ADVERTISEMENT

ಆನೇಕಲ್‌: ಅತ್ತಿಬೆಲೆಯಲ್ಲೇ ಹೂ ಮಾರುಕಟ್ಟೆ ಸ್ಥಾಪನೆಯಾಗಲಿ

ಪುಷ್ಪ ಕೃಷಿಕರ ಪಟ್ಟು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 2:55 IST
Last Updated 11 ಸೆಪ್ಟೆಂಬರ್ 2025, 2:55 IST
ಆನೇಕಲ್ ತಾಲ್ಲೂಕಿಗೆ ಭೇಟಿ ನೀಡಿದ್ದ ಫ್ಲವರ್ ಕೌನ್ಸಿಲ್ ಆಫ್ ಇಂಡಿಯಾದ ಪದಾಧಿಕಾರಿಗಳನ್ನು ಹಸಿರು ಮನೆ ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸನ್ಮಾನಿಸಲಾಯಿತು
ಆನೇಕಲ್ ತಾಲ್ಲೂಕಿಗೆ ಭೇಟಿ ನೀಡಿದ್ದ ಫ್ಲವರ್ ಕೌನ್ಸಿಲ್ ಆಫ್ ಇಂಡಿಯಾದ ಪದಾಧಿಕಾರಿಗಳನ್ನು ಹಸಿರು ಮನೆ ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸನ್ಮಾನಿಸಲಾಯಿತು   

ಆನೇಕಲ್: ಅತ್ತಿಬೆಲೆಯಲ್ಲೇ ಹೂ ಮಾರುಕಟ್ಟೆ ಸ್ಥಾಪನೆಯಾಗಬೇಕೆಂದು ಈ ಭಾಗದ ಪುಷ್ಪಕೃಷಿಕರು ಪಟ್ಟು ಹಿಡಿದಿದ್ದಾರೆ. 

ಹೂ ಮಾರುಕಟ್ಟೆಗೆ ಜಿಕೆವಿಕೆಯಲ್ಲಿ ಸ್ಥಳ ನಿಗದಿಯಾಗಿರುವುದಕ್ಕೆ ಸ್ಥಳೀಯ ರೈತರು, ಹೂ ಬೆಳೆಗಾರರು ಮತ್ತು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ವಿರೋಧ ದಿನೇ ದಿನೇ ಹೆಚ್ಚಾಗತ್ತಿದೆ.

ತಾಲ್ಲೂಕಿನ ಅತ್ತಿಬೆಲೆಯಲ್ಲೇ ಹೂವಿನ ಮಾರುಕಟ್ಟೆ ಸ್ಥಾಪನೆ ಸಂಬಂಧ ಫ್ಲವರ್‌ ಕೌನ್ಸಿಲ್‌ ಆಫ್‌ ಇಂಡಿಯಾದ ಪದಾಧಿಕಾರಿಗಳು ಆನೇಕಲ್‌ ತಾಲ್ಲೂಕು ಹಸಿರು ಮನೆ ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದರು. ಅತ್ತಿಬೆಲೆಯಲ್ಲಿ ಹೂವಿನ ಮಾರುಕಟ್ಟೆ ಸ್ಥಾಪನೆ ಆಗುವುದರಿಂದ ರೈತರಿಗೆ ಆಗುವ ಅನುಕೂಲ ಹಾಗೂ ಜಿಕೆವಿಕೆ ಸ್ಥಾಪನೆ ಆಗುವುದರಿಂದ ಆಗುವ ಅನಾನುಕೂಲ ಬಗ್ಗೆ ಚರ್ಚಿಸಲಾಯಿತು.

ADVERTISEMENT

ಫ್ಲವರ್‌ ಕೌನ್ಸಿಲ್‌ ಆಫ್‌ ಇಂಡಿಯಾದ ಶ್ರೀಕಾಂತ್‌, ರಫೀಕ್‌, ರಜೀಬ್‌, ಪೋರೆಕ್ಸ್‌ ರೌಣಕ್‌ ಸೇರಿದಂತೆ ಆರು ಮಂದಿಯ ಸದಸ್ಯರು ಆನೇಕಲ್‌ ತಾಲ್ಲೂಕಿನ ಬ್ಯಾಗಡದೇನಹಳ್ಳಿಯಲ್ಲಿ ರೈತರ ಸಭೆಯಲ್ಲಿ ಭಾಗವಹಿಸಿ ಮಾಹಿತಿ ಪಡೆದರು.

ತಾಲ್ಲೂಕಿನ ಅತ್ತಿಬೆಲೆಯ ಆರ್‌ಟಿಓ ಕಚೇರಿ ಸಮೀಪ ಹೂವಿನ ಮಾರುಕಟ್ಟೆ ಸ್ಥಾಪಿಸುವುದರಿಂದ ಹೂವಿನ ಖರೀದಿಸಲು ಬರುವ ತಮಿಳುನಾಡು, ಕೇರಳ, ಆಂಧ್ರಪ್ರದೇಶ ರೈತರಿಗೂ ಅನುಕೂಲವಾಗುತ್ತದೆ. ವೈಜ್ಞಾನಿಕವಾಗಿ ಯೋಚಿಸದೆ ಹೆಬ್ಬಾಳದ ಜಿಕೆವಿಕೆಯಲ್ಲಿ ಹೂವಿನ ಮಾರುಕಟ್ಟೆ ಸ್ಥಾಪಿಸಲು ಕ್ರಮ ವಹಿಸಿರುವುದು ಖಂಡನೀಯ ಎಂದು ಹಸಿರು ಮನೆ ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೂನಮಡಿವಾಳ ಸೋಮಣ್ಣ ಆಕ್ಷೇಪಿಸಿದರು.

ಅತ್ತಿಬೆಲೆಯಲ್ಲಿ ಹೂವಿನ ಮಾರುಕಟ್ಟೆ ಸ್ಥಾಪಿಸುವಂತೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರೈತರ ಸಮಸ್ಯೆಯ ಬಗ್ಗೆ ವಿವರಿಸಲಾಗುವುದು. ಶೀಘ್ರದಲ್ಲಿ ರೈತರ ನಿಯೋಗ ತೆರಳಿ ಮನವಿ ಸಲ್ಲಿಸಲಾಗುವುದು ಎಂದರು.

ಆನೇಕಲ್‌ ತಾಲ್ಲೂಕು ಹಸಿರು ಮನೆ ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಲೋಕೇಶ್, ಕಾರ್ಯದರ್ಶಿ ಮೋಹನ್‌, ನಿರ್ದೇಶಕರಾದ ಇ.ಮಂಜುನಾತ್‌, ಬಾಬುರೆಡ್ಡಿ, ಅಶೋಕ್‌, ರಮೇಶ್‌, ಮಧುಗೌಡ, ಕೀರ್ತನ, ರಾಜಗೋಪಾಲ್‌, ವೆಂಕಟೇಶ್‌, ರಾಮಕೃಷ್ಣಪ್ಪ, ಮಂಜುನಾಥ್‌, ಮಲ್ಲೇಶ್‌ ರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.