ADVERTISEMENT

ಆನೇಕಲ್: ಮಾರ್ಚ್‌ 11,12ರಂದು ಸುಗಮ ಸಂಗೀತ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2023, 4:52 IST
Last Updated 10 ಮಾರ್ಚ್ 2023, 4:52 IST
ಎನ್‌.ಎಸ್‌.ಪ್ರಸಾದ್‌
ಎನ್‌.ಎಸ್‌.ಪ್ರಸಾದ್‌   

ಆನೇಕಲ್ : ಕರ್ನಾಟಕ ಸುಗಮ ಸಂಗೀತ ಪರಿಷತ್‌ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯ ಮಟ್ಟದ 18ನೇ ಸುಗಮ ಸಂಗೀಯ ಸಮ್ಮೇಳನ ಶನಿವಾರ ಮತ್ತು ಭಾನುವಾರ (ಮಾರ್ಚ್‌ 11 ಮತ್ತು 12) ರಂದು ಎಎಸ್‌ಬಿ ಕಾಲೇಜು ಮುಂಭಾಗದ ಸರ್ಕಾರಿ ಹೊಸ ಮಾಧ್ಯಮಿಕ ಶಾಲೆ ಮೈದಾನದಲ್ಲಿ ನಡೆಯಲಿದೆ.

ಖ್ಯಾತ ಮ್ಯಾಂಡೋಲಿನ್‌ ವಾದಕ ಎನ್‌.ಎಸ್.ಪ್ರಸಾದ್‌ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಎರಡು ದಿನಗಳ ಸಮ್ಮೇಳನದ ಅಂಗವಾಗಿ ಸಮ್ಮೇಳನಾಧ್ಯಕ್ಷರು ಮತ್ತು ಸಾಹಿತಿ, ಕಲಾವಿದರ ಮೆರವಣಿಗೆಯನ್ನು ಶಾಸಕ ಬಿ.ಶಿವಣ್ಣ ಬೆಳಿಗ್ಗೆ 10ಕ್ಕೆ ಉದ್ಘಾಟಿಸಲಿದ್ದಾರೆ. ಹಿರಿಯ ಕವಿ ಡಾ.ದೊಡ್ಡರಂಗೇಗೌಡ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಸಮ್ಮೇಳನದ ಅಂಗವಾಗಿ ಗೀತ ಸಂಗೀತ ಸ್ಮರಣ ಸಂಚಿಕೆಯನ್ನು ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಬಿಡುಗಡೆ ಮಾಡಲಿದ್ದಾರೆ. ಡಾ.ಎಚ್‌ಎಸ್‌ವಿ ಮತ್ತು ಡಾ.ಕಾ.ವೆಂ ಶ್ರೀನಿವಾಸಮೂರ್ತಿ ಅವರಿಗೆ ಕಾವ್ಯಶ್ರೀ ಪ್ರಶಸ್ತಿ ಮತ್ತು ಪುತ್ತೂರು ನರಸಿಂಹನಾಯಕ್‌ ಹಾಗೂ ಡಾ.ರೋಹಿಣಿ ಮೋಹನ್‌ ಅವರಿಗೆ ಭಾವಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

ಸಮ್ಮೇಳನದಲ್ಲಿ ಯುವ ಗಾಯಕ ಮತ್ತು ಗಾಯಕಿಯರಿಂದ ನವೋನ್ವೇಷ ಕಾರ್ಯಕ್ರಮ ನಡೆಸಲಾಗಿದೆ. ‘ಕವಿ ನೋಡಿ ಕವಿತೆ ಕೇಳಿ‘ ಎಂಬ ಶಿರ್ಷಿಕೆಯಲ್ಲಿ ಖ್ಯಾತ ಕವಿಗಳ ಕವನ ವಾಚನ ಮತ್ತು ಗಾಯಕರಿಂದ ಗಾಯನ ಹಮ್ಮಿಕೊಳ್ಳಲಾಗಿದೆ. ಸುಗಮ ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆ ಬಗ್ಗೆ ಕವಿ ಬಿ.ಆರ್‌.ಲಕ್ಷ್ಮಣರಾವ್‌ ಅಧ್ಯಕ್ಷತೆಯಲ್ಲಿ ‘ಸಂಸ್ಮರಣೆ’ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ. ಆನೇಕಲ್‌ನ ಶಿಬಿರಾರ್ಥಿಗಳಿಂದ ಸಮ್ಮೇಳನಾಧ್ಯಕ್ಷರ ಎನ್‌.ಎಸ್.ಪ್ರಸಾದ್‌ ಅವರಿಂದ ಗಾಯನ ಸಂಯೋಜನೆ ಆಯೋಜಿಸಲಾಗಿದೆ.

ADVERTISEMENT

ಎರಡು ದಿನಗಳು ಗೀತ ಸಂಗೀತ ಕಾರ್ಯಕ್ರಮ ನಡೆಯಲಿದೆ. ಶನಿವಾರ ಸಂಜೆ 6ಕ್ಕೆ ಶ್ರೀನಿವಾಸ ಉಡುಪ, ಡಾ.ಕಿಕ್ಕೇರಿ ಕೃಷ್ಣಮೂರ್ತಿ, ಪ್ರೇಮಲತಾ ದಿವಾಕರ್‌, ನಾಗಚಂದ್ರಿಕಾ ಭಟ್‌ ಸೇರಿದಂತೆ ವಿವಿಧ ಗಾಯಕರಿಂದ ವಿವಿಧ ಗಾಯಕರಿಂದ ಗೀತ ಸಂಗೀತ ನಡೆಯಲಿದೆ.

ಭಾನುವಾರ ಸಂಜೆ 6ಕ್ಕೆ ವೈ.ಕೆ.ಮುದ್ದುಕೃಷ್ಣ, ಎಂ.ಡಿ.ಪಲ್ಲವಿ, ಸಂಗೀತ ಕಟ್ಟಿ, ಡಾ.ಮುದ್ದುಮೋಹನ್‌, ಪುತ್ತೂರು ನರಸಿಂಹನಾಯಕ್‌, ಕೆ.ಎಸ್.ಸುರೇಖಾ, ಪಂಚಮ್‌ ಹಳಬಂಡಿ, ರಾಜರಾಂ, ಶಶಿಕಲಾ ಅವರು ಗೀತ ಸಂಗೀತ ನಡೆಸಲಿದ್ದಾರೆ. ಎನ್‌.ಎಸ್.ಪ್ರಸಾದ್‌ ಮತ್ತು ತಂಡದವರಿಂದ ವಾದ್ಯ ವೈಭದ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಕಾರಿ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.