ಆನೇಕಲ್: ತಾಲ್ಲೂಕಿನ ಸೂರ್ಯಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ಕಿತ್ತಗಾನಹಳ್ಳಿ ಗ್ರಾಮದಲ್ಲಿ ಸೋಮವಾರ ಅಡುಗೆ ಅನಿಲ ಸೋರಿಕೆಯಿಂದ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ತೀವ್ರ ಗಾಯಗೊಂಡಿದ್ದಾರೆ.
ಸಿಲಿಂಡರ್ ಸ್ಫೋಟಗೊಂಡ ಮನೆ ಸೇರಿದಂತೆ ಸುತ್ತಮುತ್ತಲಿನ ನಾಲ್ಕು ಮನೆಗಳ ಗೋಡೆಗಳು ಛಿದ್ರವಾಗಿದೆ. ಎಂಟು ವಾಹನಗಳಿಗೆ ಹಾನಿಯಾಗಿದೆ.
ಘಟನೆಯಲ್ಲಿ ಮನೆಯಲ್ಲಿದ್ದ ಕೇರಳದ ಸುನೀಲ್ ಜೋಸೆಫ್, ತಮಿಳುನಾಡಿನ ವಿಷ್ಣು ಜಯರಾಜ್ ಮತ್ತು ಸಬೀನ್ ಸನ್ನಿ ಗಾಯಗೊಂಡಿದ್ದಾರೆ. ಇಬ್ಬರಿಗೆ ಶೇ 50ರಷ್ಟು ಸುಟ್ಟು ಗಾಯಗಳಾಗಿವೆ. ಗಾಯಾಳುಗಳು ನಾರಾಯಣ ಹೆಲ್ತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂವರೂ ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ಎಕ್ಸ್‌ರೇ ವಿಭಾಗದ ನೌಕರರು. ಕಿತ್ತಗಾನಹಳ್ಳಿಯ ಕೃಷ್ಣಪ್ಪ ಲೇ ಔಟ್‌ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.
ಮೂವರೂ ಭಾನುವಾರ ರಾತ್ರಿ ಊಟ ಮುಗಿಸಿ ಮಲಗಿದ್ದಾರೆ. ಅಡುಗೆ ಮಾಡಿದ ನಂತರ ಸಿಲಿಂಡರ್ ಬಂದ್ ಮಾಡುವುದನ್ನು ಮರೆತಿದ್ದರು. ಚಳಿಯಿಂದಾಗಿ ಎಲ್ಲಾ ಕಿಟಕಿಗಳನ್ನು ಮುಚ್ಚಿ ಮಲಗಿದ್ದರು. ಸೋಮವಾರ ಬೆಳಗ್ಗೆ ಎದ್ದು ವಿದ್ಯುತ್ ದೀಪದ ಸ್ವಿಚ್ ಆನ್ ಮಾಡುತ್ತಿದ್ದಂತೆಯೇ ಸಿಲಿಂಡರ್ ಸ್ಫೋಟಗೊಂಡಿದೆ.
ನಾಲ್ಕು ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದು, ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಸ್ಫೋಟದ ತೀವ್ರತೆಗೆ ಕಿಟಕಿ ಬಾಗಿಲು, ಕಿಟಕಿ ಕಿತ್ತು ಹೋಗಿವೆ. ಮನೆಯ ಗೋಡೆ, ಸಿಮೆಂಟ್ ಕಂಬಗಳು ಕಿತ್ತು ಹೋಗಿವೆ. ಮನೆ ಗೋಡೆಯ ಸಿಮೆಂಟ್ ಇಟ್ಟಿಗೆ ಬಿದ್ದು ಮೂರು ಕಾರು ಮತ್ತು ಐದು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿವೆ.
ವಿಷಯ ತಿಳಿಯುತ್ತಿದ್ದಂತೆ ಎಲೆಕ್ಟ್ರಾನಿಕ್‌ಸಿಟಿ ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ರಕ್ಷಿಸಿದರು. ಎಎಸ್‌ಪಿ ನಾಗೇಶ್ ಕುಮಾರ್, ಡಿವೈಎಸ್‌ಪಿ ಮೋಹನ್ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.