
ದೊಡ್ಡಬಳ್ಳಾಪುರ: ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ 2013ರ ಕಾಯ್ದೆಯಂತೆ ಸೂಕ್ತ ಪರಿಹಾರ ನೀಡದಿದ್ದರೆ ಜಮೀನು ಬಿಟ್ಟುಕೊಡುವುದಿಲ್ಲ. ಈ ಬಗ್ಗೆ ಏಳು ದಿನಗಳ ಗಡುವು ಪಡೆದಿರುವ ಅಧಿಕಾರಿಗಳು ಸೂಕ್ತ ನಿರ್ಧಾರ ಪ್ರಕಟಿಸದೇ ಇದ್ದರೆ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲಾಗುವುದು ಎಂದು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಮುಖಂಡ ಎಂ.ಆನಂದ್ ಎಚ್ಚರಿಸಿದರು.
ತಾಲ್ಲೂಕಿನ ಕೊನಘಟ್ಟ ಗ್ರಾಮದ ಕಾಮನಬಂಡೆ ಸಮೀಪ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ 69 ದಿನಗಳಿಂದ ಧರಣಿ ನಡೆಸುತ್ತಿರುವ ಸ್ಥಳದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಐದಾರು ಬಾರಿ ಅಧಿಕಾರಿಗಳೊಂದಿಗೆ ಸಮಾಲೋಚನ ಸಭೆ ನಡೆಸಲಾಗಿದೆ. ಪ್ರತಿಭಾರಿಯೂ ಅಧಿಕಾರಿಗಳು ರೈತರ ಕೃಷಿ ಜಮೀನಿಗೆ ಸೂಕ್ತ ದರ ನಿಗದಿಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.
ಇದು ಅಧಿಕಾರಿಗಳಿಗೆ ರೈತರು ನೀಡುತ್ತಿರುವ ಕೊನೆಯ ಅವಕಾಶವಾಗಿದೆ. ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ಕುರಿತಂತೆ ಗ್ರಾಮ ಸಭೆ ನಡೆಸುವ ಮೂಲಕ ಭೂಸ್ವಾಧೀನಕ್ಕೆ ಒಳಪಡುತ್ತಿರುವ ಗ್ರಾಮಗಳ ಎಲ್ಲರು ಸರ್ವಾನುಮತದಿಂದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈ ಭಾಗದಲ್ಲಿ ಈಗಾಗಲೇ ಎತ್ತಿನಹೊಳೆ ಪೈಪ್‌ಲೈನ್ ಹಾಕುವ ಕಾಮಗಾರಿ ನೆಡೆಯುತ್ತಿದ್ದು, ರೈತರ ಭೂಮಿಗೆ ಒಂದಕ್ಕೆ ನಾಲ್ಕು ಪಟ್ಟು ದರ ನಿಗದಿ ಪಡಿಸಿದ್ದಾರೆ. ಇದೇ ಮಾದರಿಯಲ್ಲಿ ಕೆಐಎಡಿಬಿ ಸಹ ಸೂಕ್ತ ದರ ನಿಗದಿ ಮಾಡಡಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ರಾಮಾಂಜಿನಪ್ಪ ಮಾತನಾಡಿ, ಕೊನಘಟ್ಟ, ನಾಗದೇನಹಳ್ಳಿ, ಆದಿನಾರಾಯಣಹೊಸಹಳ್ಳಿ, ಗ್ರಾಮಗಳ ರೈತರಿಗೆ ಸೇರಿರುವ 971ಎಕರೆ ಫಲವತ್ತಾದ ಕೃಷಿ ಜಮೀನು ಸ್ವಾಧೀನವಾಗುತ್ತಿದೆ. ದ್ರಾಕ್ಷಿ, ಬಾಳೆ, ರೇಷ್ಮೆ, ತೆಂಗು, ಮಾವು ಸೇರಿದಂತೆ ವಿವಿಧ ತರಕಾರಿ ಬೆಳ ಬೆಳೆಯುತ್ತಿರುವ ಜಮೀನುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಸ್ವಾಧೀನಕ್ಕೆ ಒಳಪಡುತ್ತಿರುವುದು. ಇಂತಹ ಭೂಮಿಗೆ ಕೆಐಎಡಿಬಿ ಅಧಿಕಾರಿಗಳು ಸೂಕ್ತ ದರ ನೀಡದೆ ರೈತರು ಹೇಗೆ ಬಿಟ್ಟುಕೊಡಲು ಸಾಧ್ಯ ಎಂದು ಪ್ರಶ್ನಿಸಿದರು.
ನಿವೃತ್ತ ಶಿಕ್ಷಕ ಕೃಷ್ಣಪ್ಪ ಮಾತನಾಡಿದರು. ಸ್ಥಳೀಯ ರೈತ ಮುಖಂಡರಾದ ನರಸಿಂಹಮೂರ್ತಿ, ವೆಂಕಟೇಶ್, ರಮೇಶ್, ಮಹೇಶ್, ನಾಗರಾಜು, ಕೃಷ್ಣಪ್ಪಕೋಡಿಹಳ್ಳಿ, ಬೈರೇಗೌಡ, ಮಂಜುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.