ADVERTISEMENT

ದೇವನಹಳ್ಳಿ| ಸುಳ್ಳು ದೂರು ದಾಖಲಿಸಿದರೆ ಜೈಲು ಶಿಕ್ಷೆ: ಉಪ ಲೋಕಾಯುಕ್ತ ಬಿ. ವೀರಪ್ಪ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 2:01 IST
Last Updated 5 ಸೆಪ್ಟೆಂಬರ್ 2025, 2:01 IST
ದೇವನಹಳ್ಳಿಯ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಲೋಕಾಯುಕ್ತ ಸಂಸ್ಥೆಯಲ್ಲಿ ಬಾಕಿ ಇರುವ ದೇವನಹಳ್ಳಿ ತಾಲ್ಲೂಕಿನ ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆಯಲ್ಲಿ ನಡೆಯಿತು.
ದೇವನಹಳ್ಳಿಯ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಲೋಕಾಯುಕ್ತ ಸಂಸ್ಥೆಯಲ್ಲಿ ಬಾಕಿ ಇರುವ ದೇವನಹಳ್ಳಿ ತಾಲ್ಲೂಕಿನ ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆಯಲ್ಲಿ ನಡೆಯಿತು.   

ದೇವನಹಳ್ಳಿ: ಸಾರ್ವಜನಿಕರು ಲೋಕಾಯುಕ್ತ ಹಾಗೂ ಇತರ ನ್ಯಾಯಾಲಯಗಳಲ್ಲಿ ಸುಳ್ಳು ದೂರು ನೀಡಬಾರದು. ಸುಳ್ಳು ದೂರು ನೀಡಿರುವುದು ಸಾಬೀತಾದರೆ ಅರ್ಜಿದಾರರು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಜೊತೆಗೆ ನೈಜ ದೂರು, ಪ್ರಕರಣಗಳ ವಿಲೇವಾರಿ ವಿಳಂಬವಾಗುತ್ತದೆ ಎಂದು ಉಪ ಲೋಕಾಯುಕ್ತ ನ್ಯಾ. ಬಿ. ವೀರಪ್ಪ ಹೇಳಿದರು.

ಬೀರಸಂದ್ರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ಲೋಕಾಯುಕ್ತದಲ್ಲಿ ಬಾಕಿ ಇರುವ ದೇವನಹಳ್ಳಿ ತಾಲ್ಲೂಕಿನ ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯದದ್ಯಂತ ಲೋಕಾಯುಕ್ತದಲ್ಲಿ 25 ಸಾವಿರ ಪ್ರಕರಣ ಬಾಕಿ ಇವೆ. ಈ ಪ್ರಕರಣ ಇತ್ಯರ್ಥ ಮಾಡಲು ಕ್ರಮವಹಿಸಲಾಗಿದೆ. ಇದರಲ್ಲಿ ಸುಮಾರು 10 ಸಾವಿರ ಸುಳ್ಳು ದೂರು ಇವೆ. ಯಾವುದೇ ದೂರು, ಪ್ರಕರಣವಾದರೂ ಅದನ್ನು ಕ್ರಮಬದ್ಧವಾಗಿ ವಿಲೇವಾರಿ ಮಾಡಬೇಕು. ಸುಳ್ಳು ದೂರು, ಪ್ರಕರಣಗಳಿಂದ ಇನ್ನುಳಿದ ನೈಜ ದೂರು, ಪ್ರಕರಣಗಳ ಇತ್ಯರ್ಥ ಸವಾಲಿನ ಕೆಲಸವಾಗುತ್ತಿದೆ ಎಂದರು.

ADVERTISEMENT

ಯಾವ ದೂರಿನಲ್ಲಿ ಸತ್ಯ ಇದೆಯೋ ಅಂತಹ ದೂರು ಮಾತ್ರ ದಾಖಲಿಸಬೇಕು. ಸುಳ್ಳು ದೂರು, ಪ್ರಕರಣ ದಾಖಲಿಸಿದ ಅರ್ಜಿದಾರರಿಗೆ ಮೂರು ವರ್ಷ ಶಿಕ್ಷೆ ವಿಧಿಸಬಹುದು. ಅಧಿಕಾರಿಗಳು ಸಾರ್ವಜನಿಕರ ಕೆಲಸಗಳನ್ನು ಅನಗತ್ಯ ವಿಳಂಬ ಮಾಡದೇ ತ್ವರಿತವಾಗಿ ಮುಗಿಸಬೇಕು ಎಂದು ಸಲಹೆ ಮಾಡಿದರು.

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮರಂಗ ತನ್ನ ಸಾಮರ್ಥ್ಯ ಕಳೆದುಕೊಳ್ಳುತ್ತಿವೆ ಎಂಬ ಆರೋಪ ಜನರಿಂದ ಕೇಳಿಬರುತ್ತಿದೆ. ಅಧಿಕಾರಿಗಳು ಇದನ್ನು ಸರಿಪಡಿಸಬೇಕು. ಕೆಲವೆಡೆ ಲೋಕಾಯುಕ್ತ ದಾಳಿ ನಡೆಸಿದ ಸಂದರ್ಭದಲ್ಲಿ ಬೆದರಿಕೆ ಹಾಕುವ ಕೆಲಸವಾಗುತ್ತದೆ. ಆದರೆ ಯಾರ ಬೆದರಿಕೆಗೂ ಬಗ್ಗಬೇಕಿಲ್ಲ. ನ್ಯಾಯಯುತವಾಗಿ ಎಲ್ಲವನ್ನೂ ವಿಚಾರಣೆ ನಡೆಸಲಾಗುತ್ತದೆ ಎಂದು ಭರವಸೆ ನೀಡಿದರು.

ಮಾಹಿತಿ ನೀಡಲು ಸೂಚನೆ: ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿರುವ ಗ್ರಾಮಲೆಕ್ಕಿಗರು, ಕಂದಾಯ ನಿರೀಕ್ಷಕರ ಕುಟುಂಬ, ಆಸ್ತಿ ಹಾಗೂ ಅವಲಂಬಿತ ಸದಸ್ಯರ ವಿವರ ಒಳಗೊಂಡ ಸಂಪೂರ್ಣ ಮಾಹಿತಿ ವರದಿಯನ್ನು ತಿಂಗಳ ಒಳಗಾಗಿ ನೀಡಿ ಎಂದು ಉಪವಿಭಾಗಾಧಿಕಾರಿಗೆ ಸೂಚಿಸಿದರು.

ಅಕ್ರಮ ಖಾತೆ ವರ್ಗಾವಣೆ, ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಿ ಭೂ ಒತ್ತುವರಿ, ಜಮೀನು ಸರ್ವೆ ಕಾರ್ಯ, ಸರ್ಕಾರಿ ರಸ್ತೆ, ಸ್ಮಶಾನ ಒತ್ತುವರಿ ಸೇರಿದಂತೆ ವಿವಿಧ ಪ್ರಕರಣಗಳ ವಿಚಾರಣೆ, ವಿಲೇವಾರಿ ನಡೆಯಿತು.

ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಜಿಪಂ ಸಿಇಒ ಡಾ.ಕೆ.ಎನ್ ಅನುರಾಧ, ಎಸ್‌ಪಿ ಸಿ.ಕೆ ಬಾಬಾ, ಲೋಕಾಯುಕ್ತ ಬೆಂಗಳೂರು ಗ್ರಾಮಾಂತರ ಪೊಲೀಸ್ ಎಸ್‌ಪಿ ಡಾ.ಕೆ.ವಂಶಿಕೃಷ್ಣ, ಉಪ ನಿಬಂಧಕ ಅರವಿಂದ್ ಎನ್.ವಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಶ್ರೀ ಶೈಲ್ ಭೀಮಸೇನ ಬಗಾಡಿ ಭಾಗವಹಿಸಿದ್ದರು.

ಅನ್ಯಾಯ ಆಕ್ರಮದಿಂದ ಮಾಡಿದ ಆಸ್ತಿಯಿಂದ ನೆಮ್ಮದಿಯಾಗಿರಲು ಸಾಧ್ಯವಿಲ್ಲ. ಅಧಿಕಾರದ ಜತೆಗೆ ಸಂಸ್ಕಾರ ಕೂಡ ಇರಬೇಕು.
ನ್ಯಾ. ಬಿ.ವೀರಪ್ಪ ಉಪ ಲೋಕಾಯುಕ್ತ

ಮಾಜಿ ಯೋಧನಿಗೆ ನ್ಯಾಯ ಒದಗಿಸಲು ಸೂಚನೆ:

ದೇವನಹಳ್ಳಿ ತಾಲ್ಲೂಕಿನ ಹಾರೋಹಳ್ಳಿ ಗ್ರಾಮದ ಮಾಜಿ ಯೋಧನ ಎರಡು ಎಕರೆ ಜಮೀನಿಗೆ ಬಗರ್ ಹುಕುಂ ಸಾಗುವಳಿ ಚೀಟಿ ವಿತರಿಸಲು ವಿಳಂಬವಾಗುತ್ತಿದೆ. ಈ ಪ್ರಕರಣದಲ್ಲಿ ಆ ಜಮೀನಿನ ಮೇಲೆ ಮಾಲಿಕರು ಸ್ವಾಧೀನ ಅನುಭವದಲ್ಲಿ ಇದ್ದರಾ ಅಥವಾ ಇಲ್ಲವಾ ಎಂಬುದರ ಬಗ್ಗೆ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಿ ಎಂದು ನ್ಯಾ. ವೀರಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ಶಾಲೆ ಜಮೀನು ಒತ್ತುವರಿ ತೆರವಿಗೆ‌ ಗಡುವು:

ಸರ್ಕಾರಿ ಶಾಲೆಯ ಜಮೀನು ಒತ್ತುವರಿ ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತರು ಗರಂ ಆದರು. ಎಲ್ಲ ನೋಡಿಕೊಂಡು ಸುಮ್ಮನಿರುವ ಎಸ್‌ಡಿಎಂಸಿ ಡಿಡಿಪಿಐ ಬಿಇಒ ಹಾಗೂ ಶಾಲಾ ಮುಖ್ಯೋಪಾಧ್ಯಾಯರ ವಿರುದ್ದ ಪ್ರಕರಣ ದಾಖಲಿಸಿ. ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದು ಸೂಚಿಸಿದರು. ಎರಡು ತಿಂಗಳೊಳಗಾಗಿ ಶಾಲೆಯ ಜಾಗ ಒತ್ತುವರಿ ತೆರವುಗೊಳಿಸಿ ಹದ್ದುಬಸ್ತು ಮಾಡಲು ದೇವನಹಳ್ಳಿ ತಹಶೀಲ್ದಾರರಿಗೆ ಸೂಚಿಸಿದರು.

ಆರ್‌ಟಿಒ ಕಾರ್ಯವೈಖರಿಗೆ ಆಶ್ಚರ್ಯ:

ಮಾಲೀಕನಿಗೆ ಗೊತ್ತಿಲ್ಲದಂತೆಯೇ ಮತ್ತೊಬ್ಬರ ಹೆಸರಿಗೆ ವಾಹನ ವರ್ಗಾಯಿಸಿದ ದೂರಿಗೆ ಸಂಬಂಧಿಸಿದಂತೆ ಉಪ ಲೋಕಾಯುಕ್ತ ವೀರಪ್ಪ ಅವರು ದೇವನಹಳ್ಳಿ ಆರ್‌ಟಿಒ ಕಚೇರಿ ಕಾರ್ಯವೈಖರಿ ಕುರಿತು ಅಸಮಾಧಾನ ಹಾಗೂ ಆಶ್ಚರ್ಯ ವ್ಯಕ್ತಪಡಿಸಿದರು. ಜೊತೆಗೆ ಆರ್‌ಟಿಓ ವಿರುದ್ಧ ದೂರು ದಾಖಲಿಸುವಂತೆ ಸೂಚಿಸಿದರು. ಆಗ ಆರ್‌ಟಿಒ ಕಚೇರಿ ಅಧಿಕಾರಿಗಳು ವಾಹನದ ಮೂಲ ಮಾಲೀಕರಿಗೆ ಅದನ್ನು ವರ್ಗಾಯಿಸಲಾಗುವು ಎಂದು  ತಿಳಿಸಿದರು.  ದ್ವಿಚಕ್ರ ವಾಹನ ಕೊಂಡೊಯ್ದ ವ್ಯಕ್ತಿಯೊಬ್ಬರು ತನ್ನ ಹೆಸರಿಗೆ ವಾಹನದ ಮಾಲಿಕತ್ವವನ್ನು ವರ್ಗಾಯಿಸಿಕೊಂಡು ದೇವನಹಳ್ಳಿ ಆರ್‌ಟಿಒ ಕಚೇರಿ ನೋಂದಣಿ ಮಾಡಿಸಿಕೊಂಡಿದ್ದರು.  ವಾಹನ ಮಾಲೀಕರ ಸಹಿಆಧಾರ್ ಕಾರ್ಡ್ ಹಾಗೂ ಇತರ ದಾಖಲೆಗಳು ಇಲ್ಲದೆ ಇದು ಹೇಗೆ ಸಾಧ್ಯ ಎಂದು ಉಪ ಲೋಕಾಯುಕ್ತರು ಆಶ್ಚರ್ಯ ವ್ಯಕ್ತಪಡಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.