ADVERTISEMENT

ಕಾಯ್ದೆ ಹಿಂಪಡೆಯಿರಿ: ಶಾಸಕ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 7:13 IST
Last Updated 29 ಸೆಪ್ಟೆಂಬರ್ 2020, 7:13 IST
ನಾಡಪ್ರಭು ಕೆಂಪೇಗೌಡ ವೃತ್ತದ ಬಳಿ ಪ್ರತಿಭಟನಾ ನಿರತ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು
ನಾಡಪ್ರಭು ಕೆಂಪೇಗೌಡ ವೃತ್ತದ ಬಳಿ ಪ್ರತಿಭಟನಾ ನಿರತ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು   

ದೇವನಹಳ್ಳಿ: ‘ದುಡಿಯುವ ಶ್ರಮಜೀವಿಗಳಿಗೆ ತಿದ್ದುಪಡಿ ಕಾಯ್ದೆ ಮಾರಕವಾಗಲಿದ್ದು ಸರ್ಕಾರ ಕೂಡಲೇ ಹಿಂಪಡೆಯಬೇಕು’ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಒತ್ತಾಯಿಸಿದರು.

ಇಲ್ಲಿನ ರಾಷ್ಟ್ರೀಯ ಹೆದ್ದಾರಿ 7ರ ನಾಡ ಪ್ರಭು ಕೆಂಪೇಗೌಡ ವೃತ್ತದ ಬಳಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎ.ಪಿ.ಎಂ.ಸಿ, ಭೂ ಸುಧಾರಣಾ ಕಾಯ್ದೆ ಮತ್ತು ವಿದ್ಯುತ್ ಕಾಯ್ದೆಯನ್ನು ತಿದ್ದುಪಡಿ ಮಾಡಿ ಸುಗ್ರಿವಾಜ್ಞೆ ಮೂಲಕ ಅಂಗೀಕಾರ ಕಳುಹಿಸಿದ್ದರೂ ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ವಿರೋಧದ ನಡುವೆ ಒಪ್ಪಿಗೆಯಾಗಿ ವಿಧಾನ ಪರಿಷತ್ತಿನಲ್ಲಿ ಬಿದ್ದು ಹೋಗಿದೆ. ರೈತರ, ದಲಿತರ ಮತ್ತು ಕೂಲಿ ಕಾರ್ಮಿಕ ಹಿತ ಕಾಪಾಡುವ ನಿಟ್ಟಿನಲ್ಲಿ ಈ ಕಾಯ್ದೆಗಳ ತಿದ್ದುಪಡಿಯಾಗಿಲ್ಲ. ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಣ್ಣ ಹೇಳಿ ಕೆಲವೊಂದು ಮಾರ್ಪಾಡು ಮಾಡುವಂತೆ ಸಲಹೆ ನೀಡಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪಲಿಲ್ಲ. ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಸಮ್ಮತಿ ಮೇರೆಗೆ ಜೆಡಿಎಸ್ ಪಕ್ಷ ಕರ್ನಾಟಕ ಬಂದ್‍ಗೆ ಬೆಂಬಲಿಸಿ ಪ್ರಗತಿ ಪರ ಸಂಘಟನೆಗಳ ಜೊತೆಗೆ ಪ್ರತಿಭಟನೆಗೆ ಇಳಿದಿದೆ ಎಂದು ಹೇಳಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿ ಮಾಡಲು ಹೊರಟಿರುವ ಕಾಯ್ದೆಗಳು ಜನ ಮತ್ತು ರೈತ ವಿರೋಧಿಗಳಾಗಿವೆ. ವಿಧಾನ ಮಂಡಳದ ಅಧಿವೇಶನದಲ್ಲಿಯೂ ಚರ್ಚೆಯಾಗಲಿಲ್ಲ. ರೈತ ಮುಖಂಡರನ್ನು ಅಹ್ವಾನಿಸಿ ಸಾಧಕ ಬಾಧಕ ಬಗ್ಗೆ ಚರ್ಚೆ ಮಾಡಿಲ್ಲ. ಏಕಾಏಕಿ ತಿದ್ದುಪಡಿ ಎಂದರೆ ಇದೊಂದು ಏಕಪಕ್ಷಿಯ ಧೋರಣೆ, ಬಂಡವಾಳ ಶಾಹಿಗಳಿಗೆ ಮಾತ್ರ ಅನುಕೂಲವಾಗುತ್ತಿದೆ. ರೈತ ಸಂಘಟನೆಗಳ ಹೋರಾಟದ ಮುಂದಾಳುತ್ವದಿಂದ ರಾಜಕೀಯಕ್ಕೆ ಬಂದ ಯಡಿಯೂರಪ್ಪ ರೈತರನ್ನು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಅವೈಜ್ಞಾನಿಕವಾಗಿರುವ ತಿದ್ದುಪಡಿ ಕಾಯ್ದೆಯಿಂದ ರೈತರು ಭಿಕಾರಿಗಳಾಗಲಿದ್ದಾರೆ. ಬಂಡವಾಳ ಶಾಹಿಗಳು ರೈತರ ಬಳಿ ಹೋಗಿ ರೈತರ ಉತ್ಪನ್ನಗಳನ್ನು ಖರೀದಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿರುವ ನೂರಾರು ಎ.ಪಿ.ಎಂ.ಸಿಗಳಿಗೆ ಕಾಯಕಲ್ಪ ನೀಡಿ ಉತ್ತೇಜಿಸಬೇಕಿದ್ದ ಸರ್ಕಾರ ಸಂಪೂರ್ಣ ಮೂಲೆಗುಂಪು ಮಾಡಿದೆ’ ಎಂದು ದೂರಿದರು.

40 ನಿಷಗಳ ಕಾಲ ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು ಬಂದ್ ಮಾಡಿದ್ದರಿಂದ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.