ದೇವನಹಳ್ಳಿ: ಭೂಸ್ವಾಧೀನ ವಿರೋಧಿಸಿ ಸಾವಿರಕ್ಕೂ ಹೆಚ್ಚು ದಿನಗಳಿಂದ ಹೋರಾಟ ನಡೆಸಿರುವ ಚನ್ನರಾಯಪಟ್ಟಣದ ರೈತರ ಪರ ರಾಜ್ಯ ಸರ್ಕಾರ ಜುಲೈ 25ರಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳದೆ ಹೋದರೆ ಸರ್ಕಾರ ಪತನ ಆಗಬಹುದು ಎಂದು ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.
‘ಒಂದು ವೇಳೆ ಸರ್ಕಾರ ರೈತರ ವಿರುದ್ಧ ನಿರ್ಧಾರ ಕೈಗೊಂಡರೆ ಹೋರಾಟವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುತ್ತೇವೆ’ ಎಂದು ಸಂಘಟನೆಯ ಮುಖಂಡರು ಶನಿವಾರ ದೇವನಹಳ್ಳಿ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.
ರೈತರ ಹೋರಾಟಕ್ಕೆ ಸ್ಪಂದಿಸಿ ಸರ್ಕಾರ ರೈತರ ಪರವಾದ ನಿಲುವು ತಾಳಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಇದೇ ಕಾರಣಕ್ಕೆ ಸರ್ಕಾರ ಪತನವಾದರೂ ಆಗಬಹುದು ಎಂದು ಹೇಳಿದರು.
ಭೂಮಿ ಕೊಡುವುದಾಗಿ ಇತ್ತೀಚೆಗೆ ಕೆಲವರು ಹೇಳಿದ್ದಾರೆ. ಹೋರಾಟ ನಿರ್ಣಾಯಕ ಹಂತ ತಲುಪಿರುವಾಗ ಈ ರೀತಿಯ ಹೇಳಿಕೆಗೆ ಸರ್ಕಾರದ ಪ್ರಚೋದನೆ ಕಾರಣ. ಚನ್ನರಾಯಪಟ್ಟಣ ಹೋಬಳಿ 13 ಹಳ್ಳಿ ರೈತರು, ಜನರು ಒಗ್ಗೂಡಿ ಹೋರಾಡುತ್ತಿರುವಾಗ ಸರ್ಕಾರ ಆ ಒಗ್ಗಟ್ಟು ಮುರಿಯಲು ಭೂಸ್ವಾಧೀನ ಪರವಾದ ತಂಡ ಹುಟ್ಟು ಹಾಕಿದೆ. ಇದು ಸರ್ಕಾರಿ ಪ್ರಾಯೋಜಿತ ದಲ್ಲಾಳಿಗಳ ತಂಡ ಎಂದು ಹೋರಾಟಗಾರರು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.