ADVERTISEMENT

ಕೃಷಿಭೂಮಿ ಸ್ವಾಧೀನ ಕೈಬಿಡಲು ಒತ್ತಾಯ– ಡಿಕೆಶಿಗೆ ರೈತರ ಮನವಿ

ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಹಂದೇನಹಳ್ಳಿ ಪಂಚಾಯಿತಿ ರೈತರ ಮನವಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2024, 5:15 IST
Last Updated 14 ಏಪ್ರಿಲ್ 2024, 5:15 IST
ರೈತರು ಆಯೋಜಿಸಿದ್ದ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿದರು
ರೈತರು ಆಯೋಜಿಸಿದ್ದ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿದರು   

ಆನೇಕಲ್ : ತಾಲ್ಲೂಕಿನ ಹಂದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ 610 ಎಕರೆ ಜಮೀನಿನ ಸ್ವಾಧೀನ ಕೈಬಿಡುವಂತೆ ಒತ್ತಾಯಿಸಿ ಶನಿವಾರ ಆಯೋಜಿಸಿದ್ದ ರೈತರ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭಾಗವಹಿಸಿ ರೈತರಿಂದ ಅಹವಾಲು ಸ್ವೀಕರಿಸಿದರು.

ಆನೇಕಲ್‌ ತಾಲ್ಲೂಕಿನಲ್ಲಿ ಈಗಾಗಲೇ ಗೃಹ ಮಂಡಳಿ ಮತ್ತು ಕೆಎಚ್‌ಬಿಗೆ 10 ಸಾವಿರ ಎಕರೆಗೂ ಹೆಚ್ಚು ರೈತರ ಜಮೀನು ಭೂ ಸ್ವಾಧೀನವಾಗಿದೆ. ಇದಲ್ಲದೇ ಪ್ರಸ್ತುತ ತಾಲ್ಲೂಕಿನ ಹಂದೇನಹಳ್ಳಿಯಲ್ಲಿ 610 ಎಕರೆ ಭೂಸ್ವಾಧೀನಕ್ಕೆ ಕೆಐಎಡಿಬಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ ಎಂದು ರೈತರು ತಿಳಿಸಿದರು.

ಈ ಭಾಗದಲ್ಲಿ ಸುಮಾರು 170 ಎಕರೆ ಪ್ರದೇಶದಲ್ಲಿ ರೇಷ್ಮೆ, 60-70 ಗ್ರೀನ್‌ ಹೌಸ್‌, ಸುಮಾರು 450ಕ್ಕೂ ಹೆಚ್ಚು ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಹಾಗಾಗಿ ಕೃಷಿಯನ್ನೇ ಅವಲಂಭಿಸಿ ರೈತರು ಜೀವನ ಮಾಡುತ್ತಿದ್ದಾರೆ. ಹಂದೇನಹಳ್ಳಿ ಗ್ರಾಮದಲ್ಲಿ ಕೃಷಿ ಭೂಮಿಯನ್ನು ಕೈಗಾರಿಕೆಗೆ ಸ್ವಾಧೀನ ಪಡಿಸಿಕೊಳ್ಳುತ್ತಿರುವುದರಿಂದ ರೈತರಿಗೆ ತೊಂದರೆಯಾಗಲಿದೆ. ಹಂದೇನಹಳ್ಳಿಗೆ ಹೊಂದಿಕೊಂಡಂತೆ 1167 ಎಕರೆ ಗೃಹ ಮಂಡಳಿಗೆ ಸ್ವಾಧೀನವಾಗಿ ಮನೆ ನಿರ್ಮಿಸಲಾಗಿದೆ. ಹಾಗಾಗಿ ರೈತರನ್ನು ಒಕ್ಕಲ್ಲೆಬ್ಬಿಸುವ ಸರ್ಕಾರದ ನೀತಿಗೆ ತಡೆ ನೀಡಬೇಕು. ಭೂಸ್ವಾಧೀನ ಕೈಬಿಡಬೇಕು ಎಂದು ರೈತರು ಮನವಿ ಮಾಡಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ತೀರ್ಮಾನ ಪ್ರಕಟಿಸಲು ಸಾಧ್ಯವಿಲ್ಲ. ಚುನಾವಣೆ ಮುಗಿದ ನಂತರ ಸಂಬಂಧಿಸಿದ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ರೈತರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದರು.

ಶಾಸಕ ಬಿ.ಶಿವಣ್ಣ, ರೈತರಾದ ದಶರಥರೆಡ್ಡಿ, ಶ್ರೀನಿವಾಸ್‌ರೆಡ್ಡಿ, ನಂಜಾರೆಡ್ಡಿ, ನಾಗೇಶ್‌ರೆಡ್ಡಿ, ಕೃಷ್ಣಾರೆಡ್ಡಿ, ಮುನಿಯಲ್ಲಪ್ಪ, ಪ್ರಶಾಂತ್‌, ಮುಖಂಡರಾದ ವಿನೋಧ್‌, ಬಾಬುರೆಡ್ಡಿ, ಪುಷ್ಪರಾಜ್, ಲಿಂಗಣ್ಣ, ಮೋಹನ್‌, ಕೆ.ಪಿ.ರಾಜು, ಸುಶೀಲಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.