ADVERTISEMENT

ಮಾರುಕಟ್ಟೆಯಿಲ್ಲದೇ ಪರದಾಡುತ್ತಿರುವ ರೈತ

ಕೊಯ್ಲು ಮಾಡಲಾಗದೆ ಹೊಲದಲ್ಲೇ ಉಳಿದ ಬೆಳೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2020, 15:45 IST
Last Updated 17 ಏಪ್ರಿಲ್ 2020, 15:45 IST
ಆನೇಕಲ್ ತಾಲ್ಲೂಕಿನ ಎಂ.ಮೇಡಹಳ್ಳಿಯ ಬಳಿ ಬೆಳೆದಿರುವ ಟೊಮೊಟೊ ಬೆಳೆ ಮಾರುಕಟ್ಟೆಯಿಲ್ಲದೇ ತೋಟದಲ್ಲಿಯೇ ಬಿಡಲಾಗಿದೆ
ಆನೇಕಲ್ ತಾಲ್ಲೂಕಿನ ಎಂ.ಮೇಡಹಳ್ಳಿಯ ಬಳಿ ಬೆಳೆದಿರುವ ಟೊಮೊಟೊ ಬೆಳೆ ಮಾರುಕಟ್ಟೆಯಿಲ್ಲದೇ ತೋಟದಲ್ಲಿಯೇ ಬಿಡಲಾಗಿದೆ   

ಆನೇಕಲ್: ಸಾವಯವ ಕೃಷಿಯ ಮೂಲಕ ಉತ್ತಮ ಲಾಭ ಗಳಿಸುತ್ತಿದ್ದ ತಾಲ್ಲೂಕಿನ ಮಾಯಸಂದ್ರ ಸಮೀಪದ ಎಂ.ಮೇಡಹಳ್ಳಿಯ ಪ್ರಗತಿಪರ ರೈತ ಮುರುಗೇಶ್‌ ಬೆಳೆಗಳಿಗೆ ಮಾರುಕಟ್ಟೆಯಿಲ್ಲದೇ ಫಸಲಿಗೆ ಬಂದ ಬೆಳೆಯನ್ನು ಕೊಯ್ಲು ಮಾಡದೇ ಹಾಗೇ ಬಿಟ್ಟಿದ್ದು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ರಾಸಾಯನಿಕಗಳನ್ನು ಬಳಸದೇ ಸಾವಯವ ಕೃಷಿಯ ಮೂಲಕ ಪ್ರತಿದಿನಸುಮಾರು 1 ಟನ್‌ವರೆಗೆಕೆಜಿ ತರಕಾರಿಯನ್ನು ಸಹಜ ಸಾವಯವ ತರಕಾರಿ ಬೆಳೆಗಾರರ ಸಂಘದ ಮೂಲಕ ಮಾರುಕಟ್ಟೆಗೆ ನೀಡುತ್ತಿದ್ದರು. ಆದರೆ ಕಳೆದ 20 ದಿನಗಳಿಂದ ಲಾಕ್‌ಡೌನ್‌ನಿಂದಾಗಿ ಮಾರುಕಟ್ಟೆಗೆ ತರಕಾರಿಗಳನ್ನು ಕಳುಹಿಸಲಾಗುತ್ತಿಲ್ಲ. ಹಾಗಾಗಿ ಕೈಗೆ ಬಂದ ತುತ್ತು. ಬಾಯಿಗೆ ಬಾರದಂತಾಗಿದೆ. ಸರ್ಕಾರ ರೈತರ ಸಮಸ್ಯೆಗಳನ್ನು ಅರಿತು ಪರಿಹಾರ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು’ ಎಂದು ಮುರುಗೇಶ್ ಒತ್ತಾಯಿಸಿದರು.

ಸುಮಾರು ಅರ್ಧ ಎಕರೆ ಪ್ರದೇಶದಲ್ಲಿ ಟೊಮೆಟೊ ಬೆಳೆದಿದ್ದು ಸಾವಯವ ಬೆಳೆಯಾಗಿದ್ದರಿಂದ ಉತ್ತಮ ಬೆಲೆಯಿತ್ತು. ಬೆಲೆಯಿಲ್ಲದ ಕಾರಣ ಟೊಮೆಟೊ ಕೊಯ್ಲು ಮಾಡಿಲ್ಲ. ತೋಟದಲ್ಲಿ ಬಿಡಲಾಗಿದೆ. ಕೋಸಿನಲ್ಲಿ ವಿಶೇಷ ಬಗೆಯಾದ ಬ್ರಕೋಲಿ ಬೆಳೆಯನ್ನು ಬೆಳೆದಿದ್ದಾರೆ. ಒಂದು ಕೆಜಿ ₹ 130ವರೆಗೂ ಮಾರಾಟವಾಗುತ್ತಿತ್ತು. ಆದರೆ ಕೇಳುವವರೇ ಇಲ್ಲದೇ ತೋಟದಲ್ಲಿ ಕೊಳೆಯುತ್ತಿದೆ. ರೆಡ್‌ ಕ್ಯಾಬೇಜ್‌, ಗ್ರೀನ್‌ ಕ್ಯಾಬೇಜ್‌ ಸ್ಥಿತಿಯು ಇದೇ ಆಗಿದೆ. ಹಾಗಾಗಿ ರೈತರು ಲಾಕ್‌ಡೌನ್‌ನಿಂದಾಗಿ ಸಂಪೂರ್ಣ ನೆಲ ಕಚ್ಚಿದ್ದಾರೆ.

ADVERTISEMENT

ನೀರಿನ ಕೊರತೆಯ ನಡುವೆಯೂ ಬೇಸಿಗೆಯಲ್ಲಿ ಉತ್ತಮ ಬೆಳೆ ಬೆಳೆದು ಲಾಭ ಗಳಿಸುವ ಭರವಸೆಯಲ್ಲಿದ್ದ ರೈತರಿಗೆ ಕೊರೊನಾ ಸಿಡಿಲಿನಂತೆ ಬಂದೆರೆಗಿದೆ. ಆನೇಕಲ್‌ ತಾಲ್ಲೂಕಿನ ಮಾಯಸಂದ್ರ, ಕಂಬಳಿಪುರ, ಕೊಡಲಿಪುರ, ಮೇಡಹಳ್ಳಿ, ಹಳೇಹಳ್ಳಿ, ಕರ್ಪೂರು ಸೇರಿದಂತೆ ವಿವಿಧೆಡೆ ಸಾವಯವ ಕೃಷಿಯ ಮೂಲಕ ತರಕಾರಿ ಬೆಳೆಗಳನ್ನು ಬೆಳೆದು ಸಹಜ ಸಾವಯವ ತರಕಾರಿ ಬೆಳೆಗಾರರ ಸಂಘದ ಮೂಲಕ ಬೆಂಗಳೂರಿಗೆ ಕಳುಹಿಸಲಾಗುತ್ತಿತ್ತು. ಆದರೆ ಕಳೆದ 20 ದಿನಗಳಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.