ADVERTISEMENT

ಆಹಾರ ಉತ್ಪಾದನೆಗೆ ಒತ್ತು ನೀಡಿ: ರಾಜೇಶ್ವರಿ ಭಾಸ್ಕರ್

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 5:46 IST
Last Updated 22 ಜುಲೈ 2022, 5:46 IST
ವಿಜಯಪುರದ ಇನ್ ಸ್ಪೈರ್ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಆಹಾರ ಮೇಳಕ್ಕೆ ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಭಾಸ್ಕರ್ ಚಾಲನೆ ನೀಡಿದರು
ವಿಜಯಪುರದ ಇನ್ ಸ್ಪೈರ್ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಆಹಾರ ಮೇಳಕ್ಕೆ ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಭಾಸ್ಕರ್ ಚಾಲನೆ ನೀಡಿದರು   

ವಿಜಯಪುರ:ಪಟ್ಟಣದ ಶಿಡ್ಲಘಟ್ಟ ಕ್ರಾಸ್‌ನಲ್ಲಿರುವ ಇನ್ ಸ್ಫೈರ್ ಪ್ರಥಮದರ್ಜೆ ಕಾಲೇಜಿನಲ್ಲಿ ಗುರುವಾರ ಆಹಾರ ಮೇಳ ನಡೆಯಿತು.

ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಬಗೆಯ ಆಹಾರ ಪದಾರ್ಥಗಳ ಮಳಿಗೆ ತೆರೆದು ವ್ಯಾಪಾರ ನಡೆಸಿದರು. ಸಾವಯವ ಆಹಾರ ಕುರಿತು ಜಾಗೃತಿ ಮೂಡಿಸಿದರು. ನೆರೆಹೊರೆಯ ಕಾಲೇಜುಗಳಿಂದ ವಿದ್ಯಾರ್ಥಿಗಳು ಹಾಗೂ ನಾಗರಿಕರು ಬಂದು ವ್ಯಾಪಾರ ನಡೆಸಿದರು.

ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಭಾಸ್ಕರ್ ಮಾತನಾಡಿ, ಜನರು ಆರೋಗ್ಯವಂತರಾಗಿ ಇರಲು ಪೌಷ್ಟಿಕ ಆಹಾರ ಎಷ್ಟು ಮುಖ್ಯವೋ ಅದಕ್ಕಿಂತಲೂ ಎರಡು ಪಟ್ಟು ಉತ್ಪಾದನೆ ಮಾಡುವುದು ಕೂಡ ಅತಿಮುಖ್ಯ. ಕೇವಲ ಮಾರುವುದು, ಖರೀದಿಸುವಂತಹ ವ್ಯಾಪಾರ ಚಟುವಟಿಕೆಗಳು ಮಾತ್ರವಲ್ಲದೆ ಯುವಸಮೂಹ ಆಹಾರ ಧಾನ್ಯಗಳ ಉತ್ಪಾದನೆ ಕಡೆಗೂ ಹೆಚ್ಚು ಒಲವು ತೋರಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಪೌಷ್ಟಿಕಾಂಶ ಭರಿತ ಆಹಾರ ಉತ್ಪಾದನೆಯಾಗಬೇಕಾಗಿದೆ. ಸಾವಯವ ಕೃಷಿಯ ಕಡೆಗೆ ಒಲವು ತೋರಿಸಬೇಕಾಗಿದೆ. ದುಡಿಯುವ ವರ್ಗ, ಉತ್ಪಾದನಾ ವಲಯ ಇಂದು ಸಂಕಷ್ಟದಲ್ಲಿದೆ. ಯುವಕರು ಆಹಾರ ಬೆಳೆದು ದೇಶ ಕಾಪಾಡುವ ಕಡೆಗೆ ಚಿಂತನೆ ನಡೆಸಬೇಕಿದೆ ಎಂದು ಕಿವಿಮಾತು ಹೇಳಿದರು.

ಕಾಲೇಜಿನ ಅಧ್ಯಕ್ಷ ಆರ್. ಮುನೇಗೌಡ ಮಾತನಾಡಿ, ಶಾಲಾ– ಕಾಲೇಜಿನ ಹಂತದಲ್ಲಿ ಆಯೋಜನೆ ಮಾಡುವಂತಹ ಇಂತಹ ಮೇಳಗಳಿಂದ ವಿದ್ಯಾರ್ಥಿಗಳು ಹೆಚ್ಚು ಕಲಿಯಲು ಅನುಕೂಲವಾಗುತ್ತದೆ ಎಂದು ಹೇಳಿದರು.

ವ್ಯಾಪಾರದಲ್ಲಿಕೇವಲ ಲಾಭ, ನಷ್ಟ ಮಾತ್ರವಲ್ಲದೆ ಸಮಾಜದಲ್ಲಿನ ಜನರ ಭಾವನೆಗಳು, ಅವರ ಆರ್ಥಿಕ ಸ್ಥಿತಿಗತಿ, ನಾವು ಸಮಾಜಕ್ಕೆ ಹೇಗೆ ಹೊಂದಾಣಿಕೆಯಾಗಬೇಕು ಎಂಬುದನ್ನು ಕಲಿಯಲು ಅವಕಾಶವಾಗುತ್ತದೆ. ಬೇರೆ ಬೇರೆ ಭಾಷೆಗಳ ಕಲಿಕೆಗೆ ಅನುಕೂಲವಾಗುತ್ತದೆ. ವ್ಯಾಪಾರ ಮಾಡಲು ಶಿಕ್ಷಣ ಮಾನದಂಡವಲ್ಲ. ಜ್ಞಾನದಿಂದ ಇದನ್ನು ಮಾಡಬೇಕಿದೆ ಎಂದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಿ. ನಾರಾಯಣಸ್ವಾಮಿ ಮಾತನಾಡಿ, ಆಹಾರ ಎಂಬುದು ಪ್ರತಿಯೊಬ್ಬರ ಆಯ್ಕೆಯಾಗಿದೆ. ಉತ್ತಮ ಆರೋಗ್ಯ ಪಡೆದುಕೊಳ್ಳಬೇಕೆಂದರೆ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾಡುವುದು ಅತಿಮುಖ್ಯ. ಆದ್ದರಿಂದ ವಿದ್ಯಾರ್ಥಿಗಳು ಕೂಡ ಉತ್ತಮ ಆರೋಗ್ಯ ನೀಡುವ ಆಹಾರ ಪದಾರ್ಥಗಳ ಬಗ್ಗೆ ಜನರಿಗೆ ತಿಳಿವಳಿಕೆ ನೀಡಬೇಕು ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಎನ್. ಶ್ರೀನಿವಾಸಮೂರ್ತಿ, ಟೌನ್ ಜೆಡಿಎಸ್ ಅಧ್ಯಕ್ಷ ಎಸ್. ಭಾಸ್ಕರ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕಲ್ಯಾಣ್ ಕುಮಾರ್ ಬಾಬು, ಮುಖಂಡರಾದ ಪ್ರಭಾಕರ್, ಭುಜೇಂದ್ರಪ್ಪ, ಬಸವರಾಜ್, ಆಸೀಪ್‌, ಕಾಲೇಜಿನ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.