ದೊಡ್ಡಬಳ್ಳಾಪುರ: ಭಾರತೀಯ ಕಿಸಾನ್ ಸಂಘದ ಜಿಲ್ಲಾ ಹಾಗೂ ತಾಲ್ಲೂಕು ಘಟಕದಿಂದ ಕೃಷಿಯ ಮೂಲ ಪುರುಷ ಬಲರಾಮ ಜಯಂತ್ಯುತ್ಸವ ನಗರದಲ್ಲಿ ಭಾನುವಾರ ನಡೆಯಿತು.
ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ನಾಗರಾಜಯ್ಯ ಮಾತನಾಡಿ, ದೇಶದ ಗ್ರಾಮೀಣ ಜನಸಂಖ್ಯೆಯ ಸುಮಾರು ಶೇ70 ರಷ್ಟು ನೇರವಾಗಿ ಅಥವಾ ಪರೋಕ್ಷವಾಗಿ ಕೃಷಿ ಅವಲಂಬಿಸಿದೆ. ಆದರೆ ರೈತ ವಿರೋಧಿ ಕಾನೂನು, ಸಾಲದ ಹೊರೆ, ಕಳಪೆ ಸರ್ಕಾರಿ ನೀತಿ, ಸಬ್ಸಿಡಿಗಳಲ್ಲಿ ಭ್ರಷ್ಟಾಚಾರ, ಬೆಳೆ ವೈಫಲ್ಯ, ಮಾನಸಿಕ ಆರೋಗ್ಯ, ವೈಯಕ್ತಿಕ ಸಮಸ್ಯೆಗಳು ಮತ್ತು ಕೌಟುಂಬಿಕ ಸಮಸ್ಯೆಗಳಿಂದ ರೈತರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಮಸ್ಯೆ ತಡೆಯುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ದೂರಿದರು.
ನಮ್ಮ ಹಕ್ಕು ಪಡೆಯಬೇಕಾದರೆ ರೈತರು ಒಗ್ಗಟ್ಟಿನ ಹೋರಾಟದಿಂದ ಮಾತ್ರ ಸಾಧ್ಯ ಎಂದರು.
ತಾಲ್ಲೂಕು ಅಧ್ಯಕ್ಷ ನೆಲ್ಲುಗುದಿಗೆ ಚಂದ್ರು, ವ್ಯವಸಾಯದಲ್ಲಿ ಅಧಿಕಶ್ರಮ ಪ್ರತಿಫಲ ಕಡಿಮೆ. ಇದರಿಂದ ರೈತರು, ಕಾರ್ಮಿಕ ವರ್ಗ ವ್ಯವಸಾಯ ಬಿಟ್ಟು ನಗರ, ಪಟ್ಟಣದ ಕಡೆ ಮುಖಮಾಡಿ ಅಂಗಡಿ ಮಂಗಟ್ಟುಗಳು ಮಾಡಿಕೊಂಡು ವ್ಯವಸಾಯ ಮರೆಯುವ ಸ್ಥಿತಿಗೆ ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಪ್ರಮುಖ ಆಂಜಿನಪ್ಪ, ಮಹಿಳಾ ಪ್ರಮುಖ್ ಅಂಬಿಕಾ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಾಜಘಟ್ಟ ಗಣೇಶ್, ಕಾರ್ಯಕರ್ತೆ ಗೀತಾ, ಗೂಳ್ಯ ಶಿವಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.