತ ಮತ್ತು ಜನಪ್ರತಿನಿಧಿಗಳ ಕರ್ತವ್ಯ. ಆದರೆ ಶುದ್ಧ ನೀರಿನ ಘಟಕದ ಯಂತ್ರ ಕೆಟ್ಟಿರುವ ಬಗ್ಗೆ ಗ್ರಾಮ ಪಂಚಾಯಿತಿಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿನ ಸ್ಥಳೀಯ ಆಡಳಿತದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜಾಣ ಕುರುಡರಾಗಿದ್ದಾರೆ.
ನಂದಗುಡಿಯ ಎರಡು ನೀರಿನ ಘಟಕಗಳು ಕೆಟ್ಟುನಿಂತಿವೆ. ಇದರಿಂದ ಎರಡು–ಮೂರು ಕಿ.ಮೀ. ಅಂತರದಲ್ಲಿರುವ ಗ್ರಾಮಗಳಿಗೆ ಹೋಗಿ ನೀರು ತರಬೇಕು. ವಾಹನಗಳು ಇಲ್ಲದವರು ಹೇಗೆ ನೀರು ತರುವುದುನಾರಾಯಣಮ್ಮ ಸ್ಥಳೀಯ ನಿವಾಸಿ
ನಂದುಗುಡಿ ಗ್ರಾಮದ ಶುದ್ಧ ನೀರಿನ ಘಟಕ ಕೆಟ್ಟು ಹೋಗಿರುವುದು ಗಮನಕ್ಕೆ ಬಂದಿದೆ. ಯಂತ್ರ ರಿಪೇರಿಗೆ ಸಂಬಂಧಪಟ್ಟ ಕಂಪನಿ ಸೂಚಿಸಿದ್ದು ಇನ್ನೆರಡು ಮೂರು ದಿನಗಳಲ್ಲಿ ದುರಸ್ತಿಯಾಗಲಿದೆಎಂ ಕೆಂಪಣ್ಣ ಪಿಡಿಒ
ನಂದಗುಡಿ ಬಸ್ ನಿಲ್ದಾಣದ ಶುದ್ಧ ನೀರಿನ ಘಟಕ ನಿರ್ವಹಣೆಯನ್ನು ಒಂದು ವರ್ಷಕ್ಕೆ ಖಾಸಗಿಯವರಿಗೆ ವಹಿಸಲಾಗುತ್ತು. ಅದರ ಅವಧಿ ಮುಗಿದಿದ್ದು ದುರಸ್ತಿಗೆ ತುರ್ತಾಗಿ ಕ್ರಮ ಕೈಗೊಳ್ಳಲಾಗುವುದುಬಾಲು ಚಂದ್ರ ಎಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.