ದೇವನಹಳ್ಳಿ: ಸರ್ಕಾರ ಕೋಟ್ಯಾಂತರ ರೂಪಾಯಿಯ ಅನುದಾನ ಬಿಡುಗಡೆ ಮಾಡಿ ನೂತನ ರಸ್ತೆ ನಿರ್ಮಾಣ ಮತ್ತು ಜಲಮೂಲಗಳ ರಕ್ಷಣೆಗೆ ಮುಂದಾಗುತ್ತಿದೆ, ಮತ್ತೊಂದೆಡೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ‘ಡಂಪಿಂಗ್ ಯಾರ್ಡ್’ ಕೇಂದ್ರಗಳಾಗಿ ಪರಿವರ್ತನೆಯಾಗುತ್ತಿವೆ ಎಂಬುದು ಸಾರ್ವಜನಿಕರ ದೂರು.
ರಾಷ್ಟ್ರೀಯ ಹೆದ್ದಾರಿ 7 ರ ರಸ್ತೆ ದೇವನಹಳ್ಳಿ ಕಡೆಯಿಂದ ಭುವನಹಳ್ಳಿಗೆ ಸಾಗುವ ಸರ್ವಿಸ್ ರಸ್ತೆ ಮತ್ತು ಬೆಂಗಳೂರು ಕಡೆಯಿಂದ ದೇವನಹಳ್ಳಿ ಕಡೆಗೆ ಬರುವ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಪಕ್ಕದಲ್ಲೆ ರಾಶಿ ರಾಶಿ ಹಳೆ ಕಟ್ಟಡಗಳ ತಾಜ್ಯ ಸುರಿಯಲಾಗಿದೆಎಂದು ಸ್ಥಳೀಯ ನಿವಾಸಿ ಬಚ್ಚೇಗೌಡ.
ಕೆಂಪೇಗೌಡ ಮುಖ್ಯ ವೃತ್ತದಿಂದ ರೈಲ್ವೆ ಸ್ಟೇಷನ್ ಕಡೆಗೆ ಸಾಗುವ ಸರ್ವಿಸ್ ರಸ್ತೆಯಲ್ಲಿ ತಾಜ್ಯಗಳ ಸರಣಿ ರಾಶಿಗಳೇ ಸಾಲುಗಟ್ಟಿವೆ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಯಾವುದೆ ಕ್ರಮ ಕೈಗೊಂಡಿಲ್ಲ ಎಂಬುದು ಸ್ಥಳೀಯರ ಆರೋಪ.
ದೇವನಹಳ್ಳಿ ಹೃದಯ ಭಾಗದಲ್ಲಿರುವ ಶ್ರೀರಂಗನಾಥಸ್ವಾಮಿ ದೇವಾಲಯದ ಜಾಗದಲ್ಲಿ ವಾರದ ಸಂತೆ ನಡೆಯುತ್ತಿದೆ, ಸಂತೆಯ ಪಕ್ಕದಲ್ಲಿರುವ ಜಾಗ ಮುಜರಾಯಿ ಇಲಾಖೆಗೆ ಒಳಪಟ್ಟಿರುವ 5.25 ಎಕರೆ ಜಾಗದ ಪೈಕಿ ಅಂದಾಜು 2 ಎಕರೆ ಜಾಗದಲ್ಲಿ ನೂರಾರು ಲೋಡ್ ಹಳೆ ಮನೆಗಳ ತ್ಯಾಜ್ಯ ತಂದು ಸುರಿಯಲಾಗಿದೆ.
ತ್ಯಾಜ್ಯ ಸುರಿದಿರುವ ಜಾಗದಲ್ಲಿ ಬೃಹತ್ ಪುಷ್ಕರಣಿ ಇತ್ತು, ಅದನ್ನು ಅಭಿವೃದ್ಧಿಪಡಿಸುವ ಬದಲು ರಾಶಿಗಳ ಲೆಕ್ಕದಲ್ಲಿ ತ್ಯಾಜ್ಯ ಸುರಿಯಲು ಇಲಾಖೆಯೇ ಅವಕಾಶ ಮಾಡಿಕೊಟ್ಟಿದೆ ಎಂಬ ಅನುಮಾನಗಳು ಮೂಡುತ್ತಿವೆ. ತ್ಯಾಜ್ಯ ಸುರಿಯುದ್ದಕ್ಕೆ ಅವಕಾಶವಾಗದಂತೆ ಸ್ವತ್ತಿನ ಸುತ್ತ ತಡೆಗೋಡೆಯನ್ನಾದರೂ ನಿರ್ಮಿಸಿ ಕಡಿವಾಣ ಹಾಕಬಹುದಿತ್ತು ಎಂದು ಬಚ್ಚೇಗೌಡ ಅವರು ಬೇಸರ ವ್ಯಕ್ತಪಡಿಸುತ್ತಾರೆ.
ದೇವನಹಳ್ಳಿ ದೊಡ್ಡಅಮಾನಿ ಕೆರೆ ನಗರದಿಂದ ಒಂದು ಕಿ.ಮೀ. ದೂರವಿದೆ, ಈ ಕೆರೆಯಲ್ಲಿ ಒಂದು ಕಡೆ ಹೊಂಗೆ ಸಸಿಗಳು ನಳನಳಿಸುತ್ತಿದೆ, ಮತ್ತೊಂದೆಡೆ ಜಾಲಿ ಮರ ಬೆಳೆದಿದ್ದು ಪಕ್ಕದಲ್ಲಿ ತ್ಯಾಜ್ಯಗಳ ರಾಶಿಗಳು ಎಣಿಕೆಗೆ ನಿಲುಕದಷ್ಟು ಹರಡಿಕೊಂಡಿವೆ.
ಕೆರೆಯಲ್ಲಿ ಕೊರೆದಿರುವ ಕೋಳವೆ ಬಾವಿಯಿಂದ ಸಾವಕನಹಳ್ಳಿ ಗ್ರಾಮಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ, ಬರಿ ಮಣ್ಣು ತ್ಯಾಜ್ಯವಲ್ಲ ಸತ್ತ ನಾಯಿ, ಕೋಳಿ, ಕುರಿ ಮಾಂಸಗಳ ತ್ಯಾಜ್ಯ ಇತರೆ ಹೊಲಸು ಕಸಕಡ್ಡಿ ತಂದು ಸುರಿದರೆ ಮಳೆ ಬಂದಾಗ ನೀರಿನ ಗುಣಮಟ್ಟ ಯಾವ ರೀತಿ ಇರಲಿದೆ ಎಂಬುದುನ್ನು ತ್ಯಾಜ್ಯ ಸುರಿಯುವವರು ಅರ್ಥ ಮಾಡಿಕೊಳ್ಳಬೇಕು ಎನ್ನುತ್ತಾರೆ ಎಂ. ಆಂಜಿನಪ್ಪ.
ದೊಡ್ಡ ಅಮಾನಿ ಕೆರೆಯಲ್ಲಿ ನೀರು ತುಂಬಿದರೆ ನೂರಾರು ಕೊಳವೆ ಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗಲಿದೆ, ಈ ಕೆರೆಯಿಂದ ಅರ್ಧ ಕಿ.ಮೀ. ಅಂತರವಿರುವ ನಗರದ ಚಿಕ್ಕ ಸಿಹಿನೀರಿನ ಕೆರೆಯಲ್ಲಿ ಹೂಳನ್ನು ಸಂಪೂರ್ಣ ಎತ್ತಲಾಗಿದೆ, ಈ ಮೊದಲು ನೂರಾರು ರಾಶಿ ತ್ಯಾಜ್ಯ ಸುರಿಯಲಾಗಿತ್ತು ಎಂದು ಅವರು ಹೇಳುತ್ತಾರೆ.
ಈ ಕೆರೆಯಲ್ಲಿ ನಾಲ್ಕು ಕೊಳವೆ ಬಾವಿಯಿಂದ ನಗರಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ, ಜಲ ಮೂಲಗಳನ್ನು ರಕ್ಷಣೆ ಮಾಡುವ ಗುರುತರ ಜವಾಬ್ದಾರಿ ಎಲ್ಲರ ಮೇಲಿದೆ, ಒಂದೊಂದು ಹನಿ ನೀರು ಎಷ್ಟು ಮುಖ್ಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎನ್ನುತ್ತಾರೆ 8ನೇ ವಾರ್ಡಿ ಪುರಸಭೆ ಮಾಜಿ ಸದಸ್ಯ ಗೋಪಾಲಕೃಷ್ಣ.
ಕುಂದಾಣ ಹೋಬಳಿ ರೈತ ಸಂಘ ಅಧ್ಯಕ್ಷ ಕೃಷ್ಣಪ್ಪ ಅವರ ಪ್ರಕಾರ, ತಾಲ್ಲೂಕಿನಲ್ಲಿರುವ ಯಾವುದೇ ಕೆರೆಯಲ್ಲಿ ವಿಷಯುಕ್ತ ತ್ಯಾಜ್ಯವಾಗಲಿ ಅನುಪಯುಕ್ತ ವಸ್ತುಗಳನ್ನಾಗಲಿ ಸುರಿಯದಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕಠಿಣ ಕ್ರಮ ತೆಗೆದುಕೊಳ್ಳಬೇಕು, ಕೆರೆಯಲ್ಲಿನ ಪರಿಸರ ನಾಶಮಾಡಿದರೆ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ಅವರು ಒತ್ತಾಯಿಸುತ್ತಾರೆ.
ಜಲಮೂಲ ರಕ್ಷಣೆ ಕಾಮಗಾರಿಯನ್ನು ಮೊದಲ ಆದ್ಯತೆಯಾಗಿ ತೆಗೆದುಕೊಳ್ಳಲಾಗಿದೆ, ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕುಂಟೆ ದುರಸ್ತಿ, ನೂತನ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಯಾವುದೇ ಕಾರಣಕ್ಕೆ ರಸ್ತೆ ಪಕ್ಕದಲ್ಲಿ, ಕೆರೆಕುಂಟೆಗಳಲ್ಲಿ ತ್ಯಾಜ್ಯ ಸುರಿಯಬಾರದು. ಇದರ ಬಗ್ಗೆ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಆರ್.ಲತಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.