
ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ಗಳ ಆಗಮನ ದ್ವಾರದ (ಅರೈವಲ್ ಗೇಟ್) ಬಳಿಯ ಪಿಕ್ ಅಪ್ ಪಾಯಿಂಟ್‌ನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಲು ಟ್ಯಾಕ್ಸಿಗಳಿಗೆ ವಿಧಿಸಲಾಗಿದ್ದ ₹150 ಪಿಕ್ ಅಪ್ ಶುಲ್ಕವನ್ನು ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ತಾತ್ಕಾಲಿಕವಾಗಿ ಕೈಬಿಟ್ಟಿದೆ.
ಪಿಕ್ ಅಪ್ ಪಾಯಿಂಟ್‌ನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಲು ಏಳು ನಿಮಿಷಕ್ಕೆ ಟ್ಯಾಕ್ಸಿಗಳಿಗೆ ₹150 ಶುಲ್ಕ ವಿಧಿಸಿದ್ದ ಪ್ರಾಧಿಕಾರ ಟ್ಯಾಕ್ಸಿಗಳ ಫಾಸ್ ಟ್ಯಾಗ್‌ನಲ್ಲಿ ಕಡಿತಗೊಳಿಸುವ ವ್ಯವಸ್ಥೆಯನ್ನು ಸೋಮವಾರದಿಂದ ಜಾರಿಗೊಳಿಸಿತ್ತು.
ಈ ನಿರ್ಧಾರ ವಿರೋಧಿಸಿ ಟ್ಯಾಕ್ಸಿ ಚಾಲಕರು ಟರ್ಮಿನಲ್ ಬಳಿಯ ಪಿಕ್ ಅಪ್ ಪಾಯಿಂಟ್‌ಗಳಲ್ಲಿ ಸೋಮವಾರ ಪ್ರತಿಭಟನೆ ಮಾಡಿದ್ದರು. ಇದರಿಂದ ಸಾಕಷ್ಟು ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಟ್ಯಾಕ್ಸಿ ಚಾಲಕರ ಸಂಘಟನೆಗಳು ಬೃಹತ್ ಪ್ರತಿಭಟನಾ ರ‍್ಯಾಲಿಯನ್ನೂ ಹಮ್ಮಿಕೊಂಡಿದ್ದವು. ಅದಕ್ಕೂ ಮುನ್ನವೇ ಶುಲ್ಕ ವಿಧಿಸುವ ತನ್ನ ನಿರ್ಧಾರವನ್ನು ಪ್ರಾಧಿಕಾರವು ತಾತ್ಕಾಲಿಕವಾಗಿ ತಡೆಹಿಡಿದಿದೆ.ಇದನ್ನು ವಿಮಾನ ನಿಲ್ದಾಣದ ವಕ್ತಾರರು ದೃಢಪಡಿಸಿದ್ದಾರೆ.
ಸಾರಿಗೆ ಸಚಿವರ ಪತ್ರಕ್ಕೂ ಕಿಮ್ಮತ್ತಿಲ್ಲ! ಪಿಕ್ ಅಪ್ ಪಾಯಿಂಟ್‌ಗಳಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಶುಲ್ಕ ವಿಧಿಸುವ ನಿರ್ಧಾರವನ್ನು ವಿರೋಧಿಸಿ ರಾಜ್ಯ ಚಾಲಕರ ಒಕ್ಕೂಟ ಮೇ9 ರಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿಯಾಗಿತ್ತು. ಟ್ಯಾಕ್ಸಿ ಚಾಲಕರಿಗೆ ತೊಂದರೆಯಾಗುವ ಈ ವ್ಯವಸ್ಥೆ ಜಾರಿ ಮಾಡದಂತೆ ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸಚಿವರು ಪತ್ರ ಬರೆದಿದ್ದರು. ಆದರೆ ಅದನ್ನು ಪರಿಗಣನೆಗೆ ತೆಗೆದುಕೊಳ್ಳದೇ ಮೇ 20ರಂದು ಪಿಕ್ ಅಪ್ ಶುಲ್ಕ ಹೇರಲಾಗಿತ್ತು.
'ಪ್ರಜಾವಾಣಿ'ಗೆ ಧನ್ಯವಾದ ತಿಳಿಸಿದ ಚಾಲಕರ ಒಕ್ಕೂಟ ಹೊಸ ಪಿಕ್ ಅಪ್ ನೀತಿಯಿಂದಾಗಿ ಟ್ಯಾಕ್ಸಿಗಳಿಗೆ ಪ್ರತಿ ಏಳು ನಿಮಿಷಕ್ಕೆ ₹150 ಟೆಂಪೋ ಟ್ರಾವಲೆರ್‌ಗಳಿಗೆ ₹300 ಹಾಗೂ ಬಸ್‌ಗಳಿಗೆ ₹600 ಶುಲ್ಕ ವಿಧಿಸಲಾಗಿತ್ತು. ಇದರ ವಿರುದ್ಧ ಚಾಲಕರು ನೋವು ತೋಡಿಕೊಂಡಿದ್ದರು. ಅವರ ನೋವನ್ನು ಮೊದಲು ಪ್ರಕಟಿಸಿದ್ದೆ 'ಪ್ರಜಾವಾಣಿ'. ಅದರ ಫಲವಾಗಿ ಪಿಕ್ ಶುಲ್ಕ ಸ್ಥಗಿತಗೊಂಡಿದೆ. ’ವಿಮಾನ ನಿಲ್ದಾಣದಲ್ಲಿ ಬಹುತೇಕ ಕನ್ನಡಿಗರೇ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಇದನ್ನು ನಂಬಿಕೊಂಡೇ ಜೀವನ ನಿರ್ವಹಿಸುತ್ತಿದ್ದಾರೆ. ಈಗ ಉಳಿದ ಹಣದಿಂದ 15 ದಿನ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡಬಹುದು. ಇದಕ್ಕೆ ಕಾರಣವಾದ ಪ್ರಜಾವಾಣಿಗೆ ಧನ್ಯವಾದ‘ ಎಂದು ಚಾಲಕರ ಒಕ್ಕೂಟ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.