ADVERTISEMENT

ದೇವನಹಳ್ಳಿ ವಾರ್ಡ್ ನಂ.20: ಕುಡಿಯುವ ನೀರಿನ ಸಮಸ್ಯೆ ಹೇಳತೀರದು

ರಾಜಕಾಲುವೆ ಕಾಮಗಾರಿ ಸ್ಥಗಿತ, ಸರಕು ಸಾಮಾನು ರಸ್ತೆಯಲ್ಲಿ ಅನಾಥ

ವಡ್ಡನಹಳ್ಳಿ ಬೊಜ್ಯನಾಯ್ಕ
Published 15 ಅಕ್ಟೋಬರ್ 2018, 20:00 IST
Last Updated 15 ಅಕ್ಟೋಬರ್ 2018, 20:00 IST
ಸ್ಥಗಿತಕೊಂಡಿರುವ ರಾಜಕಾಲುವೆ ಕಾಮಗಾರಿ
ಸ್ಥಗಿತಕೊಂಡಿರುವ ರಾಜಕಾಲುವೆ ಕಾಮಗಾರಿ   

ದೇವನಹಳ್ಳಿ: ರಾಜಕಾಲುವೆ ಕಾಮಗಾರಿ ಸ್ಥಗಿತ. ಕುಡಿಯುವ ನೀರಿನ ಸಮಸ್ಯೆ. ಕೊಳವೆ ಬಾವಿ ಮೋಟರ್ ಪಂಪ್‌ ನೀರೆತ್ತಲು ವಿದ್ಯುತ್ ಪೂರೈಕೆ ಮಾರ್ಗ ಅಡಚಣೆ. ಇದು 20ನೇ ವಾರ್ಡಿನಲ್ಲಿ ಸಂಚರಿಸಿದಾಗ ಕಂಡು ಬಂದ ಸಮಸ್ಯೆಗಳು.

ರಾಷ್ಟ್ರೀಯ ಹೆದ್ದಾರಿ 207ರ ರಸ್ತೆಯಿಂದ ಹೆಣ್ಣು ಮಕ್ಕಳಸರ್ಕಾರಿ ಪ್ರೌಢ ಶಾಲೆ ಹಿಂಭಾಗದ ಮಾರ್ಗವಾಗಿ ಬರುವ ರಾಜಕಾಲುವೆಯ ಮುಂದುವರೆದ ಭಾಗವಾಗಿ ಎರಡು ಹಂತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಒಂದು ಕಡೆ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದೆ. ಮತ್ತೊಂದು ಕಡೆ ಟೆಂಡರ್ ಪ್ರಕ್ರಿಯೆಗಿಂತ ಮೊದಲೇ ಕಾಮಗಾರಿ ಆರಂಭಿಸಲಾಗಿದೆ. ಇದರಿಂದ ಗುತ್ತಿಗೆದಾರ ನಾಲ್ಕಾರುದಿನ ಕಾಮಗಾರಿ ನಡೆಸಿ ಕೈಬಿಟ್ಟಿದ್ದಾರೆ. ಕಾಮಗಾರಿಯ ಸರಕು ಸಾಮಗ್ರಿಗಳು ಸ್ಥಳದಲ್ಲೇ ಬಿದ್ದಿವೆ ಎಂದು ವಾರ್ಡಿನ ಸ್ಥಳೀಯರು ದೂರುತ್ತಾರೆ.

ಸೌತೇಗೌಡನಹಳ್ಳಿ ಬಡಾವಣೆಯಲ್ಲಿ ರಸ್ತೆಗಳು ಮತ್ತು ಚರಂಡಿಗಳು ಸಂಪೂರ್ಣ ಹದಗೆಟ್ಟಿವೆ. ಸೌತೇಗೌಡನಹಳ್ಳಿ ಬಡಾವಣೆ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳ ಕೊರತೆ ಇದ್ದು ಬೀದಿ ದೀಪಗಳ ಅಳವಡಿಕೆಯಾಗಬೇಕು. ಬಹುತೇಕ ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬುದು ನಿವಾಸಿಗಳ ದೂರು.

ADVERTISEMENT

ಪ್ರಗತಿ ಕುರಿತು ಮಾಹಿತಿ ನೀಡಿದ ವಾರ್ಡಿನ ಸದಸ್ಯೆ ಪುಷ್ಪ ರವಿಕುಮಾರ್, ಎಸ್ಎಲ್ಎನ್ ಮನೆ ಹಿಂಭಾಗದಿಂದ ರಾಜಕಾಲುವೆ ದುರಸ್ತಿಗೆ ₹25 ಲಕ್ಷ ಅನುದಾನ ಬಿಡುಗಡೆಯಾಗಿದೆ. ಕೆಲಕಾರಣದಿಂದ ಸ್ಥಗಿತಗೊಂಡಿದೆ. ಕೆಲವು ಕಾಮಗಾರಿ ಆಗಬೇಕು; ಕೆಲವು ಆಗಿದೆ. ಶೇ 50ರಷ್ಟು ಚರಂಡಿ ಅಭಿವೃದ್ಧಿ ಪಡಿಸಲಾಗಿದೆ. 20 ಕೊಳವೆ ಬಾವಿ ಕೊರೆಯಿಸಲಾಗಿದ್ದರೂ 6ರಲ್ಲಿ ಮಾತ್ರ ಅಂತರ್ಜಲ ಕಡಿಮೆ ಪ್ರಮಾಣದಲ್ಲಿದೆ. ನೀರಿನ ಸಮಸ್ಯೆ ಇದೆ ಎಂದು ತಿಳಿಸಿದರು.

ಮೂರು ತಿಂಗಳಿಂದ ರಾಜಕಾಲುವೆ ಕಾಮಗಾರಿ ಸ್ಥಗಿತವಾಗಿರುವುದರಿಂದ ಕಾಲುವೆಯಲ್ಲಿ ತ್ಯಾಜ್ಯ ನೀರು ತುಂಬಿಕೊಂಡಿದೆ. ಇದರಿಂದ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಮಳೆನೀರು ಕಾಲುವೆ ಮೀರಿ ಮನೆಯೊಳಗೆ ನುಗ್ಗುತ್ತದೆ. ಇದು ದೊಡ್ಡ ಸಮಸ್ಯೆ. ಕೊಳವೆ ಬಾವಿ ಮೇಲೆ ವಿದ್ಯುತ್ ಲೈನ್ ಇದೆ. ಇದರಿಂದ ಕುಡಿಯುವ ನೀರಿಗೆ ತೊಂದರೆ ಹೇಳತೀರದು. ಸಿಮೆಂಟ್ ರಸ್ತೆಯಾಗಬೇಕು. ಚರಂಡಿ ಶುಚಿಯಾಗಬೇಕು ಎನ್ನುತ್ತಾರೆ ವಾರ್ಡಿನ ನಿವಾಸಿಗಳಾದ ಡಿ.ಸಿ.ಗೋಪಿನಾಥ್, ಮುನಿಶ್ಯಾಮಣ್ಣ, ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.