ADVERTISEMENT

ದೇವನಹಳ್ಳಿ: ಪರಿಸರ ಕಾಳಜಿ ಮೆರೆದ ಗೃಹಿಣಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2023, 5:59 IST
Last Updated 8 ಮಾರ್ಚ್ 2023, 5:59 IST
ದೇವನಹಳ್ಳಿ ತಾಲ್ಲೂಕಿನ ಬುಳ್ಳಹಳ್ಳಿಯ ಸುನಂದಮ್ಮ ಗೋಬರ್‌ ಗ್ಯಾಸ್‌ ಉತ್ಪಾದನೆಯಲ್ಲಿ ತೊಡಗಿರುವುದು
ದೇವನಹಳ್ಳಿ ತಾಲ್ಲೂಕಿನ ಬುಳ್ಳಹಳ್ಳಿಯ ಸುನಂದಮ್ಮ ಗೋಬರ್‌ ಗ್ಯಾಸ್‌ ಉತ್ಪಾದನೆಯಲ್ಲಿ ತೊಡಗಿರುವುದು   

ದೇವನಹಳ್ಳಿ: ನಿತ್ಯ ಅಡುಗೆ ಅನಿಲ ಸಿಲಿಂಡರ್‌ ದರ ಹೆಚ್ಚಾಗುತ್ತಿದ್ದು, ಕೌಟುಂಬಿಕ ನಿರ್ವಹಣೆಯ ಆರ್ಥಿಕ ಸಂಕಷ್ಟ ಕೆಳ ಮಧ್ಯಮ ವರ್ಗದ ಮಹಿಳೆಯರನ್ನು ಬಾಧಿಸುತ್ತಿದೆ. ಸರ್ಕಾರ ಉಜ್ಜಲ ಯೋಜನೆಯಡಿ ಉಚಿತ ಗ್ಯಾಸ್‌ ವಿತರಣೆ ಮಾಡಿದರೂ ಮರು ಬಳಕೆಗಾಗಿ ಅದನ್ನು ತುಂಬಿಸುವುದು ಸಾಕಷ್ಟು ಕುಟುಂಬಗಳಿಗೆ ಇಂದಿಗೂ ಕಷ್ಟಸಾಧ್ಯ.

ಅಡುಗೆಯನ್ನು ಕಡಿಮೆ ಖರ್ಚಿನಲ್ಲಿ ನಿರ್ವಹಣೆ ಮಾಡಲು ಕೆಲವು ಕುಟುಂಬಗಳು ಪುನಃ ಸೌದೆಗಳ ಮೊರೆ ಹೋಗಿದ್ದರೆ, ದೇವನಹಳ್ಳಿ ತಾಲ್ಲೂಕಿನ ಹಾರೋಹಳ್ಳಿ ಮಹಿಳೆಯೊಬ್ಬರು ನವೀಕರಿಸಬಹುದಾದ ಇಂಧನದ ಮೂಲಕ ಗೋಬರ್‌ ಗ್ಯಾಸ್‌ ಉತ್ಪಾದನೆ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಬುಳ್ಳಹಳ್ಳಿಯ ಸುನಂದಮ್ಮ ಎಂಬುವರು ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿರುವ ಯೋಜನೆಗಳನ್ನು ಬಳಸಿಕೊಂಡು ಕೇವಲ ₹ 34 ಸಾವಿರ ಅನುದಾನದಲ್ಲಿ ಸ್ವಂತ ಜಮೀನಿನಲ್ಲಿಯೇ ಗೋಬರ್ ಗ್ಯಾಸ್‌ ಘಟಕ ಸ್ಥಾಪಿಸಿದ್ದಾರೆ. ನಿತ್ಯವೂ ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಪದಾರ್ಥ, ರಾಸುಗಳ ಸಗಣಿಯಿಂದ ಜೈವಿಕ ಅನಿಲ ಉತ್ಪಾದಿಸಿ ಉಪಯೋಗಿಸುತ್ತಿದ್ದಾರೆ.

ADVERTISEMENT

ಆರೋಗ್ಯದ ದೃಷ್ಟಿಯಿಂದ ಗೋಬರ್ ಗ್ಯಾಸ್‌ನಲ್ಲಿ ಕಡಿಮೆ ಹೊಗೆ ಬರಲಿದ್ದು, ಮಾಲಿನ್ಯ ನಿಯಂತ್ರಣಕ್ಕೆ ಹಾಗೂ ಪರಿಸರ ಕಾಳಜಿಗೆ ಗ್ರಾಮೀಣ ಭಾಗದಲ್ಲಿ ಅಳಿಲು ಸೇವೆ ಸಲ್ಲಿಸುವ ಹೆಮ್ಮೆಯೂ ನಮ್ಮಲ್ಲಿದೆ ಎಂದು ಅವರು ತಿಳಿಸುತ್ತಾರೆ.

ಮನೆಯಲ್ಲಿಯೇ ಗ್ಯಾಸ್‌ ಉತ್ಪತ್ತಿಯಾಗುವುದರಿಂದ ಹಣ ಮತ್ತು ಸಮಯ ಎರಡೂ ಉಳಿತಾಯವಾಗಲಿದೆ. ಎಲ್‌ಪಿಜಿ ಗ್ಯಾಸ್‌ಗೆ ಮೀಸಲಾಗಿದ್ದ ಹಣವನ್ನು ಇತರೆ ಕೆಲಸಕ್ಕೆ ಉಪಯೋಗಿಸುತ್ತೇವೆ. ರಾಸುಗಳ ಸಗಣಿಯನ್ನು ತಿಪ್ಪೆಗೆ ಹಾಕುವ ಬದಲು ಅನಿಲವಾಗಿ ಪರಿವರ್ತನೆ ಮಾಡಿಕೊಂಡಿದ್ದೇವೆ. ನೀರಿನೊಂದಿಗೆ ಮಿಶ್ರಣ ಮಾಡಿ ಗೋಬರ್‌ ಗ್ಯಾಸ್ ಘಟಕಕ್ಕೆ ಹಾಕಿದರೆ ಶುದ್ಧವಾದ ಅಡುಗೆ ಅನಿಲ ಸಿಗುತ್ತದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.