ADVERTISEMENT

ಪರಿಸರ ಸಂರಕ್ಷಣೆ ಎಲ್ಲ ದೇಶಗಳ ಹೊಣೆ: ಡಿ.ವಿ.ಸದಾನಂದಗೌಡ

‘ಪ್ಲಾಸ್ಟಿಕ್, ಘನತ್ಯಾಜ್ಯ ನಿರ್ವಹಣೆ ಅಂತರರಾಷ್ಟ್ರೀಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 13:07 IST
Last Updated 14 ಫೆಬ್ರುವರಿ 2020, 13:07 IST
ಸಚಿವ ಸದಾನಂದಗೌಡ ಕೈಪಿಡಿ ಬಿಡುಗಡೆ ಮಾಡಿದರು
ಸಚಿವ ಸದಾನಂದಗೌಡ ಕೈಪಿಡಿ ಬಿಡುಗಡೆ ಮಾಡಿದರು   

ದೇವನಹಳ್ಳಿ: ವಿಶ್ವದಲ್ಲಿ ಹೆಚ್ಚುತ್ತಿರುವ ಪರಿಸರ ಮಾಲಿನ್ಯವನ್ನು ಸಂರಕ್ಷಿಸುವ ಗುರುತರ ಜವಬ್ದಾರಿ ಎಲ್ಲ ದೇಶಗಳದ್ದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಪಕ್ಕದಲ್ಲಿರುವ ಕೈಗಾರಿಕಾ ವಲಯ ಪ್ರದೇಶದಲ್ಲಿನ ಸೆಪೆಕ್ಟ್ ಸಭಾಂಗಣದಲ್ಲಿ ‘ಪ್ಲಾಸ್ಟಿಕ್ ಮತ್ತು ಇತರ ಘನತ್ಯಾಜ್ಯ ನಿರ್ವಹಣೆ ಮತ್ತು ಸಂಶೋಧನೆನಿರತ ಉದ್ಯೋಗಿಗಳಿಗೆ ಮೂರು ದಿನಗಳ ಅಂತರರಾಷ್ಟ್ರೀಯ 11ನೇ ಸಮ್ಮೇಳನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ’ ಉದ್ಘಾಟಿಸಿ ಮಾತನಾಡಿದರು.

ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯಗಳ ನಿರ್ವಹಣೆ ಒಂದು ಸವಾಲಾಗಿದೆ. ಇಂದು ತಾಂತ್ರಿಕ ಕ್ಷೇತ್ರದಲ್ಲಿ ಅನೇಕ ಬೆಳವಣಿಗೆ ಆಗುತ್ತಿದೆ. ತ್ಯಾಜ್ಯ ನಿರ್ವಹಣೆ ಘಟಕಗಳು ತಮ್ಮ ಜವಾಬ್ದಾರಿ ಹೆಚ್ಚು ಮಾಡಿಕೊಳ್ಳಬೇಕು. ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ತಡೆಗಟ್ಟಲು ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಹೇಳಿದರು.

ADVERTISEMENT

ಪ್ರಸ್ತುತ ಸೆಪೆಕ್ಟ್ ಘಟಕ ಆರಂಭಗೊಂಡು ಪ್ಲಾಸ್ಟಿಕ್ ಮತ್ತು ಇತರ ತಾಜ್ಯಗಳನ್ನು ಕ್ರೋಡೀಕರಿಸಿ ವಿವಿಧ ವಿನ್ಯಾಸಭರಿತ ವಸ್ತುಗಳ ತಯಾರಿಕೆಯಲ್ಲಿ ಮುಂದಾಗಿರುವುದು ಉತ್ತಮ ಬೆಳವಣಿಗೆ. ಆದರೂ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತ್ತೊಂದು ಘಟಕ ಆರಂಭಿಸಲು ರಾಜ್ಯ ಸರ್ಕಾರ ಚಿಂತಿಸುತ್ತಿದೆ ಎಂದರು.

‘ನಾವು ಜಾಗ ನೀಡುತ್ತೇವೆ; ಶೇಕಡಾವಾರು ಅನುದಾನ ನೀಡುತ್ತೇವೆ. ಅಸಕ್ತ ಬಂಡವಾಳ ಹೂಡಿಕೆದಾರರು ಮುಂದೆ ಬರಬೇಕು’ ಎಂದು ಹೇಳಿದರು.

ಆರೋಗ್ಯವಂತ ಸಮಾಜ ಮತ್ತು ದೇಶವಿದ್ದರೆ ಮಾತ್ರ ಪ್ರಗತಿ ಹೊಂದಲು ಸಾಧ್ಯ. ಇದನ್ನೇ ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರ ಸ್ವಚ್ಛ ಭಾರತದ ಪರಿಕಲ್ಪನೆ ಜಾರಿ ಮಾಡಿದೆ. ತಳಮಟ್ಟದಿಂದ ಮರು ಬಳಕೆ ಮಾಡಬಹುದಾದ ಪ್ಲಾಸ್ಟಿಕ್ ಹೊರತು ಪಡಿಸಿ ಇತರೆ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ ಇಂತಹ ಘಟಕಕ್ಕೆ ಸಾಗಾಣಿಕೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

ಪೆಟ್ರೋಕೆಮಿಕಲ್ಸ್ ನಲ್ಲಿ ತಂತ್ರಜ್ಞಾನ ನಾವೀನ್ಯತೆಗಾಗಿ 9ನೇ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡೌನ್ ಸ್ಟ್ರೀಮ್ ಪಾಲಿಮರ್ ಪ್ರೊಸೆಸಿಂಗ್ ಇಂಡಸ್ತ್ರೀಸ್‌ನ ವೈಯಕ್ತಿಕ ತಂಡಗಳ ಕೈಗಾರಿಕಾ ವಿಭಾಗದಲ್ಲಿ 40 ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಅವರ ಸಾಧನೆ ಗುರುತಿಸಿ ಪ್ರಶಸ್ತಿ ನೀಡಲಾಯಿತು.

ಅಮೆರಿಕಾ, ಫ್ರಾನ್ಸ್‌, ಬ್ರೆಜಿಲ್, ಮಲೇಶಿಯಾ, ಥೈಲಾಂಡ್, ಚೀನಾ, ಜಪಾನ್, ದಕ್ಷಿಣಾ ಅಫ್ರಿಕಾ ಮತ್ತು ಯು.ಎ.ಇ. ಪ್ರತಿನಿಧಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.