ದೇವನಹಳ್ಳಿ: ಜಿಲ್ಲೆಯಲ್ಲಿರುವ ಪಾಕಿಸ್ತಾನದ ಪ್ರಜೆಗಳನ್ನು ಅವರ ದೇಶಕ್ಕೆ ಕಳಿಸಿಕೊಡುವಂತೆ ಒತ್ತಾಯಿಸಿ ತಾಲ್ಲೂಕಿನ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಬಿಜೆಪಿಯಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಅವರಿಗೆ ಗುರುವಾರ ಮನವಿ ಪತ್ರ ಸಲ್ಲಿಸಲಾಯಿತು.
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಪ್ರಚೋದಿತ ಭಯೋತ್ಪಾದಕರು ಹಿಂದೂ ಪ್ರವಾಸಿಗರ ಹತ್ಯೆ ನಡೆಸಿದ ಪ್ರಕರಣ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪಾಕಿಸ್ತಾನಕ್ಕೆ ಉತ್ತರ ನೀಡಲು ಐದು ರಾಜತಾಂತ್ರಿಕ ಕ್ರಮ ಕೈಗೊಂಡಿದೆ. ಪಾಕಿಸ್ತಾನಿ ಪ್ರಜೆಗಳನ್ನು ಅವರ ದೇಶಕ್ಕೆ ವಾಪಸ್ ಕಳಿಸಬೇಕು ಎಂದು ಸೂಚಿಸಿದ್ದು, ಕೂಡಲೇ ಆ ಕೆಲಸವಾಗಬೇಕು ಎಂದು ಮಾಜಿ ಶಾಸಕ ಜಿ. ಚಂದ್ರಣ್ಣ ಆಗ್ರಹಿಸಿದರು.
ರಾಜ್ಯ ಸೇರಿದಂತೆ ಬಿಜೆಪಿಯೇತರ ರಾಜ್ಯದ ಸರ್ಕಾರಗಳು ಈ ವಿಚಾರವನ್ನು ಉದಾಸೀನ ಮಾಡುತ್ತಿವೆ. ಈ ಕೂಡಲೇ ಅವರನ್ನು ಗಡಿಪಾರು ಮಾಡಬೇಕು. ಕೇಂದ್ರ ಸರ್ಕಾರ ರಾಜ್ಯದಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿ ವಾಪಸ್ ಕಳಿಸದೆ ನಿರ್ಲಕ್ಷ ಮಾಡಿದೆ. ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ರಾಜ್ಯಪಾಲರಿಗೆ ಈ ಮೂಲಕ ಮನವಿ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.
ಪಾಕಿಸ್ತಾನಿ ಬೆಂಬಲಿತ ಭಯೋತ್ಪಾದಕರು ದೇಶದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಿ ದೇಶದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನಿಗಳು ದೇಶ ಬಿಟ್ಟು ತೊಲಗಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಕೃಷ್ಣಪ್ಪ ಒತ್ತಾಯಿಸಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಚ್.ಎಂ.ರವಿ ಕುಮಾರ್, ದೇವನಹಳ್ಳಿ ಬಿಜೆಪಿ ಮಂಡಲ ಅಧ್ಯಕ್ಷ ಅಂಬರೀಶ್ ಗೌಡ, ಬಿಜೆಪಿ ರೈತ ಮೋರ್ಚಾ ಖಜಾಂಚಿ ಕೆ.ಸಿ.ಮುನಿರಾಜು, ಮಂಡಲ ಬಿಜೆಪಿ ಉಪಾಧ್ಯಕ್ಷೆ ಪುನೀತ, ಮುಖಂಡರಾದ ಆರ್.ಕೆ.ನಂಜೇಗೌಡ, ಬಿ.ಕೆ.ನಾರಾಯಣಸ್ವಾಮಿ, ಕಮಲೇಶ್, ಶ್ಯಾನಪ್ಪಹಳ್ಳಿ ರವಿ, ಭ್ರಟ್ಟರಮಾರೇನಹಳ್ಳಿ ಸುಬ್ರಮಣಿ, ಅನಿಲ್ ಕುಮಾರ್, ಗಿರೀಶ್ ಅಶ್ವಥ್ ಗೌಡ, ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.