ಬೆಂಗಳೂರು ಗ್ರಾಮಾಂತರ: ರೈತರ ನಿರಂತರ ಹೋರಾಟಕ್ಕೆ ಮಣಿದ ಸರ್ಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನರಾಯಪಟ್ಟಣ ಭೂಸ್ವಾಧೀನದಿಂದ ಹಿಂದೆ ಸರಿದ ಬಳಿಕ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಮತ್ತು ಆನೇಕಲ್ ತಾಲ್ಲೂಕಿನ ಸರ್ಜಾಪುರ ರೈತ ಹೋರಾಟಗಳಿಗೆ ಮತ್ತೇ ಹೊಸ ಹುಮ್ಮಸ್ಸು ಬಂದಿದೆ.
ಭೂಸ್ವಾಧೀನ ವಿರುದ್ಧ ಸಾವಿರಕ್ಕೂ ಹೆಚ್ಚು ದಿನ ಹೋರಾಟ ನಡೆಸಿ ಗೆದ್ದ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ರೈತರಿಂದ ಸ್ಫೂರ್ತಿ ಪಡೆದ ಉಳಿದ ರೈತ ಹೋರಾಟಗಾರರು ಹೋರಾಟವನ್ನು ತೀವ್ರಗೊಳಿಸಲು ಮುಂದಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಜಂಗಕೋಟೆ ಹೋಬಳಿಯ 13 ಗ್ರಾಮಗಳ 2,823 ಎಕರೆ ಜಮೀನನ್ನು ‘ಡೀಪ್ ಟೆಕ್ ಪಾರ್ಕ್’ ಸ್ಥಾಪನೆಗೆ ನೀಡಲು ಸರ್ಕಾರ ಮುಂದಾಗಿತ್ತು. ಇದರ ವಿರುದ್ಧ ರೈತರು 13 ತಿಂಗಳ ಹಿಂದೆ ಹೋರಾಟಕ್ಕೆ ಧುಮುಕಿದ್ದರು. ಇದುವರೆಗೂ ಹೋರಾಟ ಕಾವು ಪಡೆದಿರಲಿಲ್ಲ. ಈಗ ದೊಡ್ಡಮಟ್ಟದ ಹೋರಾಟಕ್ಕೆ ರೈತರು ವೇದಿಕೆ ಸಿದ್ಧ ಪಡಿಸಿದ್ದಾರೆ.
ಮತ್ತೊಂದೆಡೆ ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿ 12 ಗ್ರಾಮಗಳ 1,900 ಎಕರೆ ಕೃಷಿ ಭೂಮಿ ಸ್ವಾಧೀನಕ್ಕೆ ಕೆಐಎಡಿಬಿ ಹೊರಡಿಸಿರುವ ಅಧಿಸೂಚನೆ ವಿರೋಧಿಸಿ 462 ದಿನಗಳಿಂದ ರೈತರು ನಡೆಸುತ್ತಿರುವ ಹೋರಾಟ ಕಾವು ಪಡೆದುಕೊಂಡಿದೆ.
ಪ್ರತಿಭಟನೆ, ಸಮಾವೇಶ, ಜಾಥಾ ಮತ್ತು ರ‍್ಯಾಲಿ ನಡೆಸುತ್ತಿದ್ದ ರೈತರು ಆರು ತಿಂಗಳ ಹಿಂದೆ ಸರ್ವೆಗೆ ಬಂದಿದ್ದ ಕೆಐಎಡಿಬಿ ಅಧಿಕಾರಿಗಳ ಲ್ಯಾಪ್‌ಟಾಪ್ ಮತ್ತು ಡ್ರೋನ್ ಸುಟ್ಟು ಹಾಕಿದ್ದರು.
ಬೆಂಗಳೂರಿಗೆ ಹೊಂದಿಕೊಂಡಿದ್ದರೂ ಸರ್ಜಾಪುರ ವ್ಯಾಪ್ತಿಯ ರೈತರು ಕೃಷಿ ಮೇಲೆಯೇ ಅವಲಂಬಿತರಾಗಿದ್ದಾರೆ. ಅರ್ಧ ಬೆಂಗಳೂರಿಗೆ ತರಕಾರಿ, ಹಣ್ಣು, ಹೂವು ಪೂರೈಸುತ್ತಾರೆ.
ಭೂಮಿಯನ್ನು ಉಳಿಸಿಕೊಳ್ಳಲು ರೈತರು ‘ನಮ್ಮ ಭೂಮಿ ನಮ್ಮ ಹಕ್ಕು’ ಘೋಷಣೆಯೊಂದಿಗೆ ಹೋರಾಟ ಚುರುಕುಗೊಳಿಸಿದ್ದಾರೆ. ಹತ್ತು ದಿನಗಳಿಂದ ಮುತ್ತನಲ್ಲೂರು ಗ್ರಾಮದಲ್ಲಿ ಅಹೋರಾತ್ರಿ ಹೋರಾಟ ಆರಂಭಿಸಿದ್ದಾರೆ. ಜುಲೈ 18ರಂದು ತಾಲ್ಲೂಕಿನ ಕೊಮ್ಮಸಂದ್ರದಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದವರೆಗೂ ಬೈಕ್ ರ‍್ಯಾಲಿ ನಡೆಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.