ADVERTISEMENT

ಕಸದ ರಾಶಿಗೆ ಬೆಂಕಿ, ಆಕ್ರೋಶ

ಬೆಂಕಿಯಿಂದಾಗಿ ಮಾವಿನ ಮರಗಳಲ್ಲಿ ಸರಿಯಾಗಿ ಫಸಲು ಸಿಗುತ್ತಿಲ್ಲ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2019, 13:31 IST
Last Updated 8 ಏಪ್ರಿಲ್ 2019, 13:31 IST
ವಿಜಯಪುರದಿಂದ ದೇವನಹಳ್ಳಿಯ ಕಡೆಗೆ ಸಂಚರಿಸುವ ಮುಖ್ಯರಸ್ತೆಯ ಪಕ್ಕದಲ್ಲೆ ಇರುವ ಪಾಳು ಬಾವಿಯೊಂದಕ್ಕೆ ಸುರಿದಿರುವ ಕಸದ ರಾಶಿಗೆ ಬೆಂಕಿ ಹಚ್ಚಿರುವುದರಿಂದ ಹೊರಹೊಮ್ಮುತ್ತಿರುವ ಹೊಗೆ 
ವಿಜಯಪುರದಿಂದ ದೇವನಹಳ್ಳಿಯ ಕಡೆಗೆ ಸಂಚರಿಸುವ ಮುಖ್ಯರಸ್ತೆಯ ಪಕ್ಕದಲ್ಲೆ ಇರುವ ಪಾಳು ಬಾವಿಯೊಂದಕ್ಕೆ ಸುರಿದಿರುವ ಕಸದ ರಾಶಿಗೆ ಬೆಂಕಿ ಹಚ್ಚಿರುವುದರಿಂದ ಹೊರಹೊಮ್ಮುತ್ತಿರುವ ಹೊಗೆ    

ವಿಜಯಪುರ: ನಗರದಲ್ಲಿ ಉತ್ಪತ್ತಿಯಾದ ಕಸವನ್ನು ತಂದು ಪಾಳು ಬಾವಿಗಳಲ್ಲಿ ಸುರಿದು ಬೆಂಕಿ ಹಚ್ಚುತ್ತಿರುವುದರಿಂದ ಈ ಭಾಗದಲ್ಲಿನ ವಾತಾವರಣ ಕಲುಷಿತವಾಗುತ್ತಿದೆ ಎಂದು ಸ್ಥಳೀಯ ನಿವಾಸಿ ವೆಂಕಟರೋಣಪ್ಪ ಆರೋಪಿಸಿದರು.

ಇಲ್ಲಿನ ದೇವನಹಳ್ಳಿ ಮುಖ್ಯರಸ್ತೆಯಲ್ಲಿರುವ ಕೋರಮಂಗಲ ತಿರುವಿನ ಸಮೀಪವಿರುವ ಪಾಳು ಬಾವಿಯೊಂದಕ್ಕೆ ನಗರದಲ್ಲಿನ ಕಸವನ್ನು ಪುರಸಭೆಯವರು ಟ್ರ್ಯಾಕ್ಟರ್‌ಗಳಲ್ಲಿ ತಂದು ಸುರಿಯುತ್ತಿದ್ದಾರೆ. ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲಿಕ್ಕೆ ಸೂಕ್ತವಾದ ಜಾಗವಿಲ್ಲದ ಕಾರಣ ಮುಂದಿಡಲಾಗಿದೆ ಎಂದು ದೂರಿದರು.

ಕಸದ ರಾಶಿಗೆ ಕಿಡಿಗೇಡಿಗಳು ಬೆಂಕಿ ಹಚ್ಚುತ್ತಿರುವುದರಿಂದ ಸುತ್ತಲಿನ ಮಾವಿನ ಮರಗಳಲ್ಲಿ ಸರಿಯಾಗಿ ಫಸಲು ಬರುತ್ತಿಲ್ಲ. ಇಲ್ಲಿ ಹೊಟ್ಟೆಪಾಡಿಗಾಗಿ ಕೆಲವರು ಅಂಗಡಿಗಳನ್ನು ಇಟ್ಟುಕೊಂಡು ಜೀವನ ಮಾಡುತ್ತಿದ್ದಾರೆ. ದಟ್ಟವಾದ ಹೊಗೆಯಿಂದಾಗಿ ನೆಮ್ಮದಿಯಿಂದ ವ್ಯಾಪಾರ ವಹಿವಾಟು ಮಾಡಿಕೊಳ್ಳಲಿಕ್ಕೆ ಸಾಧ್ಯವಾಗುತ್ತಿಲ್ಲ ಎಂದರು.

ADVERTISEMENT

ಸ್ಥಳೀಯ ನಿವಾಸಿ ಸಮೀವುಲ್ಲಾ ಮಾತನಾಡಿ, ಸರ್ಕಾರವು ಹಸಿ ಕಸ, ಒಣ ಕಸವನ್ನು ವಿಂಗಡಣೆ ಮಾಡಲು ಘಟಕಗಳನ್ನು ಸ್ಥಾಪನೆ ಮಾಡಲು ಅನುದಾನ ಬಿಡುಗಡೆ ಮಾಡಿದೆ. ನಗರದಲ್ಲಿ ಒಣ ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡಿದ್ದರೂ ಅದನ್ನು ಉಪಯೋಗ ಮಾಡದ ಕಾರಣ ಕಟ್ಟಡ ವ್ಯರ್ಥವಾಗುತ್ತಿದೆ ಎಂದರು.

ಕೆಲ ವಾರ್ಡ್‌ಗಳಲ್ಲಿ ಸ್ವಲ್ಪ ದಿನಗಳ ಕಾಲ ಕಸ ವಿಂಗಡಣೆ ಮಾಡುವ ಕೆಲಸ ಮಾಡುತ್ತಿದ್ದರೂ ಈಗ ಅದನ್ನೂ ಮಾಡುತ್ತಿಲ್ಲ. ಉತ್ಪತ್ತಿಯಾದ ಕಸವನ್ನೆಲ್ಲ ತೆಗೆದುಕೊಂಡು ಹೋಗಿ ಪಾಳುಬಾವಿಗಳಿಗೆ ಸುರಿಯುತ್ತಿದ್ದಾರೆ ಎಂದು ಆರೋಪಿಸಿದರು.

ಪುರಸಭಾ ಸಿಬ್ಬಂದಿ ಬಾವಿಗಳಿಗೆ ಕಸವನ್ನು ಸುರಿದು ಬಂದ ಮೇಲೆ ಕಸದ ರಾಶಿಗಳಿಗೆ ಬೆಂಕಿ ಹಚ್ಚುತ್ತಿರುವ ಕಾರಣ ಮಾಲಿನ್ಯ ಹೆಚ್ಚಾಗುತ್ತಿದೆ. ಎಚ್.ಎನ್. ವ್ಯಾಲಿ ಯೋಜನೆಯಡಿ ಈ ಭಾಗದಲ್ಲಿನ ಕೆರೆಗಳಿಗೆ ನೀರು ತರಲಿಕ್ಕೆ ಸರ್ಕಾರ ಸಿದ್ಧತೆ ನಡೆಸಿಕೊಂಡಿದೆ. ಒಂದು ವೇಳೆ ಎಚ್.ಎನ್. ವ್ಯಾಲಿಯಾಗಲಿ, ಎತ್ತಿನಹೊಳೆ ಯೋಜನೆಯಿಂದಾಗಿ ಕೆರೆಗಳಿಗೆ ನೀರು ಬಂದಾಗ ನೀರು ಕಲುಷಿತವಾಗುವ ಆತಂಕವೂ ಹೆಚ್ಚಾಗಿದೆ ಎಂದರು.

ಕೊಳಚೆ ನೀರು ಶುದ್ಧೀಕರಣ ಮಾಡಿಕೊಡದಿದ್ದರೆ ಈ ಭಾಗ ವಿಷಮಯವಾಗುತ್ತದೆ ಎನ್ನುವ ಆತಂಕ ಕಾಡುತ್ತಿದೆ. ಈಗ ಪ್ಲಾಸ್ಟಿಕ್ ಸೇರಿದಂತೆ ಕಸದ ರಾಶಿಗಳನ್ನು ಬಾವಿಗಳಿಗೆ ಸುರಿದು ಬೆಂಕಿ ಹಚ್ಚುತ್ತಿರುವುದರಿಂದ ಅಂತರ್ಜಲ ವೃದ್ಧಿಯಾದರೆ ನೀರು ವಿಷಮಯವಾಗುವುದರಲ್ಲಿ ಅನುಮಾನವಿಲ್ಲ. ಅಧಿಕಾರಿಗಳು ಗಮನಹರಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.