ADVERTISEMENT

ಹೊಸಕೋಟೆ: ಮಕ್ಕಳ ಕೈಯಲ್ಲಿ ಜೀವ ತೆಳೆದ ಪುಟಾಣಿ ಗಣಪ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 2:11 IST
Last Updated 26 ಆಗಸ್ಟ್ 2025, 2:11 IST
ಚಿತ್ತಾರ ಆರ್ಟ್ ಕ್ಯಾಂಪ್‌ನಲ್ಲಿ ಜೇಡಿಮಣ್ಣಿನಲ್ಲಿ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ನಿರತರಾಗಿರುವ ಮಕ್ಕಳು
ಚಿತ್ತಾರ ಆರ್ಟ್ ಕ್ಯಾಂಪ್‌ನಲ್ಲಿ ಜೇಡಿಮಣ್ಣಿನಲ್ಲಿ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ನಿರತರಾಗಿರುವ ಮಕ್ಕಳು   

ಹೊಸಕೋಟೆ: ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಚಿತ್ತಾರ ಆರ್ಟ್ ಕ್ಯಾಂಪ್ ಇಲ್ಲಿಯ ಕುವೆಂಪು ನಗರದ ಮೊದಲ ಮುಖ್ಯ ರಸ್ತೆಯ ಚಿತ್ತಾರ ಆರ್ಟ್ ಕ್ಯಾಂಪ್ ನಲ್ಲಿ ಮಕ್ಕಳಿಗಾಗಿ ಜೇಡಿಮಣ್ಣಿನಿಂದ ಗಣೇಶ ಮೂರ್ತಿ ತಯಾರಿಕಾ ತರಬೇತಿ ಶಿಬಿರ ಹಮ್ಮಿಕೊಂಡಿತ್ತು.  

ಪರಿಸರಕ್ಕೆ ಅಪಾಯಕಾರಿಯಾದ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ (ಪಿಒಪಿ) ಮೂರ್ತಿಗಳ ಬದಲು ಪರಿಸರಸ್ನೇಹಿ ಗಣಪನ ಮೂರ್ತಿ ತಯಾರಿಸಲು ಹಿತೇಶಗೌಡ ಮತ್ತು ಸಂಗಡಿಗರು ಚಿತ್ತಾರ ಆರ್ಟ್ ಕ್ಯಾಂಪ್ ಆಯೋಜಿಸಿದ್ದರು.

ಮಕ್ಕಳಿಗೆ ಜೇಡಿಮಣ್ಣು ಕೊಟ್ಟು ಅವರ ಕೈಯಿಂದಲೇ ಗಣೇಶನ ವಿಗ್ರಹಗಳನ್ನು ಮಾಡಿಸಲಾಯಿತು. ಗಣೇಶ ಹಬ್ಬದ ದಿನ ಮನೆಗಳಲ್ಲಿ ಇದೇ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸುವ ಮತ್ತು ವಿಸರ್ಜಿಸುವ ವಿಧಾನವನ್ನು ಮಕ್ಕಳಿಗೆ ತಿಳಿಸಿ ಕೊಡಲಾಯಿತು.

ADVERTISEMENT

ಶಿಬಿರದಲ್ಲಿ 40 ಮಕ್ಕಳು ಭಾಗವಹಿಸಿದ್ದರು. ಜೇಡಿ ಮಣ್ಣಿನಲ್ಲಿ ವೈವಿಧ್ಯಮಯ ಗಣೇಶ ಮೂರ್ತಿಗಳು ಮಕ್ಕಳ ಕೈಯಲ್ಲಿ ಜೀವ ತೆಳೆದವು. ತಾವು ಕೈಯಾರೆ ತಯಾರಿಸಿದ್ದ ಮೂರ್ತಿಗಳನ್ನು ಮನೆಗೆ ಕೊಂಡೊಯ್ಯುವಾಗಲಂತೂ ಮಕ್ಕಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ಸಾವಿರಾರು ರೂಪಾಯಿಗಳ ಪಿಒಪಿ ಗಣೇಶ ವಿಗ್ರಹಗಳ ವಿಸರ್ಜನೆಯಿಂದ ರಾಸಾಯನಿಕ ಬಣ್ಣ ಹಾಗೂ ಪಿಒಪಿ ನೀರಿನಲ್ಲಿ ಸುಲಭವಾಗಿ ಕರಗದೆ ಜಲಚರಗಳಿಗೆ ಹಾನಿಯುಂಟು ಮಾಡುತ್ತಿವೆ. ಪ್ರಕೃತಿಗೆ ಮಾರಕವಾದ ಬಣ್ಣಗಳು ಮತ್ತು ಪಿಒಪಿಯಿಂದ ಕೆರೆ, ಬಾವಿ, ಕುಂಟೆಗಳ ನೀರು ಮಲೀನವಾಗುತ್ತಿವೆ.

ಪರಿಸರ ಸ್ನೇಹಿ ಗಣಪನ ವಿಗ್ರಹ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಯಿಂದ ಪರಿಸರಕ್ಕೆ ಯಾವುದೇ ಹಾನಿ ಆಗುವುದಿಲ್ಲ ಎಂಬ ಅರಿವನ್ನು ಮಕ್ಕಳಿಗೆ ತಿಳಿಸುವ ಅಶಯದಿಂದ ಐದು ವರ್ಷಗಳಿಂದ ಈ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ ಎಂದು ಆಯೋಜಕ ಹಿತೇಶ ಗೌಡ ಹೇಳಿದರು

ಚಿತ್ತಾರ ಆರ್ಟ್ ಕ್ಯಾಂಪ್‌ನಲ್ಲಿ ಜೇಡಿಮಣ್ಣಿನಲ್ಲಿ ತಾವು ತಯಾರಿಸಿದ ಗಣೇಶ ಮೂರ್ತಿಗಳೊಂದಿಗೆ ಮಕ್ಕಳು  
ಚಿತ್ತಾರ ಆರ್ಟ್ ಕ್ಯಾಂಪ್‌ನಲ್ಲಿ ಜೇಡಿಮಣ್ಣಿನಲ್ಲಿ ಮಕ್ಕಳು ತಯಾರಿಸಿದ ಗಣೇಶ ಮೂರ್ತಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.